ಹೊಸದಿಲ್ಲಿ: ಇಂಡಿಯಾ ಗೇಟ್ ಹುಲ್ಲುಹಾಸಿನಲ್ಲಿ 50 ವರ್ಷಗಳಿಂದ ಉರಿಯುತ್ತಿರುವ ಅಮರ್ ಜವಾನ್ ಜ್ಯೋತಿಯ ಜ್ವಾಲೆಯು ಶಾಶ್ವತವಾಗಿ ನಂದಲಿದೆ. ಗಣರಾಜ್ಯೋತ್ಸವದ ದಿನದ ಮುನ್ನ ನಡೆಯುವ ಕಾರ್ಯಕ್ರಮದಲ್ಲಿ ಈ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗುವುದು.
ಈ ಸಮಾರಂಭವು ಮಧ್ಯಾಹ್ನ 3.30 ಕ್ಕೆ ಪ್ರಾರಂಭವಾಗಲಿದೆ. ಸಮಗ್ರ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಏರ್ ಮಾರ್ಷಲ್ ಬಲಭದ್ರ ರಾಧಾ ಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಜ್ವಾಲೆಗಳ ನಿರ್ವಹಣೆ ಹೆಚ್ಚು ಕಷ್ಟಕರವಾಗುತ್ತಿದೆ ಎಂದು ಕಂಡುಬಂದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ವಿಮಾನ ನಿಲ್ದಾಣ ಬಾಂಬ್ ಪ್ರಕರಣಕ್ಕೆ 2 ವರ್ಷ !
ದೇಶದ ಹುತಾತ್ಮರಿಗೆ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಈಗಾಗಲೇ ನಿರ್ಮಿಸಲಾಗಿದ್ದು, ಇಂಡಿಯಾ ಗೇಟ್‌ನಲ್ಲಿ ಪ್ರತ್ಯೇಕ ಜ್ವಾಲೆಯನ್ನು ಏಕೆ ಬೆಳಗಿಸಬೇಕು ಎಂಬ ವಾದವೂ ಇದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇಂಡಿಯಾ ಗೇಟ್‌ನಲ್ಲಿ ಕೆತ್ತಲಾದ ಹುತಾತ್ಮರ ಹೆಸರುಗಳು ಕೂಡಾ ರಾಷ್ಟ್ರೀಯ ಯುದ್ಧ ಸ್ಮಾರಕ ಹೊಂದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 1947-48ರ ಪಾಕಿಸ್ತಾನದೊಂದಿಗಿನ ಯುದ್ಧದಿಂದ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯವರೆಗೆ ವಿವಿಧ ಕಾರ್ಯಾಚರಣೆಗಳಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ರಕ್ಷಣಾ ಸಿಬ್ಬಂದಿಯ ಹೆಸರನ್ನು ರಾಷ್ಟ್ರೀಯ ಯುದ್ಧ ಸ್ಮಾರಕವು ಹೊಂದಿದೆ.
1914 ಮತ್ತು 1921 ರ ನಡುವೆ ಮೊದಲ ಮಹಾಯುದ್ಧದಲ್ಲಿ ಮಡಿದ ಬ್ರಿಟಿಷ್ ಭಾರತೀಯ ಸೇನೆಯ ಸೈನಿಕರ ನೆನಪಿಗಾಗಿ ಬ್ರಿಟೀಷ್ ಸರ್ಕಾರವು ಇಂಡಿಯಾ ಗೇಟನ್ನು ನಿರ್ಮಿಸಿದೆ. 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಮಡಿದ ಭಾರತೀಯ ಯೋಧರ ಸ್ಮರಣಾರ್ಥ 1972ರಲ್ಲಿ ಅಮರ್ ಜವಾನ್ ಜ್ಯೋತಿ ಬೆಳಗಿಸಲಾಯಿತು.
ರಾಷ್ಟ್ರೀಯ ಯುದ್ಧ ಸ್ಮಾರಕವು 176 ಕೋಟಿ ರೂ. ವೆಚ್ಚದಲ್ಲಿ 40 ಎಕರೆಯಲ್ಲಿ ನಿರ್ಮಿಸಲಾಗಿದೆ. 2019ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಉದ್ಘಾಟಿಸಿದ್ದರು. ಉದ್ಘಾಟನೆಯ ನಂತರ ಇಂಡಿಯಾ ಗೇಟ್‌ನಲ್ಲಿ ನಡೆಯುತ್ತಿದ್ದ ಎಲ್ಲಾ ಮಿಲಿಟರಿ ಸಮಾರಂಭದ ಕಾರ್ಯಕ್ರಮಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು.