Advertisement

Moodbidri ಡಿ. 14ರಿಂದ 17: ಆಳ್ವಾಸ್‌ ವಿರಾಸತ್‌

11:52 PM Dec 09, 2023 | Team Udayavani |

ಮಂಗಳೂರು: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ನಡೆಸುವ “ಆಳ್ವಾಸ್‌ ವಿರಾಸತ್‌ 2023′ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವು ಡಿ. 14ರಿಂದ 17ರ ವರೆಗೆ ಮೂಡುಬಿದಿರೆಯಲ್ಲಿ ಸಪ್ತಮೇಳಗಳ ಮೆರುಗಿನೊಂದಿಗೆ ನಡೆಯಲಿದೆ.

Advertisement

ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಬಯಲು ರಂಗಮಂದಿರದಲ್ಲಿ ನಡೆಯಲಿರುವ ವಿರಾಸತ್‌ ಅನ್ನು ಇತ್ತೀಚೆಗೆ ಹುತಾತ್ಮರಾದ ವೀರಯೋಧ ಕ್ಯಾ| ಎಂ.ವಿ. ಪ್ರಾಂಜಲ್‌ ಅವರಿಗೆ ಅರ್ಪಣೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಡಿ. 14ರಂದು ಸಂಜೆ 5.30ಕ್ಕೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅವರಿಗೆ ಗೌರವ ರಕ್ಷೆ ನಡೆಯಲಿದೆ. 5.45ಕ್ಕೆ ರಾಜ್ಯಪಾಲರು ವಿರಾಸತ್‌ ಉದ್ಘಾಟಿಸುವರು. ಸಂಜೆ 6.35ಕ್ಕೆ ಮೆರವಣಿಗೆ ನಡೆಯಲಿದೆ. 100ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳ 3 ಸಾವಿರಕ್ಕೂ ಅಧಿಕ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಡಿ. 15ರಂದು ಸಂಜೆ 6ರಿಂದ 8ರ ವರೆಗೆ ಚಲನಚಿತ್ರ ಹಿನ್ನೆಲೆ ಗಾಯಕ ಬೆನ್ನಿ ದಯಾಲ್‌ ಅವರಿಂದ “ಗಾನ ವೈಭವ’, ಡಿ. 16ರಂದು ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್‌ ಅವರಿಂದ “ಭಾವ ಲಹರಿ’ ನಡೆಯಲಿದೆ.

ಮೂವರಿಗೆ
ವಿರಾಸತ್‌ ಪ್ರಶಸ್ತಿ
ಡಿ. 17ರ ಸಂಜೆ 5.15ಕ್ಕೆ ಆಳ್ವಾಸ್‌ ವಿರಾಸತ್‌-2023 ಪ್ರಶಸ್ತಿ ಪ್ರದಾನ ನಡೆಯಲಿದೆ. ವಯಲಿನ್‌ ವಾದಕ ಡಾ| ಮೈಸೂರು ಮಂಜುನಾಥ್‌, ಬಾನ್ಸುರಿ ಮಾಂತ್ರಿಕ ಡಾ| ಪ್ರವೀಣ್‌ ಗೋಡ್ಖಿಂಡಿ ಹಾಗೂ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಂಜೆ 6.30ರಿಂದ ಈ ಮೂವರಿಂದ “ತಾಳ-ವಾದ್ಯ- ಸಂಗೀತ’, ರಾತ್ರಿ 7.30ಕ್ಕೆ ವಿಜಯಪ್ರಕಾಶ್‌ ಅವರಿಂದ ಸಂಗೀತ ರಸ ಸಂಜೆ ನಡೆಯಲಿದೆ. 9.30ರಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ಇರಲಿದೆ.

Advertisement

ವಿರಾಸತ್‌ನಲ್ಲಿ ಬೆಳಗ್ಗೆ 9ರಿಂದ ರಾತ್ರಿ 1ರ ವರೆಗೆ ಅನ್ವೇಷಣಾತ್ಮಕ ಕೃಷಿಕ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಆವರಣದಲ್ಲಿ ನಡೆಯುವ 7 ಮೇಳಗಳ 750ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮೇಳವು ವಿಶೇಷ ಆಕರ್ಷಣೆಯಾಗಿದೆ ಎಂದು ಡಾ| ಆಳ್ವ ವಿವರಿಸಿದರು. ಆಳ್ವಾಸ್‌ ಕಾಲೇಜ್‌ನ ಉಪನ್ಯಾಸಕ ಪ್ರಸಾದ್‌ ಶೆಟ್ಟಿ ಉಪಸ್ಥಿತರಿದ್ದರು.

ವಿರಾಸತ್‌ ವೈಶಿಷ್ಟ್ಯಗಳು
– ಮೊದಲ ಬಾರಿಗೆ ಸಾಂಸ್ಕೃತಿಕ ಮೆರವಣಿಗೆಯ ಬಳಿಕ ಸಾಂಸ್ಕೃತಿಕ ರಥ, ಹಾಗೂ ಅದಕ್ಕೆ ವಾರಾಣಸಿಯ 10 ಮಂದಿಯ ತಂಡದಿಂದ ರಥಾರತಿ ಸಲ್ಲಿಕೆ.
– ಸಪ್ತ ಮೇಳಗಳಾದ ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಪ್ರದರ್ಶನ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಆಕರ್ಷಿಸಲಿವೆ.

ಮೇ ತಿಂಗಳಲ್ಲಿ ನುಡಿಸಿರಿ
ಮೇ ತಿಂಗಳಲ್ಲಿ ಕನ್ನಡ ನಾಡು ನುಡಿ ಸಮ್ಮೇಳನ “ನುಡಿಸಿರಿ’ ನಡೆಸಲು ತೀರ್ಮಾನಿಸಲಾಗಿದೆ. ಅದು ಜನ ಸೇರಿಸುವುದಕ್ಕಷ್ಟೇ ಸೀಮಿತವಾಗುವ ಬದಲು ನಿಜಕ್ಕೂ ಆಸಕ್ತಿ ಇರುವವರನ್ನು ಸೇರಿಸಿಕೊಂಡು ಜ್ವಲಂತ ವಿಚಾರಗಳನ್ನು ನುಡಿಸಿರಿಯಲ್ಲಿ ಚರ್ಚಿಸಲಾಗುವುದು ಎಂದು ಡಾ| ಮೋಹನ ಆಳ್ವ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next