ರೆಬೆಲ್‌ಸ್ಟಾರ್ ಅಂಬರೀಶ್ ಅಭಿನಯದ “ಅಂತ’ ಸಿನಿಮಾದ ಬಗ್ಗೆ ಅವರ ಅಭಿಮಾನಿಗಳಿಗೆ ಗೊತ್ತೇ ಇದೆ. ಅಂಬರೀಶ್ ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಿದ “ಅಂತ’ ಸಿನಿಮಾವನ್ನು ಅದರಲ್ಲಿ ಅಂಬರೀಶ್ ಅವರ ಡೈಲಾಗ್ ಗಳನ್ನು ಅಭಿಮಾನಿಗಳು ಆಗಾಗ್ಗೆ ಮೆಲುಕು ಹಾಕುತ್ತಲೇ ಇರುತ್ತಾರೆ. ಈಗ ಅಂಬರೀಶ್ ಅಭಿನಯದ “ಅಂತ’ ಸಿನಿಮಾದ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಅಂಬರೀಶ್ ಹುಟ್ಟುಹಬ್ಬದ ದಿನದಂದು “ಅಂತ’ ಸಿನಿಮಾ ಮರು ಬಿಡುಗಡೆ ಆಗುತ್ತದೆ.
ಹೌದು, ಇದೇ ಮೇ. 29 ಅಂಬರೀಶ್ ಅವರ ಹುಟ್ಟುಹಬ್ಬವಿದೆ. ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ “ಅಂತ’ ಸಿನಿಮಾ ಮೇ. 26ರ ಶುಕ್ರವಾರದಂದು ಮರು ಬಿಡುಗಡೆ ಯಾಗುತ್ತಿದೆ. ಹೆಚ್.ಕೆ ಅನಂತ್ ರಾವ್ ಅವರ ಸರಣಿಯ ಕಥೆಗಳನ್ನು ಆಧರಿಸಿ ತಯಾರಾದ “ಅಂತ’ ಸಿನಿಮಾವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು.
1981ರಲ್ಲಿ, “ಅಂತ’ ಸಿನಿಮಾ ಮೊದಲ ಬಾರಿಗೆ ಬಿಡುಗಡೆ ಆಗಿದ್ದು, ಇದೀಗ ಸುಮಾರು ನಾಲ್ಕು ದಶಕಗಳ ಬಳಿಕ ಸಿನಿಮಾ ಕಲರ್ ಸ್ಕೋಪ್ ಮತ್ತು 5.1 ಸೌಂಡ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಮತ್ತೆ ಬಿಡುಗಡೆಯಾಗುತ್ತಿದೆ.
ಇನ್ನು “ಅಂತ’ ಸಿನಿಮಾದ ಮರು ಬಿಡುಗಡೆಯ ಬಗ್ಗೆ ಮಾತನಾಡಿರುವ ಚಿತ್ರತಂಡ, ಅಂಬರೀಶ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರಿಗೆ ಉಡುಗೊರೆ ಎನ್ನುವಂತೆ ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದೇವೆ. ಅತ್ಯುತ್ತಮ ತಂತ್ರಜ್ಞಾನದ ಮೂಲಕ “ಅಂತ’ ಸಿನಿಮಾಕ್ಕೆ ಮತ್ತಷ್ಟು ತುಂಬಿ ತೆರೆಗೆ ತರಲಾಗುತ್ತಿದ್ದು, ಹೊಸ ರೂಪದಲ್ಲಿ ಬರುತ್ತಿರುವ “ಅಂತ’ ಅಂಬರೀಶ್ ಅಭಿಮಾನಿಗಳಿಗೆ ಇಷ್ಟವಾಗಲಿದೆ ಎಂಬ ಭರವಸೆಯ ಮಾತುಗಳನ್ನಾಡಿದೆ.