ಹೊಸದಿಲ್ಲಿ : 44.8 ಬಿಲಿಯ ಡಾಲರ್ ಆಸ್ತಿಪಾಸ್ತಿ ಹೊಂದಿರುವ ಅಂಬಾನಿಗಳು ಏಶ್ಯದ ಅತ್ಯಂತ ಸಿರಿವಂತ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪೋರ್ಬ್ಸ್ ಪ್ರಕಟಿಸಿರುವ ಪಟ್ಟಿಯ ಪ್ರಕಾರ ಮುಕೇಶ್ ಅಂಬಾನಿ ಕುಟುಂಬದ ಆಸ್ತಿ ಮೌಲ್ಯ 19 ಬಿಲಿಯ ಡಾಲರ್‌ನಿಂದ 44.8 ಬಿಲಿಯ ಡಾಲರ್‌ಗೆ ಏರಿದೆ. ಆ ಮೂಲಕ ಅಂಬಾನಿ ಕುಟುಂಬ ಸ್ಯಾಮ್ಸಂಗ್‌ನ ಲೀ ಕುಟುಂಬವನ್ನು ಕೆಳಕ್ಕೆ ತಳ್ಳಿ ನಂಬರ್ ಒನ್ ಸ್ಥಾನವನ್ನು ಆಕ್ರಮಿಸಿಕೊಂಡಿದೆ.
ಏಶ್ಯ ಅತೀ ಸಿರಿವಂತ ಹತ್ತು ಕುಟುಂಬಗಳ ಪೈಕಿ ಅಂಬಾನಿಯವರದ್ದು ಏಕೈಕ ಭಾರತೀಯ ಕುಟುಂಬವಾಗಿದೆ.
ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟ ಹೊರತಾಗಿಯೂ ಕೊರಿಯದ ಲೀ ಕುಟುಂಬದ ಆಸ್ತಿ ಮೌಲ್ಯ ಈ ವರ್ಷ 11.2 ಬಿಲಿಯ ಡಾಲರ್ ಏರಿ 40.8 ಬಿಲಿಯ ಡಾಲರ್‌ಗೆ ತಲುಪಿದೆ. ಲೀ ಕುಟುಂಬದ ಸ್ಯಾಮ್ಸಂಗ್ ಇಲೆಕ್ಟ್ರಾನಿಕ್ಸ್ ಶೇರುಗಳು ಕಳೆದ ಒಂದು ವರ್ಷದಲ್ಲಿ ಶೇ.75ರಷ್ಟು ಏರಿರುವುದು ಗಮನಾರ್ಹವಾಗಿದೆ.
Related Articles
ಫೋರ್ಬ್ಸ್ ಪಟ್ಟಿಮಾಡಿರುವ ಏಶ್ಯದ 50 ಅತೀ ಸಿರಿವಂತ ಕುಟುಂಬಗಳಲ್ಲಿ ಹಾಂಕಾಂಗ್‌ನ ಕ್ವಾಕ್ ಕುಟುಂಬ 3ನೇ ಸ್ಥಾನವನ್ನು ಪಡೆದಿದೆ. ಏಶ್ಯದ ಅತೀ ಸಿರಿವಂತ ರಿಯಲ್ ಎಸ್ಟೇಟ್ ಕುಟುಂಬವಾಗಿರುವ ಇದು ಸನ್ ಹುಂಗ್ ಕಾಯ್ ಪ್ರಾಪರ್ಟೀಸ್ ಸಂಸ್ಥೆಯನ್ನು ನಿಯಂತ್ರಿಸುತ್ತಿದೆ. ಇವರ ಕುಟುಂಬದ ಆಸ್ತಿ ಈ ವರ್ಷ 40.4 ಬಿಲಿಯ ಡಾಲರ್‌ಗೆ ಏರಿದೆ.
ಥಾಯ್ಲಂಡ್‌ನ ಶೆವರ್‌ನಾಟ್ ಕುಟುಂಬ, ಶರೋನ್ ಪೋಕ್‌ಫಾಂಡ್ ಸಮೂಹದ ಒಡೆತನ ಹೊಂದಿದ್ದು, ಇದು 36.6 ಬಿಲಿಯ ಡಾಲರ್ ಆಸ್ತಿಪಾಸ್ತಿಯೊಂದಿಗೆ 4ನೇ ಸ್ಥಾನವನ್ನು ಪಡೆದಿದೆ.
ಫೋರ್ಬ್ಸ್ ಪಟ್ಟಿಗೆ ಸೇರಿರುವ ಇತರ ಭಾರತೀಯ ಕುಟುಂಬಗಳೆಂದರೆ : ಗೋದ್ರೇಜ್ ಕುಟುಂಬ (20ನೇ ಸ್ಥಾನ 14 ಬಿಲಿಯ ಡಾ.), ಬಜಾಜ್ ಕುಟುಂಬ (26ನೇ ಸ್ಥಾನ, 9.3 ಬಿಲಿಯ ಡಾ.), ಜಿಂದಾಲ್ ಕುಟುಂಬ 32ನೇ ಸ್ಥಾನ 7.7 ಬಿಲಿಯ ಡಾಲರ್, ಬರ್ಮನ್ ಕುಟುಂಬ (35ನೇ ಸ್ಥಾನ 7.05 ಬಿಲಿಯ), ಈಶರ್ ಮೋಟರ್‌ನ ಲಾಲ್ ಕುಟುಂಬ (36ನೇ ಸ್ಥಾನ 7 ಬಿಲಿಯ), ಶ್ರೀ ಸಿಮೆಂಟ್ಸ್ ಬಂಗೂರ್ ಕುಟುಂಬ (37ನೇ ಸ್ಥಾನ, 6.7 ಬಿಲಿಯ).