ಕಿಕ್ಕೇರಿ: ತಾಲೂಕಿನಲ್ಲಿಯೇ ಅತಿದೊಡ್ಡ ಕೆರೆಯಂದೇ ಬಿಂಬಿತವಾಗಿರುವ ಅಮಾನಿಕೆರೆ ಲೆಕ್ಕಕ್ಕೆ 365 ಎಕರೆಯಷ್ಟು ವಿಸ್ತಾರವಾಗಿದೆ. ಒತ್ತುವರಿ, ಹೂಳು ತುಂಬಿ ಕೆರೆ ಸಂಕೀರ್ಣತೆ ಕಿರಿದಾಗಿದೆ. ಕೆರೆ ಏರಿಯ ದುರಸ್ತಿ ನೆಪದಲ್ಲಿ ತುಂಬಿದ ಕೆರೆಯನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೆರೆ ಕೋಡಿ ಒಡೆದು ಹಾಕಿ 6 ತಿಂಗಳಾಗಿದೆ. ದುರಸ್ತಿ ಮರೀಚಿಕೆಯಾಗಿದೆ. ಬೇಸಿಗೆ ಮುನ್ನವೇ ಕೆರೆ ನೀರಿಲ್ಲದೆ ಖಾಲಿಯಾಗಿದೆ. ಕೆರೆಯಾಶ್ರಿತ ರೈತರು ಕಳೆದ ವರ್ಷದಲ್ಲಿ ಮಳೆಗಾಲದಲ್ಲಿ ಬೇಸಿಗೆಯ ಛಾಯೆಯನ್ನು ಅನುಭವಿಸಬೇಕಾಯಿತು.
ಕೆರೆಯಲ್ಲಿ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ರೈತರು ಹೈನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈಗ ಕೆರೆಯ ನೀರು ಸಂಪೂರ್ಣ ಬತ್ತಿಹೋಗಿದೆ. ಮಳೆ ಕೈಕೊಟ್ಟರೆ ಜಾನುವಾರು ಮಾರಾಟ ಮಾಡಬೇಕಾಗಿದೆ.
ಕೆರೆಯಲ್ಲಿ ನೀರಿಲ್ಲ: ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 850 ಎಕರೆ ಜಮೀನಿನಲ್ಲಿ ಕಬ್ಬು, ಭತ್ತ ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಆದರೆ, ತ್ತೀಚೆಗೆ ಕೆರೆಯಲ್ಲಿ ನೀರಿಲ್ಲದ ಕಾರಣ ಕಬ್ಬು, ಭತ್ತ ಬೆಳೆಯೂ ರೈತರು ಬೆಳೆಯಲಾಗುತ್ತಿಲ್ಲ. ಬತ್ತಿದ ಕೆರೆಯಿಂದ ಸುತ್ತಮುತ್ತಲ ಪ್ರದೇಶಗಳಾದ ಕಳ್ಳನಕೆರೆ, ಸೊಳ್ಳೇಪುರ, ಲಕ್ಷ್ಮೀಪುರ, ಮಂಗನಹೊಸಹಳ್ಳಿ, ಕೋಡಿಮಾರನಹಳ್ಳಿ, ಮಾದಿಹಳ್ಳಿ, ದಿಂಕ, ಐನೋರಹಳ್ಳಿ, ವಡಕಹಳ್ಳಿಯಂತಹ ಹಲವು ಗ್ರಾಮಗ ಳಲ್ಲಿನ ಕೃಷಿ ಕೊಳವೆ ಬಾವಿಗಳಲ್ಲೂ ಅಂತ ರ್ಜಲ ಮಟ್ಟ ಕುಸಿದಿದೆ. ನೀರಿಗೆ ಬದಲೂ ಬಿಸಿ ಗಾಳಿ ಸಿಗುವಂತಾಗಿದೆ. 500 ಅಡಿ ಕೊರೆದರೂ ಕೊಳವೆ ಬಾವಿಯಲ್ಲೂ ನೀರು ಸಿಗುತ್ತಿಲ್ಲ.
ಒಣಗಿದ ತರಕಾರಿ: ಕೆರೆಯ ಸುತ್ತಮುತ್ತ ಇದ್ದ 285 ಕೃಷಿ ಕೊಳವೆ ಬಾವಿಗಳು ಜೋಳ, ರಾಗಿ, ಅವರೆ, ಟೊಮೇಟೊ, ಕುಂಬಳ, ಬದನೆ, ಸೊಪ್ಪು, ಬಾಳೆ, ಪಪ್ಪಾಯಿಗಳಂತಹ ಹಲವಾರು ತೋಟಗಾರಿಕೆ ಬೆಳೆಗಳು ನೀರಿಲ್ಲದೆ ಒಣಗಿವೆ. ತೆಂಗಿನ ಮರದ ಸುಳಿ ಒಣಗಲು ಆರಂಭ ವಾಗಿದೆ. ತರಕಾರಿ ಬೆಳೆಗೆ ಹೆಸರು ಪಡೆದಿದ್ದ ಗೋವಿಂದನಹಳ್ಳಿ, ತೆಂಗಿನಘಟ್ಟ, ಕೆಂಪಿಕೊಪ್ಪಲು ಗ್ರಾಮದಲ್ಲಿ ನಲ್ಲಿಯ ನೀರಿನಂತೆ ಕೊಳವೆ ಬಾಯಲ್ಲಿ ನೀರು ಜಿನುಗುವಂತಾಗಿದ್ದು ಬೇಸಾಯ ಸಾಕಪ್ಪ, ಕಾಫಿ, ಟೀ ಅಂಗಡಿ ಬೇಕಪ್ಪ ಎಂದು ರೈತರು ಹೇಳುತ್ತಿದ್ದಾರೆ.
