ಅಮರನಾಥ (ಜಮ್ಮು): ವಿಶ್ವಪ್ರಸಿದ್ಧ ಅಮರನಾಥ ಯಾತ್ರೆ ಗುರುವಾರದಿಂದ ಆರಂಭವಾಗಿದೆ. 2750 ಯಾತ್ರಾರ್ಥಿಗಳು ಮೂಲ ಶಿಬಿರದಿಂದ ಹೊರಡುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು. ಇದೇ ವೇಳೆ ಜಮ್ಮುಕಾಶ್ಮೀರ ಆಡಳಿತ ಕೆಲವು ಬಲವಾದ ನಿರ್ಧಾರವನ್ನು ತೆಗೆದುಕೊಂಡಿದೆ.
ನೋಂದಣಿ ಮಾಡಿಕೊಂಡಿಲ್ಲದ ಯಾತ್ರಾರ್ಥಿಗಳಿಗೆ ರಂಬನ್ ಜಿಲ್ಲೆಯ ನವಯುಗ್ ಸುರಂಗ ಮಾರ್ಗದಿಂದ ಮುಂದಕ್ಕೆ ಪ್ರಯಾಣಿಸಲು ಅವಕಾಶವಿಲ್ಲ ಎಂದು ತಿಳಿಸಿದೆ. ಭದ್ರತಾ ಕಾರಣಗಳಿಂದ ಈ ನಿರ್ಧಾರ ಮಾಡಲಾಗಿದೆ.
ಹಾಗಂತ ನಿರಾಶೆ ಪಡುವ ಅಗತ್ಯವಿಲ್ಲ. ಈ ನಿರ್ಧಾರ ಅನ್ವಯವಾಗುವುದು ಅಮರನಾಥ ಯಾತ್ರೆ ಮುಕ್ತಾಯವಾಗುವ ಆ.11ರವರೆಗೆ ಮಾತ್ರ. ಇಲ್ಲಿ ಇನ್ನೂ ಒಂದು ಅವಕಾಶವಿದೆ. ಆ.11ರವರೆಗೆ ಪ್ರತೀ ದಿನ ಮಧ್ಯಾಹ್ನ 3.30ರ ನಂತರ ನವಯುಗದಿಂದ ಮುಂದಕ್ಕೆ ಚಲಿಸಲು ನಿರ್ಬಂಧ ಹಾಕಲಾಗಿದೆ. ಅದಕ್ಕೂ ಮುಂಚೆಯಾದರೆ ಪ್ರಯಾಣಿಸಲು ಒಂದು ಅವಕಾಶವಿರುವ ಸಾಧ್ಯತೆಯಿದೆ.
ಏರಿದ ನೀರಿನ ಮಟ್ಟ:
ಇದೇ ವೇಳೆ ಗುರುವಾರ ರಾತ್ರಿ ದಿಢೀರನೆ ಅಮರನಾಥದ ಸನಿಹ ನೀರಿನಮಟ್ಟ ಏರಿದೆ. ಅಮರನಾಥಕ್ಕೆ ಹೋಗುವ ಮಾರ್ಗದಲ್ಲಿ ಬರುವ ಬ್ರೇರಿಮಾರ್ಗ್ ಎಂಬ ಜಾಗಕ್ಕೆ ಸನಿಹವಿರುವ ಸೇತುವೆಯ ಮೇಲೂ ನೀರು ಹರಿಯಲು ಆರಂಭಿಸಿದೆ. ಕೂಡಲೇ ಯೋಧರು ಸ್ಥಳಕ್ಕೆ ಧಾವಿಸಿ ಯಾತ್ರಾರ್ಥಿಗಳ ನೆರವಿಗೆ ನಿಂತರು.
Related Articles
ಭದ್ರತೆ ಪರಿಶೀಲಿಸಿದ ಎಡಿಜಿಪಿ:
ಇದೇ ವೇಳೆ, ಗುರುವಾರ ಎಡಿಜಿಪಿ ಮುಕೇಶ್ ಸಿಂಗ್, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮರನಾಥ ಯಾತ್ರಿಕರಿಗೆ ಒದಗಿಸಿರುವ ಭದ್ರತೆಯನ್ನು ಪರಿಶೀಲಿಸಿದರು. ತಾವೇ ಖುದ್ದಾಗಿ ಭದ್ರತಾ ಪಡೆಗಳೊಂದಿಗೆ ಸಂಚರಿಸಿ, ಯಾತ್ರಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.