Advertisement

ಸಮುದಾಯ ಬದಲಾದರೆ ಏಳಿಗೆ ಸಾಧ್ಯ: ಡಾ|ಯೋಗೀಶ್‌

07:43 PM Apr 20, 2019 | Sriram |

ಮೂಡುಬಿದಿರೆ: ಮತಿಯ ಹಿಂದೆ ಮತದ ಪ್ರಭಾವ ದಟ್ಟವಾಗಿ ಒಬ್ಬರನ್ನು ಮತ್ತೂಬ್ಬರು ಸಂಶಯದಿಂದ ನೋಡುತ್ತಿರುವ ಮನೋಸ್ಥಿತಿ ಬದಲಾದರೆ ಮಾತ್ರ ಒಟ್ಟು ಸಮಾಜದ ಮುನ್ನಡೆ ಸಾಧ್ಯ. ಈ ಹಿನ್ನೆಲೆಯಲ್ಲಿ, ಸಂಘರ್ಷಗಳ ಅನುಭವದಿಂದ ಹುಟ್ಟಿದ ಅಂಬೇಡ್ಕರ್‌ ಎಂಬ ಮಹಾನ್‌ ಚೇತನದ ಮನಸ್ಸಿನಲ್ಲಿ ಅಂದು ಮೂಡಿದ ಸಮಾನತೆಯ ಪ್ರಜ್ಞೆ ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೇಪಿಸಿತು ಎಂಬುದನ್ನು ಗಮನಿಸಬೇಕಾಗಿದೆ ಎಂದು ಆಳ್ವಾಸ್‌ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ| ಯೋಗೀಶ್‌ ಕೈರೋಡಿ ನುಡಿದರು.

Advertisement

ಅವರು ಆಳ್ವಾಸ್‌ ಪದವಿ ಕಾಲೇಜಿನ ಐಕ್ಯೂಎಸಿ ವತಿಯಿಂದ ಆಯೋಜಿಸಲಾಗಿದ್ದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ನಮ್ಮ ಇಂದಿನ ದಿನ ನಿತ್ಯದ ಜೀವನ ನಮ್ಮ ಸಂವಿಧಾನದ ತಳಹದಿಯ ಮೇಲೆ ನಿಂತಿದೆ. ಅಂದು ಅಂಬೇಡ್ಕರ್‌ ಸಮಸ್ಯೆಯ ಭಾಗವಾಗಿ, ಕಷ್ಟಕಾರ್ಪಣ್ಯಗಳನ್ನು ಎದುರಿಸಿದ್ದರಿಂದಾಗಿ ಸಮಾಜದಲ್ಲಿನ ಶೋಷಿತರ ಬವಣೆಯನ್ನು ಅರಿಯಲು ಸಾಧ್ಯವಾಯಿತು. ಶೋಷಿತರಿಗೆ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಪರಿಸ್ಥಿತಿಯನ್ನು ತರಲು ಪ್ರೇರೇಪಿಸಿತು ಎಂದು ಅವರು ಹೇಳಿದರು.

ಯಾವುದೇ ಸಮಾಜದಲ್ಲಿ ಒಂದಿಬ್ಬರ ಮನಸ್ಥಿತಿ ಬದಲಾದರೆ ಇಡೀ ಸಮಾಜ ಬದಲಾವಣೆಯನ್ನು ಹೊಂದಲು ಸಾಧ್ಯವಿಲ್ಲ, ಇಡೀ ಸಮುದಾಯವೇ ಬದಲಾದರೆ ಸರ್ವರ ಏಳಿಗೆ ಖಂಡಿತ ಸಾಧ್ಯ. ಆ ಹಿನ್ನೆಲೆಯಲ್ಲಿ ಅಂಬೇಡ್ಕರ್‌ ಚಿಂತನೆ ಸದಾ ನಮಗೆಲ್ಲರಿಗೂ ಉತ್ತಮ ಮಾರ್ಗದರ್ಶಿ ಎಂದು ಅವರು ಹೇಳಿದರು.

ಐಕ್ಯೂಎಸಿ ಸಂಯೋಜಕ ಡಾ| ರಾಮ್‌ ಭಟ್‌, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ| ಮೌಲ್ಯಾ ಜೀವನ್‌ರಾಂ ನಿರೂಪಿಸಿದರು.

Advertisement

ಮನಸ್ಸಿನಿಂದ ತೊಲಗಿಸಿ
ಅಧ್ಯ ಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ| ಕುರಿಯನ್‌ ಮಾತನಾಡಿ, ಅಸ್ಪ್ರಶ್ಯತೆಯ ಭಾವನೆ ಮೊದಲು ನಮ್ಮ ಮನಸ್ಸಿನಿಂದ ತೊಲಗಬೇಕು. ನಮ್ಮ ಮನಸ್ಸಿನೊಳಗಿದ್ದ , ಇರುವ ಅಸ್ಪ್ರಶ್ಯರು ಎಂದು ಇದ್ದ ವರ್ಗ ಈಗಲೂ ಅದೇ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾವು ವಿಜ್ಞಾನ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ, ತ್ಯಾಜ್ಯ ನಿರ್ವಹಣೆಯ ವಿಧಾನಗಳಲ್ಲಿ ಬದಲಾವಣೆ ಆಗಿಲ್ಲ; ಮನುಷ್ಯರೇ ಮ್ಯಾನ್‌ ಹೋಲ್‌ಗ‌ಳಿಗೆ ಇಳಿಯುವ ಪರಿಸ್ಥಿತಿ ಇಗಲೂ ಚಾಲ್ತಿಯಲ್ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next