ಆಲೂರು: ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಆಕಸ್ಮಿಕ ನಡೆದು ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ನಾಶವಾದ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಭರತವಳ್ಳಿ ಗ್ರಾಮದಲ್ಲಿ ನಡೆದಿದೆ.
ಖಯಬ್ ಸಾಬ್ ಕೋಂ ಮಿರ್ಜಾ ಎಂಬವರಿಗೆ ಸೇರಿದ ಮನೆ ಬೆಂಕಿಗಾಹುತಿಯಾಗಿದೆ.
ನ.27ರ ಬುಧವಾರ ತಡರಾತ್ರಿ ಘಟನೆ ನಡೆದಿದ್ದು, ಮನೆಯಲ್ಲಿದ್ದ ಟಿವಿ, ಪ್ರಿಡ್ಜ್, ಬಟ್ಟೆ ಸೇರಿದಂತೆ ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಗಿವೆ.
ಬೆಂಕಿ ಬಿದ್ದ ಸಂದರ್ಭದಲ್ಲಿ ಮನೆ ಯಜಮಾನ ಖಯಬ್ ಸಾಬ್ ಹಾಗೂ ಪತ್ನಿ ಮನೆಯಲ್ಲಿದ್ದರೆಂದು ತಿಳಿದು ಬಂದಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಪ್ರತ್ಯಕ್ಷದರ್ಶಿಗಳು ಹಾಸನದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಹಾಸನದಿಂದ ಸ್ಥಳಕ್ಕೆ ಅಗ್ನಿಶಾಮಕ ವಾಹನ ಬರುವಷ್ಟರೊಳಗೆ ಗ್ರಾಮಸ್ಥರು ಮನೆಯಲ್ಲಿದ್ದ ಸಿಕ್ಕ ಸಿಕ್ಕ ಪಾತ್ರೆಯಲ್ಲಿ ನೀರು ತಂದು ಬೆಂಕಿ ನಂದಿಸಿದ್ದಾರೆ.
ಮಾಹಿತಿ ತಿಳಿದ ತಹಶೀಲ್ದಾರ್ ಸಿ.ಪಿ. ನಂದಕುಮಾರ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಭರತವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.