ಬೆಂಗಳೂರು: ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿಯನ್ನೂ ಹಾಕದೆ, ಸ್ಪರ್ಧೆ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಪಕ್ಷದ ನಾಯಕರು
ಸೂಚಿಸಿದ್ದರೂ ತಲೆಕೆಡಿಸಿಕೊಳ್ಳದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಅಂಬರೀಶ್, ಹಾಲಿ ಶಾಸಕರಿಗೆ ಟಿಕೆಟ್ ಕೊಡುವುದಾದರೆ ನನಗೂ ಕೊಡುತ್ತಾರೆಂಬ ಧೋರಣೆಯಲ್ಲಿದ್ದಾರೆ.
ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸುವ ಅಂಬರೀಶ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ, ಇಲ್ಲವೇ ಎಂಬುದು ಕುತೂಹಲ ಕೆರಳಿಸಿದೆ.
ಆಕಾಂಕ್ಷಿಗಳು ಟಿಕೆಟ್‌ಗೆ ಅರ್ಜಿ ಸಲ್ಲಿಸಬೇಕೆಂದು ಪಕ್ಷ ಸೂಚಿಸಿದ್ದರೂ ಅಂಬರೀಶ್ ಮಾತ್ರ ಅರ್ಜಿ ಸಲ್ಲಿಸಿಲ್ಲ. ಈ ಮಧ್ಯೆ ಆರೋಗ್ಯದ ಕಾರಣದಿಂದಾಗಿ ಅಂಬರೀಶ್ ಸ್ಪರ್ಧಿಸುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿದೆ. ಇನ್ನೊಂದೆಡೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅಭಿಪ್ರಾಯ ತಿಳಿಸುವಂತೆ ಕಾಂಗ್ರೆಸ್ ನಾಯಕರು ಕೇಳಿಕೊಂಡಿದ್ದರೂ ಮೌನ ಮುರಿದಿಲ್ಲ.
ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕೆಂದು ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ. ನಾನು ಹಾಲಿ ಶಾಸಕ. ಹೀಗಾಗಿ ನನಗೆ ಟಿಕೆಟ್ ಸಿಗುತ್ತದೆಂದು ಅವರು ತಮ್ಮ ಆಪ್ತರ ಮುಂದೆ ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.
ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಾನು ಎಲ್ಲಿಯೂ ಮತ್ತು ಯಾರ ಬಳಿಯೂ ಹೇಳಿಲ್ಲ. ನನಗೆ ಟಿಕೆಟ್ ಕೊಡುವ ವಿಚಾರ ಪಕ್ಷಕ್ಕೆ ಬಿಟ್ಟಿದ್ದು. ಆದರೆ,ಮಾಧ್ಯಮಗಳಲ್ಲಿ ಏನೇನೋ ವರದಿಗಳು ಬರುತ್ತಿವೆ.ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ ಎಂದು ಬೆಂಬಲಿಗರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಲ್ಲೇ ಇದ್ದಾರೆ: ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸದ ಕಾರಣ ಸ್ಪರ್ಧೆಯ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸಲು ಅಂಬರೀಶ್
ಅವರನ್ನು ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚಿಸಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅವರು ಬೆಂಗಳೂರಿನಲ್ಲೇ ಇದ್ದಾರೆ. ದೆಹಲಿಗೆ ಹೋಗಿಲ್ಲ. ಅಂತಹ ಯಾವುದೇ ಬುಲಾವ್ ಬಂದಿಲ್ಲ ಎಂದೂ ಅವರ ಆಪ್ತ ಮೂಲಗಳು ತಿಳಿಸಿವೆ.