Advertisement

ವಿಶ್ವ ಕನ್ನಡ ಸಮ್ಮೇಳನಕ್ಕೆ ಕೂಡಿ ಬಾರದ ಮುಹೂರ್ತ

11:53 PM Jan 25, 2023 | Team Udayavani |

ದಾವಣಗೆರೆ: ಕರ್ನಾಟಕ ಏಕೀಕರಣದ 60ನೇ ವರ್ಷದ ಸವಿನೆನಪಿಗಾಗಿ ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವುದಾಗಿ 2017ರಲ್ಲೇ ಘೋಷಣೆಯಾಗಿದ್ದರೂ ಈವರೆಗೂ ಮುಹೂರ್ತ ಕೂಡಿ ಬಂದಿಲ್ಲ.

Advertisement

ಮಾಜಿ ಸಿಎಂ ಸಿದ್ದರಾಮಯ್ಯ 2017ರ ಮಾ. 15ರಂದು ಮಂಡಿಸಿದ್ದ ಬಜೆಟ್‌ನಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ 20 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರು. ಆದರೆ ಸಮ್ಮೇಳನ ಎಲ್ಲಿ ಎಂಬುದರ ಬಗ್ಗೆ ಪ್ರಸ್ತಾವಿಸಿರಲಿಲ್ಲ. ಕೆಲವು ದಿನಗಳ ಬಳಿಕ ದಾವಣಗೆರೆಯಲ್ಲಿಯೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂಬ ಅಧಿಕೃತ ಘೋಷಣೆ ಹೊರಬಿದ್ದಿತ್ತು.

ಮೈಸೂರು, ಬೆಳಗಾವಿಯ ಅನಂತರ ಮೂರನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ದಾವಣಗೆರೆಯಲ್ಲಿ ನಡೆಯಲಿದೆ ಎಂಬ ಸುದ್ದಿ ಕೇಳಿ ಗಂಡು ಮೆಟ್ಟಿನ ನಾಡು, ಹೋರಾಟಗಳ ತವರೂರು ದಾವಣಗೆರೆಯಲ್ಲಿ ಸಂಭ್ರಮ ಮನೆ ಮಾಡಿತ್ತು. 2011ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಶ್ವ ಕನ್ನಡ ಸಮ್ಮೇಳನದ ಅಧಿಕಾರಿಯಾಗಿದ್ದ ಸಂಗಮೇಶ ಬಾದವಾಡಗಿ ನೇತೃತ್ವದ ತಂಡ ದಾವಣಗೆರೆಗೆ ಆಗಮಿಸಿ ಸರಕಾರಿ ಬಾಲಕರ ಪ್ರೌಢಶಾಲಾ ಮೈದಾನ, ಬಾಪೂಜಿ ಎಂಬಿಎ ಆವರಣ ಒಳಗೊಂಡಂತೆ ಅನೇಕ ಕಡೆ ಸ್ಥಳ ಪರಿಶೀಲನೆ ನಡೆಸಿತು. ನಿವೃತ್ತ ಐಎಎಸ್‌ ಅಧಿಕಾರಿ ಎಸ್‌. ಲಕ್ಷ್ಮೀನಾರಾಯಣ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿದ್ದ ಸರಕಾರ ವೇದಿಕೆ, ಸ್ವಾಗತ, ಊಟೋಪಚಾರ, ವಿಚಾರಸಂಕಿರಣ ಮುಂತಾದ 15 ಸಮಿತಿಗಳ ರಚನೆಯನ್ನೂ ಮಾಡಿತ್ತು.

ಜಾಗತಿಕ ಮಟ್ಟದಲ್ಲಿ ಕನ್ನಡದ ಅಸ್ಮಿತೆ, ನಾಡು, ನುಡಿ, ಸಂಸ್ಕೃತಿ, ಕಲೆ, ಇತಿಹಾಸ, ಭವ್ಯತೆಯ ಅನಾವರಣಗೊಳಿಸುವ ಅತ್ಯುತ್ತಮ ವೇದಿಕೆಯಾಗಿದ್ದ ವಿಶ್ವ ಕನ್ನಡ ಸಮ್ಮೇಳನ ದಾವಣಗೆರೆಯಲ್ಲಿ ಜೂನ್‌ಜುಲೈಯಲ್ಲಿ ನಡೆಯುವುದು ಖಚಿತವಾಗಿತ್ತು. ಇಲ್ಲಿನ ಸಾಹಿತಿ, ಕನ್ನಡಾಭಿಮಾನಿಗಳು ಈ ಸಮ್ಮೇಳನವನ್ನು ಅವಿಸ್ಮರಣೀಯವಾಗಿಸಲು ಎಲ್ಲ ರೀತಿಯ ನೆರವು, ಸಹಕಾರ ನೀಡಲು ತುದಿಗಾಲ ಮೇಲೆ ನಿಂತಿದ್ದರು. ಆದರೆ ಅದೇ ವರ್ಷ ಕಾಡಿದ ಭೀಕರ ಬರ ಸಮ್ಮೇಳನಕ್ಕೆ ಬರೆ ಎಳೆದಿತ್ತು. ಬರದ ನಡುವೆ ಸಮ್ಮೇಳನ ನಡೆಸುವುದೇ ಎಂಬ ಆಕ್ಷೇಪ ನಾಡಿನ ಕೆಲವು ದಿಗ್ಗಜರಿಂದ ವ್ಯಕ್ತವಾಗಿತ್ತು.

