Advertisement

ಅಮೆಜಾನ್ ಗೆ ತಲೆನೋವಾದ ‘ಅಲೆಕ್ಸಾ’ ಮತ್ತು ‘94% ರಿಯಾಯಿತಿ’

02:44 PM Jul 07, 2021 | Team Udayavani |

ಜಗತ್ಪ್ರಸಿದ್ಧ ಅಮೆಜಾನ್ ಇತ್ತೀಚಿಗೆ ಕೆಲವು ಸಲ್ಲದ ಕಾರಣಗಳಿಗೆ ಸುದ್ದಿಯಾಗುತ್ತಿದೆ‌‌. ಇಷ್ಟು ದಿನ ಈ ಅಮೆರಿಕಾದ ಬಹುರಾಷ್ಟ್ರೀಯ ಸಂಸ್ಥೆ ಇ ಕಾಮರ್ಸ್, ಕ್ಲೌಡ್ ಕಂಪ್ಯೂಟಿಂಗ್, ಡಿಜಿಟಲ್ ಸ್ಟ್ರೀಮಿಂಗ್ , ಮತ್ತು ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಗೆ ಹೆಸರುವಾಸಿಯಾಗಿತ್ತು. ಮಾತ್ರವಲ್ಲದೆ ಅಮೆರಿಕಾದ ಟಾಪ್- 5 ಕಂಪೆನಿಗಳ ಸಾಲಿನಲ್ಲಿ ಸ್ಥಾನ ಪಡೆದಿತ್ತು. ( ಉಳಿದ ನಾಲ್ಕು ಗೂಗಲ್, ಫೇಸ್ ಬುಕ್, ಮೈಕ್ರೊಸಾಫ್ಟ್‌, ಆ್ಯಪಲ್‌)

Advertisement

ಹಾಗಾದರೆ ಅಮೆಜಾನ್ ಯಾವ ಸಲ್ಲದ ಕಾರಣಗಳಿಗೆ ಸುದ್ದಿಯಾಗುತ್ತಿದೆ ಎಂಬುದನ್ನು ಗಮನಿಸೋಣ. ಮೊದಲನೆಯದಾಗಿ ಅಮೆಜಾನ್ ವಾಯ್ಸ್ ಅಸಿಸ್ಟೆಂಟ್ ಗಳಲ್ಲಿ ಒಂದಾದ ಅಲೆಕ್ಸಾ ಕಾರಣದಿಂದ. ಇಲ್ಲಿ ಅಲೆಕ್ಸಾ ಯಾವುದೇ ತಾಂತ್ರಿಕ ಅಥವಾ ಇತರೆ ಭದ್ರತಾ ಸಮಸ್ಯೆಗಳಿಂದ ಸುದ್ದಿಯಾಗಿಲ್ಲ. ಬದಲಾಗಿ ‘ಅಲೆಕ್ಸಾ’ ಎಂಬ ಹೆಸರೇ ಅಮೆಜಾನ್ ಗೆ ತಲೆನೋವಾಗಿದೆ.

ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಅಲೆಕ್ಸಾ ಎಂಬ ಹೆಸರು ಸಾಮಾನ್ಯ. ಕೆಲವೊಂದು ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಅಲೆಕ್ಸಾ ಎಂದು ಹೆಸರಿಟ್ಟಿರುತ್ತಾರೆ. ಇದೇ ಕಾರಣದಿಂದಾಗಿ ಅಲೆಕ್ಸಾ ಹೆಸರಿರುವವರನ್ನು ಶಾಲೆಗಳಲ್ಲಿ ಸಹಪಾಠಿಗಳು ಛೇಡಿಸುವ, ವ್ಯಂಗ್ಯವಾಡುವ ಕೆಲಸದಲ್ಲಿ ತೊಡಗಿದ್ದಾರಂತೆ…ಇದರ ಜೊತೆಗೆ ವಾಯ್ಸ್ ಅಸಿಸ್ಟೆಂಟ್ ಅಲೆಕ್ಸಾ ಜೊತೆ ವ್ಯವಹರಿಸುವಂತೆ ಅವರ ಜೊತೆಗೆ ಮಾತನಾಡುವುದರಿಂದ, ಬೇಸತ್ತ ಹಲವರು ಶಾಲೆಯನ್ನು ತೊರೆದಿದ್ದಾರೆ. ಮಾತ್ರವಲ್ಲದೆ ಬೇರೆ ಶಾಲೆಯಲ್ಲಿ ದಾಖಲಾಗಿದ್ಸಾರೆ‌‌‌‌.

