Advertisement

ಸಾಹಿತ್ಯದಿಂದ ಬಹುಮುಖಿ ಚಿಂತನೆ ಸಾಧ್ಯ: ಡಾ|ಸಂಪತ್‌ ಕುಮಾರ್‌

08:19 PM Oct 12, 2021 | Team Udayavani |

ಮೂಡುಬಿದಿರೆ: “ನಾವಿರುವ ನಾಡು ಹಾಗೂ ಭಾಷೆಯ ಕುರಿತು ಹೆಮ್ಮೆ ನಮಗಿರದೇ ಹೋದರೆ ನಮ್ಮ ವ್ಯಕ್ತಿತ್ವ ಬೆಳೆಯಲು ಸಾಧ್ಯವಿಲ್ಲ. ಸಾಹಿತ್ಯವು ತಪ್ಪನ್ನು ತಿದ್ದಿ, ಬಹುಮುಖಿ ಚಿಂತನೆಗಳನ್ನು ಬೆಳೆಸುತ್ತದೆ ಹಾಗೂ ಲಲಿತ ಕಲೆಗಳಿಂದ ಆತ್ಮಶಕ್ತಿ ವೃದ್ಧಿಯಾಗುತ್ತದೆ. ಭಾಷೆಯಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯ’ ಎಂದು ಉಜಿರೆ ಎಸ್‌ಡಿಎಂ ಸ್ವಾಯತ್ತ ವಿದ್ಯಾಲಯದ ಕುಲಸಚಿವ ಡಾ| ಸಂಪತ್‌ ಕುಮಾರ್‌ ಹೇಳಿದರು.

Advertisement

ಮಿಜಾರಿನ ಆಳ್ವಾಸ್‌ ತಾಂತ್ರಿಕ ಮಹಾ ವಿದ್ಯಾಲಯದ ಕನ್ನಡ ಸಂಘದ ವತಿಯಿಂದ ಎರಡು ದಿನಗಳ ಪರ್ಯಂತ ನಡೆದ “ಕನ್ನಡ ಹಬ್ಬ – 2021′ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ” ಶಾಸ್ತ್ರೀಯ ಸ್ಥಾನವಿರುವ ಕನ್ನಡ ಭಾಷೆಯಲ್ಲಿ ಉನ್ನತ ಮಟ್ಟದ ಜ್ಞಾನವಿದೆ. ಆದರೆ ಭಾಷೆಯ ಸರಿಯಾದ ಅಧ್ಯಯನ ಆಗುತ್ತಿಲ್ಲ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯ-ಸಂಸ್ಕೃತಿಯನ್ನು ಪ್ರೀತಿಸುವ ಮನೋಭಾವ ಬೆಳೆಯಬೇಕಾಗಿದೆ’ಎಂದು ಅಭಿಪ್ರಾಯಪಟ್ಟರು.

ವೈದ್ಯಕೀಯ, ತಾಂತ್ರಿಕ ವಿಷಯ ಕನ್ನಡದಲ್ಲಿ ಹಿರಿಯ ಪತ್ರಕರ್ತ ಮನೋಹರ್‌ ಪ್ರಸಾದ್‌ ಮಾತನಾಡಿ, ಭಾಷೆ ಅಥವಾ ಸಾಹಿತ್ಯದಿಂದ ಎಲ್ಲವನ್ನೂ ಅಭಿವ್ಯಕ್ತಿ ಗೊಳಿಸಲು ಸಾಧ್ಯವಿಲ್ಲ, ಆದರೆ ಸರಿಯಾಗಿ ಅರ್ಥಗ್ರಹಣ ಮಾಡಿಕೊಂಡರೆ ಭಾಷೆಯ ಜತೆ ಸಾಂಗತ್ಯ ಹೆಚ್ಚುತ್ತದೆ ಎಂದರು. ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಲಹರಿ ಇದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ – ತಾಂತ್ರಿಕ ವಿಷಯಗಳೂ ಕನ್ನಡದಲ್ಲಿ ಸಿಗುವಂತಾಗಲಿ ‘ ಎಂದು ಅವರು ಹಾರೈಸಿದರು.

ಇದನ್ನೂ ಓದಿ:ಗುಡಿಬಂಡೆ: ಭಾರೀ ಗಾತ್ರದ ಮೀನಿನ ವಿಡಿಯೋ ಅಸಲಿಯತ್ತು ಬಯಲು

ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ಫೆನಾಂìಡಿಸ್‌ ಮಾತನಾಡಿದರು.ಎರಡನೇ ದಿನ ಅತಿಥಿಯಾಗಿ ಭಾಗವಹಿಸಿದ ಇತಿಹಾಸ ತಜ್ಞ ಡಾ| ಪುಂಡಿಕಾç ಗಣಪಯ್ಯ ಭಟ್‌ ಮಾತನಾಡಿ, ತಂತ್ರ ಜ್ಞಾನದ ಆವಿಷ್ಕಾರದಿಂದ ಪತ್ರ ವ್ಯವಹಾರದ ಹವ್ಯಾಸ ನಶಿಸಿಹೋಗಿದೆ’ ಎಂದು ವಿಷಾದಿಸಿದರು. ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ವ್ಯವಹಾರ, ಬರಹ ಹಾಗೂ ಶಿಕ್ಷಣದಲ್ಲಿ ಕನ್ನಡದ ಬಳಕೆಯಾದರೆ ಮಾತ್ರ ಭಾಷೆಯ ಉಳಿವು ಮತ್ತು ಬೆಳವಣಿಗೆಯಾಗಿದೆ ಸಾಧ್ಯ ಎಂದರು.

Advertisement

ಸಂಸ್ಥೆಯ ಮ್ಯಾನೇಜಿಂಗ್‌ ಟ್ರಸ್ಟಿ ವಿವೇಕ್‌ ಆಳ್ವ, ಆಳ್ವಾಸ್‌ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್‌ರಾಂ ಸುಳ್ಯ, ಕನ್ನಡ ಸಂಘದ ಸಂಯೋಜಕ ವಾಸುದೇವ್‌ ಶಹಾಪುರ್‌ , ವಿದ್ಯಾರ್ಥಿ ಸಂಯೋಜಕ ಮಹಾಂತೇಶ, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಭರತನಾಟ್ಯ ಪುಷ್ಪಾಂಜಲಿ ಮೊದಲಾದ ನೃತ್ಯ, ಹಾಡು, ಭಾಷಣ, ಏಕಪಾತ್ರಾಭಿನಯ, ಮೆಕ್ಯಾನಿಕಲ್‌ ವಿಭಾಗದ ಪ್ರಾಧ್ಯಾಪಕ, ಚಿತ್ರ ಕಲಾವಿದ ಗಣೇಶ್‌ ಆಚಾರ್ಯ ಅವರು ದಾರದಿಂದ ಮೂಡಿಸಿದ ಕನ್ನಡ ತಾಯಿ ಭುವನೇಶ್ವರಿಯ ಚಿತ್ರ, ಜೀವನ್‌ರಾಮ್‌ ಸುಳ್ಯ ನಿರ್ದೇಶನದ “ದೇವವೃತ ‘ ನಾಟಕ ಪ್ರದರ್ಶನ ಕನ್ನಡ ಹಬ್ಬದ ವಿಶೇಷತೆಗಳಾಗಿದ್ದವು.

 

Advertisement

Udayavani is now on Telegram. Click here to join our channel and stay updated with the latest news.

Next