ಧಾರವಾಡ : ಅಮರನಾಥ ಯಾತ್ರೆಗೆ ಹೋಗಿದ್ದ ಧಾರವಾಡ ಜಿಲ್ಲೆಯ ಐವರು ಯಾತ್ರಿಕರು ಪಂಚತರಣಿ ರಸ್ತೆಯಲ್ಲಿ ಸಿಲುಕಿದ್ದು, ಅವರ ರಕ್ಷಣಾ ಕಾರ್ಯ ಸಾಗಿದೆ.
ಕರಡೀಗುಡ್ಡ ಗ್ರಾಮದ ವಿಠ್ಠಲ ಬಾಚಗುಂಡೆ, ರಾಕೇಶ ನಾಝರೆ, ನಾಗರಾಜ ಹಳಕಟ್ಟಿ, ಹರೀಶ ಸಾಳುಂಕೆ, ಮಡಿವಾಳಪ್ಪ ಕೊಟಬಾಗಿ ಎಂಬುವರೇ ಸಿಲುಕಿದವರು. ಅಮರನಾಥದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ಬಂದ್ ಆಗಿದೆ. ಜು.3 ರಂದು ಧಾರವಾಡದಿಂದ ಹೋಗಿದ್ದ ಈ ಐವರು ಜು.6 ರಂದು ಅಮರನಾಥ ದರ್ಶನ ಮುಗಿಸಿ ವಾಪಸ್ ಬರುವ ವೇಳೆ ವಿಪರೀತ ಮಳೆಯಿಂದ ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನಲೆಯಲ್ಲಿ ಪ್ರವಾಸಕ್ಕೆ ಆಗಮಿಸಿದ್ದ ಎಲ್ಲರಿಗೂ ಟೆಂಟ್‌ನಲ್ಲಿ ಸೇನಾ ಪಡೆ ಸಿಬಂದಿ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ ಅಲ್ಲಿನ ಕೊರೆವ ಚಳಿ ಸೇರಿ ಇತರ ಸಮಸ್ಯೆಗಳಿಂದ ಐವರಲ್ಲಿ ಕೆಲ ಆರೋಗ್ಯ ಸಮಸ್ಯೆಗಳು ಎದುರಾಗಿವೆ ಎಂದು ತಿಳಿದು ಬಂದಿದೆ.
ಯಾತ್ರಾರ್ಥಿಗಳ ಜತೆಗೆ ಸರ್ಕಾರದ ಅಽಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿ ಕರೆ ತರುವ ಪ್ರಯತ್ನ ನಡೆದಿದೆ. ಅಮರನಾಥದಲ್ಲಿ ನಡೆದಿ ಘಟನೆಯಿಂದ ತಮ್ಮ ಕುಟುಂಬ ಸದಸ್ಯರು ಸಿಲುಕಿದ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ತೀವ್ರ ಆತಂಕಕ್ಕೀಡಾಗಿದ್ದರು. ಸದ್ಯಕ್ಕೆ ಪ್ರಾಣಾಪಾಯ ಇಲ್ಲ ಎಂಬ ಮಾಹಿತಿ ತಿಳಿದು ಬಂದಿರುವುದು ಕುಟುಂಬಸ್ಥರಿಗೆ ಸಮಾಧಾನದ ಸಂಗತಿಯಾಗಿದೆ.
ಈ ಟೆಂಟ್‌ನಲ್ಲಿ ಕಳೆದ 2-3 ದಿನಗಳಿಂದ ಪಂಚತರಣಿಯಲ್ಲಿ ಧಾರವಾಡದ ಐದು ಜನರು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸಂಕಷ್ಟದಲ್ಲಿರುವ ಸಹಾಯಕ್ಕೆ ಮುಂದಾದ ಶಾಸಕರು, ಸಿಎಂ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿ ಅವರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರ ಮಾಡಲು ತಿಳಿಸಿದ್ದಾರೆ.
ಪಂಚತರಣಿಯಲ್ಲಿ ಏರ್‌ಲಿಫ್ಟ್ ಆರಂಭಗೊಂಡಿದ್ದು, ಸಿಲುಕಿರುವ ಜನರನ್ನು ಸುರಕ್ಷಿತ ಜಾಗಕ್ಕೆ ಕರೆದುಕೊಂಡು ಹೋಗಿ ಬಿಡಲಾಗುತ್ತಿದೆ. ಹೆಲಿಕಾಪ್ಟರ್ ಮೂಲಕ ನಮ್ಮನ್ನೂ ಸುರಕ್ಷಿತ ಜಾಗಕ್ಕೆ ಕರೆದುಕೊಂಡು ಹೋಗುವ ಎಲ್ಲಾ ವ್ಯವಸ್ಥೆ ಆಗಿದೆ ಎಂದು ರಾಕೇಶ ನಾಝರೆ ತಿಳಿಸಿದ್ದಾರೆ.