Advertisement

Aloor: ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ

12:34 PM Jun 02, 2024 | Team Udayavani |

ಆಲೂರು : ವರದಿಗಾರಿಕೆಗೆ ತೆರಳಿದ್ದ ಸ್ಥಳೀಯ ಪತ್ರಕರ್ತನ ಮೇಲೆ ಗ್ರಾಮ ಪಂಚಾಯತ್ ಹಾಲಿ ಸದಸ್ಯ‌, ಮಾಜಿ ಅಧ್ಯಕ್ಷ ಹಾಗೂ ಆತನ ಸಹಚರರು ಹಲ್ಲೆ ಮಾಡಿರುವ ಘಟನೆ ಆಲೂರು ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಆಲೂರು ತಾಲೂಕಿನ ಸ್ಥಳೀಯ ಪತ್ರಕರ್ತ ವೀರಭದ್ರ ಸ್ವಾಮಿ ಹಲ್ಲೆಗೊಳಗಾದವರು.

ಬೈರಾಪುರ ಗ್ರಾ.ಪಂ. ನ ಮಾಜಿ ಅಧ್ಯಕ್ಷ ಕೆಂಚನಹಳ್ಳಿ ರವಿಕುಮಾರ್ ಎಂಬವರು ಇಲ್ಲಿನ ಗ್ರಾ.ಪಂ. ಅಧ್ಯಕ್ಷರಾಗಿದ್ದ ಸಂದರ್ಭ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಬೈರಾಪುರ ಗ್ರಾ.ಪಂ. ವ್ಯಾಪ್ತಿಯ ಕೆಂಚನಹಳ್ಳಿ  ಗ್ರಾಮದ ಸರ್ಕಾರಿ ಜಮೀನನ್ನು ಅಕ್ರಮವಾಗಿ ಆತನಿಗೆ ಮತ್ತು ಆತನ ತಂದೆ ಪುಟ್ಟಸ್ವಾಮಿಗೌಡ ಎಂಬವರ ಹೆಸರಿಗೆ ಖಾತೆ ಮಾಡಿಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು.

ಈ ಹಿನ್ನಲೆ ಸಂಬಂಧಪಟ್ಟ ಅಧಿಕಾರಿಗಳು ಕೆಂಚನಹಳ್ಳಿ ಗ್ರಾಮಕ್ಕೆ ಸ್ಥಳ ಪರಿಶೀಲನೆ ನಡೆಸಲು ಹೋದಂ ಸಂದರ್ಭ ಪತ್ರಕರ್ತ ವೀರಭದ್ರಸ್ವಾಮಿ ವರದಿ ಮಾಡಲು ತೆರಳಿದ್ದಾರೆ. ಈ ಸಂದರ್ಭ ರವಿಕುಮಾರ್ ತಮ್ಮ ಸಹಚರರ ಜೊತೆ ಸೇರಿ ಹಲ್ಲೆ ಮಾಡಿದ್ದಾರೆ. ಸ್ಥಳ ಪರಿಶೀಲನೆಯಲ್ಲಿದ್ದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಅವರನ್ನು ಬಿಡಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಪತ್ರಕರ್ತ ವೀರಭದ್ರಸ್ವಾಮಿ ಅವರಿಗೆ ಮೂಗು ಮತ್ತು ತಲೆಗೆ ಗಾಯಗಳಾಗಿದ್ದು, ಆಲೂರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಆಲೂರು ಪೊಲೀಸ್ ಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಈ ಹಿಂದೆ ರವಿಕುಮಾರ್ ಗ್ರಾ.ಪಂ. ನಲ್ಲಿ ಹಣ ಮಾಡುವ ಉದ್ದೇಶದಿಂದ  ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸೇರಿ ಹಲವು ಭ್ರಷ್ಟಾಚಾರ ತೊಡಗಿದ್ದರು ಎಂದು ತಿಳಿದು ಬಂದಿದ್ದು, ಹಲವು ಭ್ರಷ್ಟಾಚಾರದ ದೂರುಗಳು ಅವರ ಮೇಲೆ ದಾಖಲಾಗಿದೆ.

ಎರಡು ವರ್ಷಗಳ ಹಿಂದೆ ಹಿರಿಯ ಪತ್ರಕರ್ತ ಟಿ.ಕೆ. ಕುಮಾರಸ್ವಾಮಿ ಅವರ ಮೇಲೇಯೂ ಮಾರಣಾಂತಿಕ ಹಲ್ಲೆ ನಡಸಿ ಪ್ರಕರಣ ದಾಖಲಾಗಿತ್ತು ಎಂದು ತಿಳಿದು ಬಂದಿದೆ. ಯಾರು ಈತನ ಭ್ರಷ್ಟಚಾರದ ಬಗ್ಗೆ ಸುದ್ದಿ ಮಾಡುವರೋ ಅವರ ವಿರುದ್ಧ ಹಲ್ಲೆ ಮಾಡಿಸುವ ಮೂಲಕ ಬೆದರಿಕೆ ಹಾಕಿಸುತ್ತಿದ್ದಾನೆ ಎಂದು ಹೇಳಲಾಗುತ್ತದೆ.

ಕಾರ್ಯನಿರತ ಪತ್ರಕರ್ತರ ಧ್ವನಿ ಖಂಡನೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ತಾಲೂಕು ಅಧ್ಯಕ್ಷ ಟಿ.ಕೆ.ಕುಮಾರಸ್ವಾಮಿ ಮಾತನಾಡಿ, ಬೈರಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರವಿಕುಮಾರ್ ಮತ್ತು ಆತನ ಸಹಚರರು ಸ್ಥಳೀಯ ಪತ್ರಕರ್ತ ವೀರಭದ್ರಸ್ವಾಮಿ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ.

ರವಿಕುಮಾರ್ ಭ್ರಷ್ಟಾಚಾರ ಎಸಿಗಿದ್ದಾನೆ ಎನ್ನಲಾಗಿದ್ದ ಪ್ರಕರಣವೊಂದರಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಮುಂದಾಗಿದ್ದು, ಈ ಹಿನ್ನೆಲೆ ವರದಿ ಮಾಡಲು ತೆರಳಿದ್ದ ವೀರಭದ್ರಸ್ವಾಮಿ ಮೇಲೆ ಅಧಿಕಾರಿಗಳ ಎದುರಿನಲ್ಲಿಯೇ ಹಲ್ಲೆ ಮಾಡಿರುವುದು ಸಂಘ ಖಂಡಿಸುತ್ತದೆ. ನಿಷ್ಠಾವಂತಿಕೆಯಿಂದ ಕಾರ್ಯನಿರ್ವಹಿಸುವ ಪತ್ರಕರ್ತರ ಮನಸ್ಥಿತಿಯನ್ನು ಕುಗ್ಗಿಸುವ ಕೆಲಸ ಮಾಡಿದಂತಾಗಿದೆ. ಆದ್ದರಿಂದ ರವಿಕುಮಾರ್ ಹಾಗೂ ಆತನ ಸಹಚರರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next