Advertisement

ಇದು… ಪಾಕ್ ನಲ್ಲಿ ಕಾಣೆಯಾದ ಭಾರತದ ಅಮರ್ ಜೀತ್ ನ ಇಂಟರೆಸ್ಟಿಂಗ್ ಕಹಾನಿ

01:13 PM Apr 25, 2018 | Karthik A |

ನಮ್ಮ ದೇಶದಲ್ಲಿ ಬೇಕಾದುದಕ್ಕಿಂತ ಬೇಡವಾದ ವಿಷಯಕ್ಕೇ ಹೆಚ್ಚು ಪ್ರಚಾರದಲ್ಲಿರುವ ಸಾಮಾಜಿಕ ಜಾಲತಾಣಗಳು, ಅದರಲ್ಲೂ ಮುಖ್ಯವಾಗಿ ಫೇಸ್ಬುಕ್, ಇತ್ತೀಚಿನ ದಿನಗಳಲ್ಲಿಯಂತೂ ಈ ಕೇಂಬ್ರಿಡ್ಜ್ ಅನಾಲಿಟಿಕಾ ಅವಾಂತರ ಮೂಲಕ ಭರ್ಜರಿ ಸುದ್ದಿಗೊಳಗಾಗಿತ್ತು. ಇವೆಲ್ಲದರ ನಡುವೆಯೇ ಇದೇ ಫೇಸ್ಬುಕ್ ಮಾಧ್ಯಮವು ಏಷ್ಯಾದ ಎರಡು ಸಾಂಪ್ರದಾಯಿಕ ವೈರಿ ರಾಷ್ಟ್ರಗಳ ನಡುವಿನ ಪ್ರಜೆಗಳಿಬ್ಬರ ನಡುವೆ ಗೆಳೆತನದ ಬೆಸುಗೆಯ ಕುರಿತಾಗಿಯೂ ಸುದ್ದಿಯಾಗುತ್ತಿದೆ. ಈ ಇಂಟೆರೆಸ್ಟಿಂಗ್ ವಿಷಯದ ಕುರಿತಾಗಿಯೇ ಈ ಲೇಖನ…

Advertisement

ಆತ 23 ವರ್ಷದ ಸಿಖ್ ಯುವಕ, ಅವನ ಹೆಸರು ಅಮರ್ ಜೀತ್ ಸಿಂಗ್. ಈ ಯುವಕ ಯಾತ್ರಾ ತಂಡದವರ ಜೊತೆಯಲ್ಲಿ, ಸದ್ಯ ಪಾಕಿಸ್ಥಾನದಲ್ಲಿರುವ ಸಿಖ್ಖರ ಪ್ರಸಿದ್ಧ ಯಾತ್ರಾ ಸ್ಥಳ ಪಂಜಾ ಸಿಂಗ್ ಗುರುದ್ವಾರಕ್ಕೆ ಯಾತ್ರೆಗೆ ಹೊರಟಿದ್ದ. ಇದು ಪ್ರತೀ ವರ್ಷ ನಡೆಯುವ ಯಾತ್ರೆ. ಇದಕ್ಕೆ ‘ಭೈಸಾಕಿ ಯಾತ್ರೆ’ ಎಂದೇ ಹೆಸರು. ಭಾರತ ಮತ್ತು ಪಾಕ್ ನಡುವೆ ಇರುವ ದ್ವಿಪಕ್ಷೀಯ ಒಪ್ಪಂದದಂತೆ ಎರಡೂ ದೇಶಗಳಲ್ಲಿ ಇರುವ ಯಾತ್ರಾ ಸ್ಥಳಗಳಿಗೆ ಬೇಟಿ ನೀಡಲು ತಮ್ಮ ತಮ್ಮ ದೇಶವಾಸಿಗಳಿಗೆ ಅವಕಾಶ ಮಾಡಿಕೊಡುವ ಒಪ್ಪಂದ ಇದಾಗಿದ್ದು, ಇದರ ಪ್ರಕಾರ ಪ್ರತೀ ವರ್ಷದಂತೆ ಈ ವರ್ಷವೂ ಸಿಖ್ ಯಾತ್ರಿಕರ ತಂಡ ಪಾಕಿಸ್ಥಾನದ ಹಸನಾಬ್ದಲ್ ಎಂಬ ಪ್ರದೇಶದಲ್ಲಿರುವ ಗುರುದ್ವಾರ ಪಂಜಾ ಸಾಹೀಬ್ ಗೆ ಹೊರಟಿದೆ. ನಿಯಮದಂತೆ ಪಾಕಿಸ್ಥಾನಕ್ಕೆ ಪ್ರವೇಶಿಸಿದ ನಂತರ ಯಾತ್ರಿಕರು ತಮ್ಮ ತಮ್ಮ ಪಾಸ್ ಪೋರ್ಟ್ ಗಳನ್ನು ಈ ಯಾತ್ರೆಯ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುವ ಇಟಿಪಿಬಿ ಎಂಬ ನೋಡಲ್ ಏಜೆನ್ಸಿಗೆ ಒಪ್ಪಿಸಬೇಕು, ಮತ್ತೆ ಭಾರತಕ್ಕೆ ಹಿಂದಿರುಗುವಾಗ ಅವುಗಳನ್ನು ಮರಳಿ ಪಡೆದುಕೊಳ್ಳಬೇಕು ಇದು ನಿಯಮ.

