Advertisement

ರಸಋಷಿಯ ನೆನೆಯುವ ಕಾರ್ಯ ಸದಾ ನಡೆಯಲಿ: ಮುಗುಳಿ

02:07 PM Dec 30, 2017 | |

ಬೆಳ್ತಂಗಡಿ: ಕರ್ನಾಟಕ ಸರಕಾರ ಅನೇಕ ಜಯಂತಿಗಳ ಆಚರಣೆ ಮಾಡುತ್ತಿದ್ದು ರಸಋಷಿ ಕುವೆಂಪು ಅವರನ್ನು ನೆನೆಯುವ ವಿಶ್ವ ಮಾನವ ದಿನ ಅತ್ಯಂತ ಅಮೂಲ್ಯವಾದುದು. ವಿಶ್ವ ಬಂಧುತ್ವದ ಸಾರ ಸಾರಿದ ಕುವೆಂಪು ಅವರನ್ನು ಅನುದಿನವೂ ನೆನೆಯುವ ಕಾರ್ಯ ಆಗಬೇಕಿದೆ. ಇದಕ್ಕೆ ಇಂತಹ ಕಾರ್ಯಕ್ರಮ ನಾಂದಿಯಾಗಬೇಕಿದೆ ಎಂದು ನ. ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್‌ ಹೇಳಿದರು. ಅವರು ಶುಕ್ರವಾರ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಹಳೆಪೇಟೆ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ತಾರಕೇಸರಿ, ಅಂತರಂಗದಲ್ಲಿ ಗೋಡೆಗಳನ್ನು ನಿರ್ಮಿಸಿದರೆ ಮನುಜಮತ, ವಿಶ್ವಪಥವಾಗಲಾರದು. ವಿಶ್ವ ಮಾನವತಕ್ಕೆ ಅಗತ್ಯವಾದ ಆಶಾಕಿರಣ ಕೊಟ್ಟವರು ಕುವೆಂಪು ಅವರು. ಹಾಗಂತ ಅವರಲ್ಲಿ ಪ್ರಾಂತೀಯ ಅಭಿಮಾನ ಇಲ್ಲವೆಂದಲ್ಲ. ಅವರು ಕನ್ನಡದ ನಾಡಗೀತೆ ಸಹಿತ ಕನ್ನಡ, ಕನ್ನಡಾಂಬೆ ಎಂದು ಬರೆದು ಮೆರೆದು ಪ್ರಾಂತೀಯತೆಯಲ್ಲಿ ಸಾರ್ವತ್ರಿಕತೆಯನ್ನು ಕಂಡವರು. ಸಂತ ಕವಿ ಎಂಬ ಹೊಗಳಿಕೆಗೆ ಪಾತ್ರವಾಗಿ ಕನ್ನಡಿಗರ ಅಭಿಮಾನದ ಕವಿಯಾದವರು. ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಕನ್ನಡಾಭಿಮಾನ ಮೆರೆಸಿದವರು ಎಂದವರು ತಿಳಿಸಿದರು.

ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಯತೆ ವಹಿಸಿದ್ದರು. ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸುಧೀರ್‌ ಆರ್‌. ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಬಸವರಾಜ್‌ ಅಯ್ಯಣ್ಣನವರ್‌, ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌ ಉಪಸ್ಥಿತರಿದ್ದರು. ಕಂದಾಯ ಇಲಾಖೆ ಪ್ರಥಮ ದರ್ಜೆ ಸಹಾಯಕ ಶಂಕರ್‌ ಸ್ವಾಗತಿಸಿ, ತಾ.ಪಂ. ಸಂಯೋಜಕ ಜಯಾನಂದ್‌ ಕಾರ್ಯಕ್ರಮ ನಿರ್ವಹಿಸಿದರು.

ಕಾಟಾಚಾರಕ್ಕೆ ಕಾರ್ಯಕ್ರಮ!
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಿತಿಯ ಅಧ್ಯಕ್ಷ ತಹಶೀಲ್ದಾರರೇ ಕಾರ್ಯಕ್ರಮ ಆರಂಭವಾಗುವಾಗ ಇರಲಿಲ್ಲ. ಕಾರ್ಯಕ್ರಮ ಶುರುವಾಗಿ ಅರ್ಧ ತಾಸಿನ ಬಳಿಕ ಆಗಮಿಸಿದರು. 24 ತಾ.ಪಂ. ಸದಸ್ಯರ ಪೈಕಿ 4 ಮಂದಿ ಸದಸ್ಯರಷ್ಟೇ ಹಾಜರಿದ್ದರು. ಬೆರಳೆಣಿಕೆಯ ಇಲಾಖಾಧಿಕಾರಿಗಳು ಬಿಟ್ಟರೆ ಹೆಚ್ಚಿನ ಇಲಾಖೆಯವರು ಗೈರುಹಾಜರಾಗಿದ್ದರು. ಸಭಾಂಗಣ ಖಾಲಿ ಖಾಲಿಯಾಗಿತ್ತು. ಕಾರ್ಯಕ್ರಮ ಆಯೋಜಿಸಿದ ಕಂದಾಯ ಇಲಾಖೆಯ ಉಪತಹಶೀಲ್ದಾರ್‌ ಕೂಡ ಇರಲಿಲ್ಲ. ಸೀಮಿತ ಜನರನ್ನು
ಸೇರಿಸಿ ಸರಕಾರಿ ಸುತ್ತೋಲೆ ಪಾಲನೆಗಾಗಿ ಒಟ್ಟಿನಲ್ಲಿ ಕಾಟಾಚಾರಕ್ಕೆ ಮಾಡಿದ ಕಾರ್ಯಕ್ರಮದಂತಿತ್ತು.
ರಾಷ್ಟ್ರಕವಿ ಕುವೆಂಪು ಅಂತಹವರ ಜಯಂತಿಯನ್ನು ಇಷ್ಟು ಅಸಡ್ಡೆಯಿಂದ ಮಾಡಿದ ಕುರಿತು ಜನರಲ್ಲಿ ಅಸಮಾಧಾನ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next