ಬೆಂಗಳೂರು: ಮಾಧ್ಯಮದವರ ಸಮಸ್ಯೆಗಳಿಗೆ ನಾನು ಸದಾ ಸ್ಪಂದಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.
ಹಿಂದುಳಿದ ವರ್ಗಗಳ ಸಂಪಾದಕ-ವರದಿಗಾರರ ಸಂಘ, ಕುರುಬರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಸಾಮಾನ್ಯ ಪತ್ರಕರ್ತನಾಗಿ ವೃತ್ತಿಜೀವನ ಆರಂಭಿಸಿ ಸಣ್ಣ ಪತ್ರಿಕೆಗಳ ಮತ್ತು ಗ್ರಾಮೀಣ ಪತ್ರಕರ್ತರ ಸಮಸ್ಯೆಗಳನ್ನು ಖುದ್ದಾಗಿ ಅರಿತಿದ್ದೇನೆ ಮತ್ತು ಅನುಭವಿಸಿದ್ದೇನೆ. ಪತ್ರಿಕೆ ಮತ್ತು ಪತ್ರಕರ್ತರ ಯಾವುದೇ ಸಮಸ್ಯೆಗಳಿಗೆ ನಾನು ಸದಾ ಬೆಂಬಲವಾಗಿ ಇರುತ್ತೇನೆಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪತ್ರಿಕೆಗಳು ಮತ್ತು ಪತ್ರಕರ್ತರ ಬಗ್ಗೆ ಅಪಾರ ಕಾಳಜಿ ಉಳ್ಳವರು ಆಗಿದ್ದಾರೆ. ಈ ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದಾಗ ಅನೇಕ ಪತ್ರಕರ್ತರ ಮತ್ತು ಪತ್ರಿಕೆಗಳ ಸಮಸ್ಯೆಗೆ ಸ್ಪಂದಿಸಿ ಮೀಡಿಯಾ ಕಿಟ್, ಜಾಹೀರಾತು ನೀತಿ ಹಾಗೂ ಹಿಂದುಳಿದ ವರ್ಗಗಳ ಪತ್ರಿಕೆಗೆ ವಿಶೇಷ ಜಾಹೀರಾತು ನೀಡುವುದನ್ನು ಆರಂಭಿಸಿದ್ದರು. ಮುಂಬರುವ ದಿನಗಳಲ್ಲಿ ಸಹ ಎಲ್ಲ ಪತ್ರಿಕೆಗಳ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ನಾನೊಬ್ಬ ಪತ್ರಕರ್ತನಾಗಿ ನನ್ನ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಅಭಯ ನೀಡಿದರು.
ಪ್ರಸ್‌ಕೌನ್ಸಿಲ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತರಾಗಿರುವ ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಕೆ.ವಿ. ಪ್ರಭಾಕರ್ ಅವರಿಗೆ ದೊರೆತ ಉನ್ನತ ಹುದ್ದೆ ಇಡೀ ಪತ್ರಿಕಾ ಸಮೂಹಕ್ಕೆ ದೊರೆತ ಗೌರವವಾಗಿದೆ. ಸರ್ಕಾರಕ್ಕೆ ಮತ್ತು ಪತ್ರಕರ್ತರಿಗೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುವ ಪ್ರಾಮಾಣಿಕತೆ ಪ್ರಭಾಕರ್ ಬಳಿ ಇದೆ. ಮಾಧ್ಯಮ ತನ್ನ ನೈತಿಕತೆಯನ್ನು ಉಳಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಕ್ಲಿಷ್ಟಕರ ಸ್ಥಿತಿಯಲ್ಲಿ ಸರ್ಕಾರ ಮತ್ತು ಮಾಧ್ಯಮದ ಕೊಂಡಿಯಾಗಿ ಪ್ರಭಾಕರ್ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಅರಸ್, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ, ಪ್ರಜಾಪ್ರಗತಿ ಪತ್ರಿಕೆ ಸಂಪಾದ ಕೆ.ಎನ್. ನಾಗಣ್ಣ, ಕೆಯುಡಬ್ಲೂ$Âಜೆ ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.
ಕ್ಯಾಪ್ಶನ್
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹಾಗೂ ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಅವರನ್ನು ಸನ್ಮಾನಿಸಲಾಯಿತು.