ಎಪ್ರಿಲ್ 12ನೇ ತಾರೀಖಿನಿಂದ 1800 ಸಿಖ್ ಯಾತ್ರಿಕರ ತಂಡವು ಈ ಯಾತ್ರೆಯಲ್ಲಿತ್ತು. ಮತ್ತು ನಿಯಮದಂತೆ ಈ ತಂಡವು ಎಪ್ರಿಲ್ 21ನೇ ತಾರೀಖಿನ ಶನಿವಾರದಂದು ಹಿಂದಿರುಗಬೇಕಿತ್ತು. ಯಡವಟ್ಟಾಗಿದ್ದೇ ಇಲ್ಲಿ! ಎಲ್ಲ ಭಾರತೀಯ ಯಾತ್ರಿಕರು ತಮ್ಮ ದೇಶಕ್ಕೆ ಹಿಂತಿರುಗಿದ ಬಳಿಕ ಇಟಿಪಿಬಿ ಬಳಿಯಲ್ಲಿ ಓರ್ವನ ಪಾಸ್ ಪೋರ್ಟ್ ಉಳಿದುಕೊಂಡುಬಿಟ್ಟಿದೆ. ತಕ್ಷಣವೇ ಈ ವಿಷಯವನ್ನು ಅಲ್ಲಿನ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಹೇಳಿ ಕೇಳಿ ಇದು ಬಹಳ ಸೂಕ್ಷ್ಮ ವಿಚಾರ, ಈಗಾಗಲೇ ಹಳಸಿರುವ ಎರಡು ದೇಶಗಳ ಸಂಬಂಧಕ್ಕೆ ಇನ್ನಷ್ಟು ಹಾನಿ ಮಾಡಬಹುದಾದ ವಿಷಯ. ಹಾಗಾಗಿ ತಕ್ಷಣವೇ ಕಾರ್ಯಪ್ರವೃತ್ತರಾದ ಪಾಕ್ ಅಧಿಕಾರಿಗಳು ತಪ್ಪಿಸಿಕೊಂಡಿರುವ ಸಿಖ್ ಯುವಕನ ಪತ್ತೆಗೆ ಕ್ರಮ ಕೈಗೊಂಡರು. ಎಲ್ಲಿಯವರೆಗೆ ಅಂದರೆ ಪಾಕಿಸ್ಥಾನದ ವಿದೇಶಾಂಗ ವ್ಯವಹಾರಗಳ ವಕ್ತಾರರೇ ಹೇಳಿಕೆಯೊಂದನ್ನು ನೀಡಿ, ‘ಯುವಕನ ಪತ್ತೆಗೆ ನಾವು ಸೂಕ್ತ ಕ್ರಮ ಕೈಗೊಂಡಿದ್ದೇವೆ…” ಎಂಬ ಭರವಸೆಯನ್ನು ಭಾರತಕ್ಕೆ ನೀಡಿದರು! ಇತ್ತ ಭಾರತ ಸರಕಾರವೂ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘ನಾವು ಈ ವಿಚಾರವಾಗಿ ಪಾಕಿಸ್ಥಾನ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ..” ಎಂದು ಹೇಳಿತು.ಅಮರ್ ಜಿತ್ ನಾಪತ್ತೆ ಪ್ರಕರಣವು ಅದಾಗಲೇ ಅಷ್ಟರಮಟ್ಟಿಗೆ ಎರಡೂ ದೇಶಗಳ ನಡುವೆ ಗಂಭೀರ ವಿಚಾರವಾಗಿ ಮಾರ್ಪಟ್ಟಿತ್ತು.