ಕೆರೆಯಲ್ಲಿ ಮೇವಿದೆ, ನೀರಿಲ್ಲ ಎನ್ನುವಂತಾಗಿದೆ. ಪ್ರಾಣಿ, ಪಕ್ಷಿ, ಜಾನುವಾರು ನಿರ್ಜಲೀಕರಣದಿಂದ ನಿತ್ರಾಣವಾಗುತ್ತಿವೆ. ರಾಸುಗಳಲ್ಲಿನ ಹಾಲಿನ ಇಳುವರಿ ಕಡಿಮೆಯಾಗಿ ಹೈನುಗಾರಿಕೆಗೆ ಹೊಡೆತ ಬಿದ್ದಿದೆ. 3 ಹಸುಗಳ ಒಡತಿಯಾಗಿದ್ದ ನಾಗಮ್ಮ ಒಂದು ಹಸು ಸಾಕಪ್ಪ ಎನ್ನುವಂತಾಗಿದ್ದಾರೆ. ಸಾಲ ಮಾಡಿದ ರೈತ ಬದುಕಿಗಾಗಿ ಗುಳೇ ಎನ್ನುವಂತಾಗಿದೆ. ಈಗಾಗಲೇ ಸಣ್ಣ ಈಡುವಳಿ ರೈತರು ನಗರ ಪ್ರದೇಶಕ್ಕೆ ಮುಖ ಮಾಡಿಯಾಗಿದೆ.
ಕುಡಿವ ನೀರಿಗೆ ತತ್ವಾರ: ಲಕ್ಷ್ಮಿಪುರ ಗ್ರಾಮದಲ್ಲಿ ಇರುವ 2 ಕೊಳವೆ ಬಾವಿಗಳ ಅಂರ್ತಜಲ ಮಟ್ಟ ಕುಸಿದಿದ್ದು ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಖಾಸಗಿಯಾಗಿ ಪಡೆಯಲು ಕೃಷಿಕರ ಪಂಪ್‌ಸೆಟ್‌ನಲ್ಲಿ ನೀರು ಕಾಣ ದಾಗಿದೆ. ಸಾಸಲು ಗ್ರಾಮದಲ್ಲಿ ಕುಡಿಯುವ ನೀರಿನ ಸಂಕಷ್ಟ ಉಲ್ಭಣಿಸಿದೆ. ಟ್ಯಾಂಕರ್‌ಗಳಲ್ಲಿ ನೀರಿನ ಸರಬರಾಜು ಮಾಡಲು ಗ್ರಾಮ ಪಂಚಾ ಯಿತಿ ಮುಂದಾಗಿದೆ.
ಹೋಬಳಿ ಕೇಂದ್ರವಾದ ಕಿಕ್ಕೇರಿಯಲ್ಲಿ ಈ ಬಾರಿ ಬಲು ಬೇಗ ಕೆರೆಯ ನೀರು ಖಾಲಿಯಾಗಿದ್ದು ಬೇಸಿಗೆ ಮುನ್ನವೇ ಬರಗಾಲ ಬಂದಿದೆ. ಕೊಳಾಯಿಗಳಿಗೆ ಮೀಟರ್ ಅಳವಡಿಸಲು ಮುಂದಾದಲ್ಲಿ ಮಾತ್ರ ನೀರಿನ ಬವಣೆ ತಪ್ಪಲು ಸಹಕಾರಿಯಾಗಲಿದೆ. ಹೋಬಳಿಯಲ್ಲಿ 8 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ನೀರಿನ ಬವಣೆ ತಪ್ಪಿಲ್ಲ.
ರೈತರು ನಗರ ಪ್ರದೇಶಕ್ಕೆ ಗುಳೆ ಹೋಗದಂತೆ ಜಾಗೃತಿ, ಮೇವಿನ ಬ್ಯಾಂಕ್, ನೀರಿನ ಒರತೆ ಇರುವ ಕಡೆ ಕೊಳವೆ ಬಾವಿ ಕೊರೆಯುವುದು, ಶಾಶ್ವತ ಕುಡಿಯುವ ನೀರಿಗಾಗಿ ಹೇಮಾವತಿ ನದಿಯಿಂದ ನೀರು ಸರಬರಾಜು ವ್ಯವಸ್ಥೆ ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
● ತ್ರಿವೇಣಿ