Advertisement

ಅಡಿಕೆ ಎಲೆ ಹಳದಿ ರೋಗದ ತೋಟಗಳಲ್ಲಿ ಪರ್ಯಾಯ ಬೆಳೆ ಅನುಷ್ಠಾನ

01:54 AM Jun 14, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಳದಿ ಎಲೆ ರೋಗ ಬಾಧಿತ ಅಡಿಕೆ ತೋಟಗಳನ್ನು ಹಂತಹಂತವಾಗಿ ಇತರ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ಪುನಶ್ಚೇತನಗೊಳಿಸುವ ಯೋಜನೆಯ ಅನುಷ್ಠಾನಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ.

Advertisement

ಮೊದಲ ಹಂತದಲ್ಲಿ ಸರಕಾರದಿಂದ 3.25 ಕೋಟಿ ರೂ. ಮಂಜೂರಾ ಗಿದೆ. ಹಳದಿ ಎಲೆ ರೋಗ ಪೀಡಿತ ಸುಳ್ಯ, ಪುತ್ತೂರು ತಾಲೂಕುಗಳ ಅಡಿಕೆ ಬೆಳೆಗಾರರಿಂದ ಅರ್ಜಿ ಸ್ವೀಕರಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.
ಅಡಿಕೆ ತೋಟಗಳಲ್ಲಿ ಎಲೆ ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಕೃಶವಾಗುವ ಮರಗಳು ಬಳಿಕ ಸಾವನ್ನಪ್ಪುತ್ತವೆ. ಇದರಿಂದ ಸಾವಿರಾರು ರೈತರು ತೊಂದರೆಗೀಡಾಗಿದ್ದಾರೆ. ಒಂದೆಡೆ ಕ್ಯಾಂಪ್ಕೊ ಈ ಕುರಿತು ಸಂಶೋಧನೆಗೆ ಮುಂದಾಗಿದೆ. ಇನ್ನೊಂದೆಡೆ ತೋಟಗಾರಿಕೆ ಇಲಾಖೆಯವರೂ ಪ್ರಾಥಮಿಕ ಸಮೀಕ್ಷೆ ನಡೆಸಿದ್ದು, ಪ್ಯಾಕೇಜ್‌ ನೆರವಿನೊಂದಿಗೆ ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನ ಸಂಸ್ಥೆ (ಸಿಪಿಸಿಆರ್‌ಐ)ಗೆ ಈ ಕುರಿತು ಸಂಶೋಧನೆ ನಡೆಸಲು ಕೇಳಿಕೊಂಡಿದ್ದಾರೆ.

ಸಂಶೋಧನೆ, ಬೆಳೆಗೆ ನೆರವು
ಸಿಪಿಸಿಆರ್‌ಐಯಿಂದ ನಡೆಯುವ ಸಂಶೋ ಧನೆಗೆ ರಾಜ್ಯದ ಪರಿಹಾರ ಪ್ಯಾಕೇಜ್‌ನಿಂದ 1 ಕೋಟಿ ರೂ. ಮೊತ್ತವನ್ನು ಮೀಸಲಿರಿಸಲಾಗುವುದು. ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ, ರೋಗ ನಿಯಂತ್ರಣದ ಸಂಶೋಧನೆ ಕೈಗೊಳ್ಳ ಲಾಗುವುದು.

ಇನ್ನುಳಿದ 2.25 ಕೋ.ರೂ. ಮೊತ್ತವನ್ನು ಪರ್ಯಾಯ ಬೆಳೆ ಬೆಳೆಯುವ ರೈತರಿಗೆ ನೆರವು ರೂಪದಲ್ಲಿ ನೀಡಲಾಗುವುದು. ಇದಕ್ಕಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವೆಚ್ಚದ ನಿಯಮಾವಳಿಯ ಅನ್ವಯವೇ ರೈತರು ಪರ್ಯಾಯ ಬೆಳೆಗೆ ಮಾಡುವ ವೆಚ್ಚದ ಶೇ. 50ನ್ನು ಭರಿಸಲಾಗುವುದು.
ಯಾವ ಬೆಳೆ ಎನ್ನುವುದನ್ನು ನಾವು ರೈತರಿಗೆ ಸೂಚಿಸಿಲ್ಲ. ಅವರ ಪರಿಸ್ಥಿತಿಗೆ ಅನುಗುಣವಾಗಿ ಅವರೇ ಸೂಕ್ತವೆನಿಸುವ ತೋಟಗಾರಿಕೆ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ತಾಳೆ, ಬಾಳೆ, ರಂಬುಟಾನ್‌, ಮ್ಯಾಂಗೊಸ್ಟೀನ್‌ನಂತಹ ಬೆಳೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ಸಮೀಕ್ಷೆ
ಹಳದಿ ರೋಗ ಪ್ಯಾಕೇಜ್‌ಗೆ ಮುನ್ನ ತೋಟ ಗಾರಿಕೆ ಇಲಾಖೆಯವರು ರೋಗ ಬಾಧಿತ ಪ್ರದೇಶ ಗಳಲ್ಲಿ ಸಮೀಕ್ಷೆ ಕೈಗೊಂಡಿದ್ದರು. ಎರಡು ವರ್ಷಗಳ ಹಿಂದೆ ನಡೆದ ಸಮೀಕ್ಷೆಯಲ್ಲಿ 1217.38 ಹೆಕ್ಟೇರ್‌ ಪ್ರದೇಶ ಎಲೆಹಳದಿ ರೋಗಕ್ಕೆ ತುತ್ತಾ ಗಿರುವುದನ್ನು ಗುರುತಿಸಲಾಗಿತ್ತು. ಇದರಿಂದ ಒಟ್ಟು 5,588 ಅಡಿಕೆ ಬೆಳೆಗಾರರು ತೊಂದರೆಗೀಡಾಗಿರುವುದನ್ನು ಸರ್ವೇ ಗುರುತಿಸಿದೆ.

Advertisement

ಸರ್ವೇ ವೇಳೆ 2,092 ರೈತರು ತೆಂಗು ಬೆಳೆಸಲು, 581 ಮಂದಿ ಗೇರು ಬೆಳೆಸಲು, 1,546 ಮಂದಿ ಕೊಕ್ಕೊ, 97 ರೈತರು ತಾಳೆ ಬೆಳೆಸಲು; ಜತೆಯಲ್ಲಿ ಅಂತರ ಬೆಳೆ ಮತ್ತು ಮಿಶ್ರ ಬೆಳೆಯಾಗಿ ಕಾಳುಮೆಣಸು, ರಬ್ಬರ್‌, ಬಾಳೆ, ಜಾಯಿಕಾಯಿ ಬೆಳೆಸಲು ಆಸಕ್ತಿ ತೋರಿದ್ದರು. ಇದಕ್ಕಾಗಿ ಅವರಿಗೆ ಪ್ರೋತ್ಸಾಹಧನವಾಗಿ ಒಟ್ಟು 18.28 ಕೋಟಿ ರೂ. ನೀಡುವ ಪ್ರಸ್ತಾವವನ್ನು ತೋಟಗಾರಿಕೆ ಇಲಾಖೆಯು ಸರಕಾರಕ್ಕೆ ಸಲ್ಲಿಸಿತ್ತು.

ಅಡಿಕೆ ಮರ ಕಡಿದು ಬೇರೆ ನೆಡುವಂತಿಲ್ಲ
ಹಳದಿ ರೋಗ ಬಾಧಿತ ಪ್ರದೇಶಗಳಲ್ಲಿ ಪರ್ಯಾಯ ಬೆಳೆ ಬೆಳೆಯುವವರು ಅಂತರ ಬೆಳೆಯಾಗಿ ಮೊದಲು ಯಾವುದೇ ಬೆಳೆ ಹಾಕಬಹುದು. ಆದರೆ ಅಡಿಕೆ ಮರಗಳನ್ನು ಕಡಿದು ಬೇರೆ ನೆಡುವ ಹಾಗಿಲ್ಲ. ಅಡಿಕೆ ಮರಗಳಿಗೆ ಹಳದಿ ರೋಗ ತಗಲಿ ಅವು 5 ವರ್ಷಗಳಲ್ಲಿ ಸಾಯುತ್ತಿದ್ದು, ಆ ವೇಳೆಗೆ ಪರ್ಯಾಯ ಬೆಳೆ ಸಿದ್ಧವಾಗುವ ರೀತಿಯಲ್ಲಿ ನೋಡಿಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

20 ದಿನಗಳಿಂದ ಪರ್ಯಾಯ ಬೆಳೆಗಾಗಿ ರೈತರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಯಾವ ರೀತಿ ಸ್ಪಂದನೆ ಇದೆ ಎನ್ನುವುದನ್ನು ನೋಡಿಕೊಂಡು ಮುಂದಿನ ಹಂತದ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ.
– ಎಚ್‌.ಆರ್‌. ನಾಯಕ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next