ಇಷ್ಟೆಲ್ಲಾ ರಾಮಾಯಣದ ನಡುವೆ ಇಲ್ಲೊಂದು ಪಿಡ್ಕಾಯಣ ನಡೆದಿತ್ತು! ಇದನ್ನು ನೀವು ಕೇಳಿದರೆ ಈ ದೇಶ ಭಾಷೆಗಳ ಗಡಿಯಿರುವುದು ರಾಜತಾಂತ್ರಿಕ ವಿಷಯಗಳಿಗೇ ಹೊರತು ಮನುಷ್ಯ ಸಂಬಂಧಗಳಿಗಲ್ಲಾ ಅನ್ನುವ ವಿಚಾರ ನಿಮಗೆ ಅರಿವಾದೀತು. ಭಾರತೀಯ ಯುವಕನೊಬ್ಬ ಪಾಕಿಸ್ಥಾನದಲ್ಲಿ ಕಾಣೆಯಾಗಿದ್ದಾನಂತೆ ಎಂಬ ವಿಷಯ ಎರಡೂ ದೇಶಗಳ ಅಧಿಕಾರಿಗಳ ನಿದ್ದೆಗೆಡಿಸಿದ್ದರೆ, ಅಲ್ಲಿನ ಮತ್ತು ಇಲ್ಲಿನ ಮಾಧ್ಯಮಗಳ ಬಾಯಿಗೆ ವಿವಿಧ ರೀತಿಯಲ್ಲಿ ಆಹಾರವಾಗುತ್ತಿದ್ದರೆ, ಈ ಪುಣ್ಯಾತ್ಮ ಅಮರ್ ಜೀತ್ ಸಿಂಗ್ ಹೋಗಿದ್ದೆಲ್ಲಿಗೆ ಗೊತ್ತಾ…?

ಫೇಸ್ಬುಕ್ ದೋಸ್ತಿಯ ಮನೆಯಲ್ಲಿದ್ದ…!
ಅತ್ತ ತನ್ನ ಯಾತ್ರಾ ತಂಡದ ಗುಂಪಿನಿಂದ ಇದ್ದಕ್ಕಿದ್ದಂತೆಯೇ ಮಿಸ್ಸಾಗಿದ್ದ ಅಮರ್ ಜಿತ್ ಸಿಂಗ್ ಸೀದಾ ಹೋಗಿದ್ದು ತನ್ನ ಪಾಕ್ ಫೇಸ್ಬುಕ್ ಫ್ರೆಂಡ್ ಅಮೀರ್ ರಝಾಕ್ ಮನೆಗೆ! ಲಾಹೋರ್ ನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಶೇಖುಪುರ ಎಂಬ ಊರಿನಲ್ಲಿರುವ ತನ್ನ ಗೆಳೆಯನನ್ನು ಮತ್ತು ಆತನ ಕುಟುಂಬದವರನ್ನು ಭೇಟಿ ಮಾಡಲು ಅಮರ್ ಜಿತ್ ಹೋಗಿದ್ದ. ತನ್ನ ವೀಸಾವಧಿ 1 ತಿಂಗಳಿನದ್ದಾಗಿದ್ದು ಆ ಅವಧಿ ಮುಗಿಯುವವರೆಗೆ ತನ್ನ ಗೆಳೆಯನ ಮನೆಯಲ್ಲಿ ಸ್ವಲ್ಪ ಸಮಯ ಕಳೆಯುವ ಇರಾದೆ ಆತನದ್ದಾಗಿತ್ತು. ಆದರೆ ನಿಜವಾಗಿ ಆತನ ವೀಸಾವಧಿ 1 ತಿಂಗಳಿನದ್ದಾಗಿರಲಿಲ್ಲ, ಈ ಗೊಂದಲವೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿತ್ತು.

