ಬೆಂಗಳೂರು/ಮಂಡ್ಯ: ಮಾಜಿ ಸಚಿವ, ನಟ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ ಇನ್ನೂ ಕಗ್ಗಂಟಾಗಿ ಮುಂದುವರಿದಿದೆ. ಮತ್ತೊಂದೆಡೆ ಅಂಬರೀಶ್ ಈ ಬಾರಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.
ಈಗಾಗಲೇ ಅಂಬರೀಶ್ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿದೆ. ಆದರೆ ಅಂಬರೀಶ್ ಈವರೆಗೂ ಬಿ ಫಾರಂ ಸಲ್ಲಿಸಿಲ್ಲ. ಅಲ್ಲದೇ ಅಂಬಿ ಮನವೊಲಿಸಲು ಸಿಎಂ ಸಿದ್ದರಾಮಯ್ಯನವರು ನಡೆಸಿದ ಪ್ರಯತ್ನ ಕೂಡಾ ವಿಫಲವಾಗಿದೆ.
ಈ ಹಿನ್ನೆಲೆಯಲ್ಲಿ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಾರೋ ಅಥವಾ ಇಲ್ಲವೋ ಎಂಬ ಗೊಂದಲ ಕಾರ್ಯಕರ್ತರದಲ್ಲಿ ಮೂಡಿದೆ. ಏತನ್ಮಧ್ಯೆ ಅಂಬರೀಶ್ ಅವರು ಮಂಡ್ಯದಿಂದ ಸ್ಪರ್ಧಿಸೋದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆನ್ನಲಾಗಿದೆ. ತನ್ನ ಬದಲಿಗೆ ಆಪ್ತ ಅಮರಾವತಿ ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಅವರಿಗೆ ನಿನ್ನೆ ರಾತ್ರಿ ದೂರವಾಣಿ ಕರೆ ಮಾಡಿ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಮಂಡ್ಯದಿಂದ ಅಂಬರೀಶ್ ಸ್ಪರ್ಧಿಸುತ್ತಿಲ್ಲ ಎಂಬ ವಿಚಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಬೆಂಗಳೂರು ಮತ್ತು ಮೈಸೂರಿಗೆ ದೌಡಾಯಿಸಿದ್ದಾರೆ. ಮಾಜಿ ಸಚಿವ ಆತ್ಮಾನಂದ, ಸಿದ್ಧಾರೂಢ ಸತೀಶ್, ಅಮರಾವತಿ ಚಂದ್ರಶೇಖರ್, ಚಿದಂಬರ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಅಮರಾವತಿಗೆ ಟಿಕೆಟ್ ಕೊಡಬೇಡಿ:
ಅಂಬರೀಶ್ ಅವರು ಕ್ಷೇತ್ರದಲ್ಲಿ ಸ್ಪರ್ಧಿಸಲಿ ಅಥವಾ ಬಿಡಲಿ. ಯಾವುದೇ ಕಾರಣಕ್ಕೂ ಅಮರಾವತಿ ಚಂದ್ರಶೇಖರ್ ಗೆ ಟಿಕೆಟ್ ಕೊಡಬಾರದು ಎಂದು ಮಂಡ್ಯ ನಗರಸಭಾ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಕೊಡಲು ಸಿದ್ಧರಾಗಿದ್ದಾರೆ.