Advertisement

‘ಯುವಜನತೆ ರಾಷ್ಟ್ರೀಯತೆ, ಸಂಸ್ಕೃತಿ ಉಳಿಸಿ ಬೆಳೆಸಿ’

05:03 AM Jan 27, 2019 | |

ಮೂಡುಬಿದಿರೆ: ವಿಶ್ವದಲ್ಲೇ ಭಾರತ ದಲ್ಲಿರುವಷ್ಟು ಯುವಶಕ್ತಿ ಇನ್ನೆಲ್ಲೂ ಇಲ್ಲ. ಯುವ ಶಕ್ತಿಯೇ ಭಾರತದ ಬೆಳವಣಿಗೆಯ ಮೂಲ. ಯುವಜನತೆ ರಾಷ್ಟ್ರೀಯತೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವವರಾಗಬೇಕು. ಅದ್ಭುತ ಸಾಧನೆಗಳ ಮೂಲಕ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಬ್ರಿಗೇಡಿಯರ್‌ ಡಿ.ಎಂ. ಪೂರ್ವಿಮಠ್ ವಿಎಸ್‌ಎಂ ಕರೆ ನೀಡಿದರು.

Advertisement

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿ ಸನಿಹ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ 70ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಧ್ವಜಾರೋಹಣಗೈದು ಅವರು ಮಾತನಾಡಿದರು.

ದೇಶ ಕಾಯುವ ಸೈನಿಕ, ಅನ್ನ ಕೊಡುವ ರೈತ, ಪೊಲೀಸ್‌, ಲಾಯರ್‌, ಡಾಕ್ಟರ್‌, ಸ್ವಚ್ಛತೆ ನಿರ್ವ ಹಿಸುವ ಝಾಡಮಾಲಿ ಹೀಗೆ ಯಾವುದೇ ಹುದ್ದೆ ಇರಲಿ, ಅದನ್ನು ಗೌರವಿಸಿ, ಸೃಜನಶೀಲರಾಗಿ, ಹೆಮ್ಮೆಯಿಂದ ದುಡಿಯಬೇಕು. ಆಗ ಮಾತ್ರ ವ್ಯಕ್ತಿಗತ ಮಾತ್ರವಲ್ಲ ದೇಶದ ಉದ್ಧಾರ ಸಾಧ್ಯ ಎಂದರು.

ಆಕರ್ಷಕ ಪಥಸಂಚಲನ
20 ನಿಮಿಷಗಳ ಕಾಲ ನಡೆದ ಆಕರ್ಷಕ ಪಥ ಸಂಚಲನದಲ್ಲಿ, ರಾಜ್ಯದ ವಿವಿಧ ಕಾಲೇಜುಗಳ ಭೂಸೇನೆ, ನೌಕಾದಳ ಮತ್ತು ವಾಯುದಳ ಎನ್‌ಸಿಸಿ ಘಟಕಗಳಿಗೆ ಸೇರಿದ ಕೆಡೆಟ್‌ಗಳು, ಎನ್‌ಸಿಸಿ ಬೆಟಾಲಿಯನ್‌ಗಳ ಕ್ಯಾಪ್ಟನ್‌ಗಳು, ಜತೆಗೆ 400 ರೋವರ್- ರೇಂಜರ್ ಹಾಗೂ ಸ್ಕೌಟ್ಸ್‌- ಗೈಡ್ಸ್‌ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಹೊನ್ನಾವರದ ಮದರ್‌ತೆರೆಸಾ ಬ್ಯಾಂಡ್‌ ಸಾಥ್‌ ನೀಡಿತ್ತು.

33,000 ಮಂದಿ
ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಎಲ್ಲ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬಂದಿ, ವಿಶೇಷ ಆಹ್ವಾನಿತರು, ಸಾರ್ವಜನಿಕರು ಸಹಿತ 33,000 ಜನರು ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದರು.

Advertisement

‘ಕೋಟಿಕಂಠೊ ಸೆ’ ಏಕತಾ ಹಾಡಿಗೆ ಸಾವಿರ ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿ ಸಮೂಹ ದನಿಗೂಡಿಸಿ, ತ್ರಿವರ್ಣಧ್ವಜವನ್ನು ಹಾಡಿನ ತಾಳಕ್ಕೆ ಲಯಬದ್ಧವಾಗಿ ಬೀಸಿ ಸಂಭ್ರಮವನ್ನು ಅನುಭವಿಸಿದರು.

ಎಲ್ಲೆಲ್ಲೂ ತ್ರಿವರ್ಣ
ನೆರೆದವರೆಲ್ಲರ ಕೈಯಲ್ಲಿದ್ದ ರಾಷ್ಟ್ರಧ್ವಜ, ತ್ರಿವರ್ಣ ಬಣ್ಣದ ಟೀ- ಶರ್ಟ್‌ ಧರಿಸಿದ್ದ 2,405 ವಿದ್ಯಾರ್ಥಿಗಳು ಸಭೆಯ ಮಧ್ಯದಲ್ಲಿ ಮೂಡಿಸಿದ್ದ ‘ಇಂಡಿಯಾ’, ತ್ರಿವರ್ಣದ ಕೊಡೆಗಳು, ಬಾನಂಗಳದಿ ಹೊಯ್ದಾಡಿದ ತ್ರಿವರ್ಣದ ಬೆಲೂನ್‌ಗಳ 36 ಗೊಂಚಲುಗಳು ..ಹೀಗೆ ಎಲ್ಲೆಲ್ಲೂ ತ್ರಿವರ್ಣ ಸಂಭ್ರಮ.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ, ಟ್ರಸ್ಟಿಗಳಾದ ವಿವೇಕ್‌ ಆಳ್ವ ಮತ್ತು ಡಾ| ವಿನಯ್‌ ಆಳ್ವ, ಮೀನಾಕ್ಷಿ ಜಯಕರ್‌ ಆಳ್ವ, ಡಾ| ಹನಾ ವಿನಯ್‌ ಆಳ್ವ, ಕ|ಅನಿಲ್‌ ನೌಟಿಯಲ್‌, ಕ| ಮನೋಜ್‌, ಕ| ಗ್ರೇಸಿಯನ್‌ ಸಿಕ್ವೇರ, ಕಾಲೇಜಿನ ಎನ್‌.ಸಿ.ಸಿ. ಅಧಿಕಾರಿ ಡಾ| ರಾಜೇಶ್‌, ಫ್ಲೈಯಿಂಗ್‌ ಆಫೀಸರ್‌ ಪರ್ವೆಝ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ಉಪನ್ಯಾಸಕಿ ದೀಪಾ ರತ್ನಾಕರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next