Advertisement

ಅಂತೂ ಅಮೀರ್ ಮನೆಯವರು ಅಮರ್ ಜೀತ್ ಇರುವಿಕೆ ಕುರಿತು ಪಾಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಇಡಿಯ ಪ್ರಕರಣಕ್ಕೆ ಒಂದು ಪೂರ್ಣವಿರಾಮ ಬಿತ್ತೆನ್ನಿ. ಮತ್ತೆ ತನ್ನ ಭಾರತೀಯ ಗೆಳೆಯನನ್ನು ಕರೆದುಕೊಂಡು ಅಮೀರ್ ರಝಾಕ್ ಲಾಹೋರ್ ನಲ್ಲಿರುವ ಇಟಿಪಿಬಿ ಕಛೇರಿಗೆ ಬಂದು ವಾಸ್ತವಾಂಶವನ್ನು ವಿವರಿಸಿ ಭಾರವಾದ ಹೃದಯದಿಂದ ತನ್ನ ಗೆಳೆಯನಿಗೆ ಅಲ್ವಿದಾ ಹೇಳಿದ.

ಈ ನಾಪತ್ತೆ ಪ್ರಕರಣ ಸುಖಾಂತ್ಯವಾದುದಕ್ಕೆ ಪಾಕ್ ಅಧಿಕಾರಿಗಳು ನಿಟ್ಟುಸಿರು ಬಿಟ್ಟರೆ ಇತ್ತ ಭಾರತೀಯ ಅಧಿಕಾರಿಗಳಲ್ಲೂ ನಿರಾಳತೆ ಕಾಣಿಸಿತ್ತು. ಬಳಿಕ ನಮ್ಮ ಅಮರ ದೋಸ್ತಿಯನ್ನು ವಾಘಾ ಗಡಿಯ ಮೂಲಕ ಭಾರತಕ್ಕೆ ಕಳುಹಿಸಿಕೊಟ್ಟು ಅಯ್ಯಬ್ಬಾ ಅಂದರು ಪಾಕ್ ಅಧಿಕಾರಿಗಳು! ಇತ್ತ ತಮ್ಮ ಮನೆ ಮಗ, ಊರಿನ ಯುವಕ ಪಾಕಿಸ್ಥಾನದಲ್ಲಿ ಕಾಣೆಯಾಗಿದ್ದಾನೆಂದು ಕಂಗಾಲಾಗಿದ್ದ ಆತನ ಹೆತ್ತವರು ಮತ್ತು ಊರವರು, ವಾಘಾ ಗಡಿಯಲ್ಲಿ ಅಮರ್ ಜೀತ್ ನನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ದೇಶ ಭಾಷೆಗಳ ಗಡಿಯನ್ನು ಮೀರಿ ಅರಳುವ ಈ ರೀತಿಯ ದೋಸ್ತಿ – ಪ್ರೀತಿಗಳಿಗೆ ಸೂಕ್ತವಾದ ಬೆಂಬಲ ಸಿಗದೇ ಇದ್ದಾಗ ಅವಾಂತರವಾಗುತ್ತದೆ. ಆದರೆ ಅಮರದ ಜೀತ್ ವಿಷಯದಲ್ಲಿ ಎರಡೂ ದೇಶಗಳು ಸಂಯಮದಿಂದ ವರ್ತಿಸಿದ ಕಾರಣ ಈ ಫೇಸ್ಬುಕ್ ದೋಸ್ತಿ ಪ್ರಕರಣ ಸುಖಾಂತ್ಯಗೊಂಡಿತೆನ್ನಿ…!

Advertisement

Udayavani is now on Telegram. Click here to join our channel and stay updated with the latest news.

Next