ತಮ್ಮ ಮಕ್ಕಳು ಸಹಪಾಠಿಗಳಿಂದ ನಿರಂತರ ಶೋಷಣೆಗೊಳಗಾಗುತ್ತಿರುವುದನ್ನು ಗಮನಿಸಿದ ಪೋಷಕರು, ಅಮೆಜಾನ್ ವಾಯ್ಸ್ ಅಸಿಸ್ಟೆಂಟ್ ಗೆ ಮಾನವರ ಹೆಸರಿನ ಬದಲು ಬೇರೆ ಹೆಸರನ್ನು ಬಳಸುವಂತೆ ಅಮೆಜಾನ್ ಬಳಿ ಕೋರಿಕೊಂಡಿದ್ದಾರೆ. ವಾಯ್ಸ್ ಅಸಿಸ್ಟೆಂಟ್ ಮಾದರಿಯಲ್ಲೆ ತಮ್ಮ ಮಕ್ಕಳನ್ನು ಬಿಂಬಿಸುತ್ತಿರುವುದು, ಅವರ ಮಾನಸಿಕ ಸ್ಥಿತಿಗತಿಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.

ಅಮೆಜಾನ್ ವಾಯ್ಸ್ ಅಸಿಸ್ಟೆಂಟ್ ‘ಅಲೆಕ್ಸಾ’ 2014 ರಿಂದಲೂ ಬಳಕೆಯಲ್ಲಿದೆ‌. ಇದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇಂದು ಅಮೆರಿಕಾದಲ್ಲೇ 40 ಮಿಲಿಯನ್ ಅಲೆಕ್ಸಾ ಬಳಕೆದಾರರಿದ್ದಾರೆ.

Advertisement

ದುಬಾರಿ ಎಸಿಯನ್ನುಶೇ. 94ರಷ್ಟು ರಿಯಾಯಿತಿ ದರದಲ್ಲಿ ಮಾರಿದ ಅಮೆಜಾನ್‌!

ಅಮೆಜಾನ್‌, ತೋಷಿಬಾ ಏರ್‌ಕಂಡೀಷನ್‌ನನ್ನು ಅಚಾತುರ್ಯದಿಂದ ಶೇ. 94ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಿ ಪೇಚಿಗೆ ಸಿಲುಕಿದೆ. 1.8 ಟನ್‌ ಸಾಮರ್ಥ್ಯದ 5 ಸ್ಟಾರ್‌ ರೇಟಿಂಗ್‌ ಇರುವ ಈ ಎಸಿಯ ಅಸಲಿ ಬೆಲೆ 96,700 ರೂ. ಆಗಿದ್ದು ಪ್ರತಿದಿನ ಯಾವ್ಯಾವ ಸಾಮಗ್ರಿಗಳಿಗೆ ತಮ್ಮಲ್ಲಿ ಡಿಸ್ಕೌಂಟ್‌ ಇದೆಯೆಂದು ಲಿಸ್ಟಿಂಗ್‌ ಮಾಡುವಾಗ, ಈ ಎಸಿ ಬೆಲೆಯನ್ನು 5,900 ರೂ.ಗಳಿಗೆ ಇಳಿಸಿರುವುದಾಗಿ ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿತ್ತು.

ವೆಬ್‌ಸೈಟ್‌ನಲ್ಲಿ ಇದನ್ನು ನೋಡಿದ ಗ್ರಾಹಕರೊಬ್ಬರು ಕೂಡಲೇ ಆರ್ಡರ್‌ ಮಾಡಿ ಇದನ್ನು ಕೊಂಡಿದ್ದಾರೆ. ಕಂಪನಿಯ ಈ ಪ್ರಮಾದದಿಂದ ಗ್ರಾಹಕನಿಗೆ ಲಾಭವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next