Advertisement

ಕ್ಯಾಪ್ಟನ್ ಹೊಸ ಪಕ್ಷಕ್ಕೆ “ಪಂಜಾಬ್ ವಿಕಾಸ್ ಪಾರ್ಟಿ” ಹೆಸರು ?

04:40 PM Oct 01, 2021 | Team Udayavani |

ನವದೆಹಲಿ:ಕಾಂಗ್ರೆಸ್‍ನಿಂದ ಒಂದು ಕಾಲು ಹೊರ ಇಟ್ಟಿರುವ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಹೊಸ ಪಕ್ಷ ಸ್ಥಾಪಿಸುವುದು ಬಹುತೇಕ ಖಚಿತವಾಗಿದೆ. ತಮ್ಮ ಹೊಸ ಪಕ್ಷಕ್ಕೆ  “ಪಂಜಾಬ್ ವಿಕಾಸ್ ಪಾರ್ಟಿ” ಎಂದು ನಾಮಕರಣ ಮಾಡಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

Advertisement

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನದಂದೇ ಕಾಂಗ್ರೆಸ್ ಪಕ್ಷ ತೊರೆಯುವುದಾಗಿ ಹೇಳಿದ ಕ್ಯಾಪ್ಟನ್, ಗುರುವಾರ ನವದೆಹಲಿಯಿಂದ ವಾಪಾಸ್ ಬಂದಿದ್ದು, ಹೊಸ ಪಕ್ಷ ರಚನೆಯ ಕಾರ್ಯಕ್ಕೆ ವೇಗ ನೀಡಿದ್ದಾರೆ. ಹೊಸ ಪಕ್ಷ ಸ್ಥಾಪನೆಯ ರೂಪರೇಷಗಳ ಬಗ್ಗೆ ಆಪ್ತರ ಜೊತೆ ಸಿಂಗ್ ಚರ್ಚೆ ನಡೆಸಿದ್ದಾರೆ. ಸದ್ಯ ಕಾಂಗ್ರೆಸ್ ನಲ್ಲಿರುವ ನವಜೋತ್ ಸಿಂಗ್ ಸಿಧು ಅವರ ವಿರೋಧಿ ಬಣವನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಅಣಿಯಾಗಿದ್ದಾರಂತೆ. ಸಿಧು ಅವರ ವಿರೋಧಿ ಬಣದ 25-30 ಶಾಸಕರು ಸಿಂಗ್ ಜೊತೆ ಕೈ ಜೋಡಿಸಲಿದ್ದು “ಪಂಜಾಬ್ ವಿಕಾಸ್ ಪಕ್ಷ”ಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕ್ಯಾಪ್ಟನ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದ್ದು. ಈ ವದಂತಿಗೆ ಸ್ವತಃ ಅಮರೀಂದರ್ ಅವರೇ ಗುರುವಾರ ತೆರೆ ಎಳೆದರು. ನಾನು ಬಿಜೆಪಿಗೆ ಹೋಗುವುದಿಲ್ಲ, ಹಾಗಂತ ಕಾಂಗ್ರೆಸ್ ನಲ್ಲಿ ಇರುವುದಿಲ್ಲ ಎಂದು ತಮ್ಮ ನಿಲುವು ಸ್ಪಷ್ಟ ಪಡಿಸಿದರು.

ಇನ್ನು ಮುಂದಿನ ವರ್ಷದ (2022 ) ಡಿಸೆಂಬರ್ ನಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕ್ಯಾಪ್ಟನ್ ನೇತೃತ್ವದ “ಪಂಜಾಬ್ ವಿಕಾಸ್ ಪಕ್ಷ” ಸ್ಪರ್ಧಿಸಲಿದ್ದು, ಕಾಂಗ್ರೆಸ್ ಹಾಗೂ ನವಜೋತ್ ಸಿಂಗ್ ಸಿಧು ಅವರಿಗೆ ಭಾರಿ ಪೈಪೋಟಿ ನೀಡಲಿದೆ ಎಂದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next