ದುಬಾೖ: ಆಸ್ಟ್ರೇಲಿಯ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಂಶಯಾಸ್ಪದ ಬೌಲಿಂಗ್ ಮಾಡಿದ ಅಂಬಾಟಿ ರಾಯುಡು ಅವರಿಗೆ ಐಸಿಸಿ ನಿಷೇಧ ಹೇರಿದೆ. ಹೀಗಾಗಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸದ್ಯ ಬೌಲಿಂಗ್ ನಡೆಸುವ ಹಾಗಿಲ್ಲ.
ರಾಯುಡು ಅವರಿಗೆ ತಮ್ಮ ಬೌಲಿಂಗ್ ಶೈಲಿಯನ್ನು ಸರಿಪಡಿಸಿಕೊಳ್ಳಲು ಐಸಿಸಿ 14 ದಿನಗಳ ಗಡವು ನೀಡಿತ್ತು. ಆದರೆ ರಾಯುಡು ಇದರತ್ತ ಗಮನಹರಿಸದ ಕಾರಣ ಐಸಿಸಿ ನಿಷೇಧದ ನಿರ್ಧಾರಕ್ಕೆ ಬಂದಿದೆ.
“ರಾಯುಡು ಬೌಲಿಂಗ್ ಶೈಲಿಯನ್ನು ಪರೀಕ್ಷೆಗೊಳಪಡಿಸಲು ಐಸಿಸಿ 14 ದಿನಗಳ ಗಡುವು ನೀಡಿತ್ತು. ಆದರೆ ಇದಕ್ಕೆ ಸ್ಪಂದಿಸದ ಕಾರಣ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೌಲಿಂಗ್ ನಿಷೇಧ ಹೇರಲಾಗಿದೆ. ಈ ನಿಷೇಧ ಅವರ ಬೌಲಿಂಗ್ ಶೈಲಿ ಪರೀಕ್ಷೆಗೆ ಒಳಪಡುವ ವರೆಗೆ ಜಾರಿಯಲ್ಲಿರಲಿದೆ. ಐಸಿಸಿ ನಿಯಮದಂತೆ ಬೌಲಿಂಗ್ ಮಾಡಿದ ಅನಂತರ ಇದನ್ನು ರದ್ಧುಗೊಳಿಸಲಾಗುತ್ತದೆ’ ಎಂದು ಐಸಿಸಿ ತಿಳಿಸಿದೆ.
ಭಾರತಕ್ಕೇನೂ ನಷ್ಟವಿಲ್ಲ
ಅಂಬಾಟಿ ರಾಯುಡು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ನೇ ಹೊರತು ಸ್ಪೆಷಲಿಸ್ಟ್ ಬೌಲರ್ ಅಲ್ಲ. ಪಾರ್ಟ್‌ಟೈಮ್ ಬೌಲರ್ ಆಗಿಯೂ ಯಶಸ್ಸು ಕಂಡವರಲ್ಲ. ರಾಯುಡು ಇಲ್ಲಿಯ ವರೆಗೆ ಆಡಿರುವ 49 ಏಕದಿನ ಪಂದ್ಯಗಳಲ್ಲಿ 121 ಎಸೆತಗಳನ್ನಷ್ಟೇ ಹಾಕಿದ್ದು, 3 ವಿಕೆಟ್ ಸಂಪಾದಿಸಿದ್ದಾರೆ. ಹೀಗಾಗಿ ಇವರಿಗೆ ಬೌಲಿಂಗ್ ನಿಷೇಧ ಹೇರಿದರೆ ಭಾರತಕ್ಕೇನೂ ನಷ್ಟವಿಲ್ಲ ಎಂಬುದು ಅನೇಕರ ಲೆಕ್ಕಾಚಾರ.