ಅಂಬರ್‌ನಾಥ್: ಎಸ್‌ಎಸ್‌ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಒಂದು ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಆತಂಕಪಡದೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ ಸಫಲತೆಯನ್ನು ಕಾಣಬೇಕು. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಶಿಕ್ಷಣ ಸಂಸ್ಥೆ, ಹೆತ್ತವರು ಹಾಗೂ ಗುರುಗಳಿಗೆ ಹೆಸರು ತರಬೇಕು. ಮಕ್ಕಳು ಕೇವಲ ಶಿಕ್ಷಣವನ್ನು ಪಡೆದರೆ ಸಾಲದು, ಸುಸಂಸ್ಕೃತ ಬದುಕನ್ನು ರೂಪಿಸಿಕೊಳ್ಳಬೇಕು. ರಾಷ್ಟ್ರದ Óತøಜೆಗಳಾಗಿ ಬಾಳಲು ಮುಂದಾಗಬೇಕು ಎಂದು ಉದ್ಯಮಿ, ಅಂಬರ್‌ನಾಥ್ ಕರ್ನಾಟಕ ವೈಭವ ಸಂಸ್ಥೆಯ ಅಧ್ಯಕ್ಷ ಆರ್. ಬಿ. ಹೆಬ್ಬಳ್ಳಿ ನುಡಿದರು.
ಫೆ. 3ರಂದು ಅಂಬರ್‌ನಾಥ್ ಎಸ್. ನಿಜಲಿಂಗಪ್ಪ ಕನ್ನಡ ಶಾಲಾ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಬೇಕು ಎಂದು ನುಡಿದು ಶುಭ ಹಾರೈಸಿದರು.
ಶಾಲಾ ಮಕ್ಕಳು ಪ್ರಾರ್ಥನೆಗೈದರು. ಶಾಲಾ ಮುಖ್ಯ ಶಿಕ್ಷಕ ವಿಜಯ ಕುಮಾರ್ ಖಾದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಪದಾಧಿಕಾರಿಗಳಾದ ಎಚ್.ಆರ್.ಚಲವಾದಿ, ಬಸವಂತ ಪೂಜಾರಿ, ಚಿದಾನಂದ ಚಲವಾದಿ, ಶಿಕ್ಷಕಿಯರಾದ ಕರುಣಾ ಜಲದೆ, ಎಸ್. ಬಿ. ಶಿಂಧೆ, ಎ. ಕೆ. ಹೊನ್ನಳ್ಳಿ, ಅನಿತಾ ರಾಜೊಳ್ಳಿ ಅವರು ಮಾತನಾಡಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎ. ಡಿ. ಹೊರ್ತಿಕರ ಕಾರ್ಯಕ್ರಮ ನಿರ್ವಹಿಸಿದರು. ಎಸ್. ಬಿ. ಮಡಿವಾಳ ವಂದಿಸಿದರು.