2018ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್‌.ಎಸ್‌. ಮಲ್ಲಿಕಾರ್ಜುನ್‌ ನೇತೃತ್ವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಂದಿನ ಅಧ್ಯಕ್ಷ ಡಾಣ ಎಚ್‌.ಎಸ್‌. ಮಂಜುನಾಥ್‌ ಕುರ್ಕಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರನ್ನು ಭೇಟಿ ಮಾಡಿತ್ತು. ಇದರ ಫಲವಾಗಿ ನವೆಂಬರ್‌ನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಿಗದಿಯಾಗಿತ್ತು. ಆದರೆ ಅತಿಯಾದ ಮಳೆಯ ಕಾರಣ ಮುಂದೂಲ್ಪಟ್ಟಿತು.

Advertisement

ರಮೇಶ್‌ ವಿರುದ್ಧ ಕಾಂಗ್ರೆಸ್‌ ದೂರು
ಬಿಜೆಪಿಯ ಲೋಕಾ ತನಿಖಾಸ್ತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕೂಡ ಮತದಾರರಿಗೆ ಆಮಿಷ ಆರೋಪ ಸಂಬಂಧ ಕೇಸರಿ ನಾಯಕರ ವಿರುದ್ಧ ಪೊಲೀಸ್‌ ದೂರು ದಾಖಲಿಸಿದೆ. ಬೆಳಗಾವಿಯ ಸಭೆಯೊಂದರಲ್ಲಿ ಎದುರಾಳಿ ಅಭ್ಯರ್ಥಿ ಎಷ್ಟೇ ದುಡ್ಡು ಖರ್ಚು ಮಾಡಿದರೂ ಅದಕ್ಕಿಂತ 10 ಕೋಟಿ ರೂ. ಹೆಚ್ಚಿನ ಹಣ ಖರ್ಚು ಮಾಡಲು ನಾವು ಸಿದ್ಧವಿದ್ದೇವೆ. ಬಿಜೆಪಿಯಿಂದ ಪ್ರತೀ ಮತದಾರರಿಗೆ 6,000 ರೂ. ನೀಡಿ ಮತ ಕೇಳಲಾಗುವುದು ಎಂಬ ಹೇಳಿಕೆ ಆಧರಿಸಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ನಿಯೋಗ ಹೈಗ್ರೌಂಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿತು.

ಇವರಿಗೆ ಪ್ರೇರಣೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿರುದ್ಧವೂ ತನಿಖೆ ನಡೆಸುವಂತೆ ದೂರಿನಲ್ಲಿ  ಮನವಿ ಮಾಡಲಾಗಿದೆ.

ಮತ್ತೆ ವಿಳಂಬ ಸಾಧ್ಯತೆ?
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ| ಮಹೇಶ ಜೋಶಿ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಪರಿಷತ್ತು ಸಿದ್ಧ ಮತ್ತು ಬದ್ಧ ಎಂದೇನೋ ಹೇಳುತ್ತಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಚುನಾವಣೆ ಎದುರಾಗಲಿದೆ. ಇಂತಹ ಸಂದರ್ಭದಲ್ಲಿ ವಿಶ್ವ ಕನ್ನಡ ಸಮ್ಮೇಳನದಂತಹ ಬೃಹತ್‌ ಕಾರ್ಯಕ್ರಮ ಆಯೋಜಿಸಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. ಇದೆಲ್ಲ ನೋಡಿದರೆ ಸಮ್ಮೇಳನ ಮತ್ತಷ್ಟು ವಿಳಂಬವಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

- ರಾ. ರವಿಬಾಬು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next