Advertisement

ರಚನಾತ್ಮಕ ಟೀಕೆಗೆ ಸದಾ ಸ್ವಾಗತ: ಹರತಾಳು ಹಾಲಪ್ಪ

03:21 PM Jun 09, 2018 | |

ಸಾಗರ: ಈ ಆಡಳಿತ ವ್ಯವಸ್ಥೆಯಲ್ಲಿ ಪತ್ರಕರ್ತರು ಅತಿ ಮುಖ್ಯ ಪಾತ್ರ ವಹಿಸುತ್ತಾರೆ. ಅವರ ವಿಚಕ್ಷಕ ಗುಣ ಪ್ರಜಾಪ್ರಭುತ್ವವನ್ನು ಕಾಪಾಡುತ್ತಿದೆ. ನಾವು ಜನಪ್ರತಿನಿಧಿಗಳಾಗಿ ಪತ್ರಕರ್ತರ ಎಲ್ಲ ರಚನಾತ್ಮಕ ಟೀಕೆಗಳನ್ನು ಸ್ವಾಗತಿಸಬೇಕು ಎಂದು ಶಾಸಕ ಹರತಾಳು ಹಾಲಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಿಂದಲೂ ಆಗುವ ದೋಷಗಳನ್ನು ಗುರುತಿಸಿ ಅದನ್ನು ಜನರಿಗೆ ವಸ್ತುನಿಷ್ಟವಾಗಿ ತಿಳಿಸುವ ಕೆಲಸವನ್ನು ಪತ್ರಿಕಾರಂಗ ಮಾಡುತ್ತಿದೆ ಎಂದರು. ಸಮಾಜದಲ್ಲಿ ಎಲ್ಲರ ಅಭಿಪ್ರಾಯ ಒಂದೇ ಆಗಿರಬೇಕಿಲ್ಲ. ಪತ್ರಕರ್ತರು ಒಂದು ವಿಷಯವನ್ನು ಹಲವು ದೃಷ್ಟಿಕೋನದಿಂದ ನೋಡುತ್ತಾರೆ. ಎಲ್ಲರ ಉದ್ದೇಶ ಸತ್ಯವನ್ನು ಹೊರಗೆಳೆಯುವುದೇ ಆಗಿರುತ್ತದೆ. ಪತ್ರಕರ್ತರಿಗೆ ಅನುಭವಕ್ಕೆ ಬರುವುದನ್ನು ಬರೆಯುವುದರಲ್ಲಿ ಯಾವುದೇ ಅಡ್ಡಿ ಆತಂಕಗಳಿರಬಾರದು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪತ್ರಕರ್ತರ ಸಲಹೆ ಸಹಕಾರ ಅಗತ್ಯ. ಎಲ್ಲರೂ ಒಟ್ಟಿಗೆ ಉತ್ತಮ ಕ್ಷೇತ್ರವನ್ನು ರೂಪಿಸುವ ಕೆಲಸ ಮುಂದುವರಿಸೋಣ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್‌.ಬಿ. ರಾಘವೇಂದ್ರ, ಪತ್ರಕರ್ತರಿಗೆ ವೈಯಕ್ತಿಕ ಸಿದ್ಧಾಂತವಿದ್ದರೂ ಸುದ್ದಿ ಮಾಡುವ ಸಂದರ್ಭದಲ್ಲಿ ವಸ್ತುನಿಷ್ಟತೆಯನ್ನು ಮರೆಯುವುದಿಲ್ಲ. ಸಮಾಜದ ಹಿತ ಮೀರಿ ಬೇರೆ ಉದ್ದೇಶಗಳಿಗೆ ಪತ್ರಕರ್ತರು ಮಾರಾಟವಾಗುವ ಉದಾಹರಣೆಗಳು ಕಡಿಮೆ. ಪತ್ರಕರ್ತರ ಟೀಕೆ ಟಿಪ್ಪಣಿಗಳು ಪತ್ರಿಕೋದ್ಯಮದ ಸಹಜ ಪ್ರಕ್ರಿಯೆ. ಈ ಅಂಶವನ್ನು ಗಹನ ಓದಿನ ಆಶಯದ ಶಾಸಕರು ಕೂಡ ಅರ್ಥ ಮಾಡಿಕೊಂಡಿದ್ದಾರೆ ಎಂದರು. 

ಪತ್ರಕರ್ತರ ಸ್ಥಿತಿ ಉತ್ತಮವಾಗಿಲ್ಲ. ಎಲ್ಲರೂ ಪತ್ರಿಕೆಗಳನ್ನು ಹೊರತುಪಡಿಸಿದ ಉದ್ಯೋಗದಲ್ಲಿ ವ್ಯಸ್ತರಾಗಿದ್ದಾರೆ. ಶಾಸಕರು ಸ್ಥಳೀಯ ಪತ್ರಕರ್ತರ ಹಿತ ಕಾಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಜಾಹೀರಾತುಗಳನ್ನು ಎಲ್ಲ ಪತ್ರಕರ್ತರಿಗೆ ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ರಚನಾತ್ಮಕವಾಗಿ ಮಾಡುವ ಕೆಲಸಗ ಳಿಗೆ ಪತ್ರಕರ್ತರು ಸದಾ ಪ್ರೋತ್ಸಾಹ ನೀಡುವ ಜೊತೆಗೆ ತಪ್ಪು ನಡೆದಾಗ ಅದನ್ನು ಎಚ್ಚರಿಸುವ ಕೆಲಸ ಸಹ ಮಾಡುತ್ತಾರೆ ಎಂದರು. ಕಾರ್ಯದರ್ಶಿ ಗಣಪತಿ ಶಿರಳಗಿ, ಖಜಾಂಚಿ ಎಂ.ಜಿ. ರಾಘವನ್‌ ಹಾಗೂ ಪತ್ರಕರ್ತರ ಸಂಘದ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next