Advertisement
ಹರನ ಜಡೆಯಿಂದ, ಹರಿಯ ಅಡಿಯಿಂದ, ಋಷಿಯ ತೊಡೆಯಿಂದ ಇಳಿದುಬಂದದ್ದೇ ಬಂತು. ಮಳೆಯ ಮಾಯೆ ಇಲ್ಲೊಂದು ದೈವಚಿತ್ತದ ದೃಶ್ಯವನ್ನು ಸೃಷ್ಟಿಸಿದೆ. ತೆಳ್ಳಗೆ ಒಂದು ಕಡೆ ಹರಿದು ಹೋಗಿರುವ ಪುಟ್ಟ ಕೊಡೆಯೊಂದನ್ನು ಹಿಡಿದು ತನ್ನನ್ನೂ ತನ್ನ ಭುಜದ ಮೇಲೆ ನಿಲ್ಲಲು ಸತಾಯಿಸುತ್ತಿರುವ ಅಗ್ಗದ ವ್ಯಾನಿಟಿ ಬ್ಯಾಗನ್ನೂ ರಕ್ಷಿಸಿಕೊಳ್ಳಲು ಹೆಣಗುತ್ತಿರುವ ಆ ಗಾರ್ಮೆಂಟ್ ಕೆಲಸದ ಯುವತಿ, ಊಟದ ಡಬ್ಬಿ ಸುತ್ತಿಟ್ಟುಕೊಂಡು ತಂದಿದ್ದ ಪ್ಲಾಸ್ಟಿಕ್ ಕವರ್‌ನ್ನು ಈಗ ತಲೆಯ ಮೇಲಿನ ಟೋಪಿಯಾಗಿ ಪರಿವರ್ತಿಸಿಕೊಂಡಿರುವ ಆ ನಡು ವಯಸ್ಕ ಕಾರ್ಮಿಕ, ತೊಯ್ದು ಕೆಟ್ಟುಹೋಗಿಬಿಟ್ಟರೆ ನಾಳಿನ ಊಟಕ್ಕೆ ಗತಿಯೇನೆಂಬ ಆತಂಕದಿಂದಲೇ ಡ್ರಿಲ್ಲಿಂಗ್ ಮೆಷೀನ್‌ನ ಟೂಲ್ ಕಿಟ್‌ನ್ನು ಅಕ್ಕಿ ಚೀಲದೊಳಗೆ ತುರುಕಿ ತಬ್ಬಿ ಹಿಡಿದು ನಿಲ್ಲಲು ಹೆಣಗುತ್ತಿರುವ ಬಡಗಿ, ತನ್ನ ಗಿರವಿ ಅಂಗಡಿ ಮುಚ್ಚಿ ಬಂದು ಜೇಬಿನಲ್ಲಿನ ಹಣದ ಬಗ್ಗೆಯೇ ಅಲೋಚಿಸಿಕೊಂಡು ನಿಂತ ಆ ಮಾರ್ವಾಡಿ, ಇಲ್ಲೊಬ್ಬಳು ತುಟಿಯ ಮೇಲೆ ಹಚ್ಚಿಕೊಂಡಿದ್ದ ಲಿಪ್‌ಸ್ಟಿಕ್ ಕರಗಿಸಿಕೊಂಡು ನಿಂತ ಅಮ್ಮ, ಮಳೆಯ ನೀರಿಗೆ ತೋಯ್ದ ಅವಳ ಸೆರಗು ಹಿಡಿದು ನಡುಗುತ್ತಿರುವ ಅವಳ ಮಗು, ಹಿಂದಿನ ಬಾಗಿಲಲ್ಲಿ ಹತ್ತಿ ನೆಂದು ತೊಪ್ಪೆಯಾಗಿ ಬೆಪ್ಪು ತಕ್ಕಡಿಯಂತೆ ದೂರದಲ್ಲಿ ನಿಂತ ಅದರ ಅಪ್ಪ ಎಲ್ಲರೂ ಸಿಟಿ ಬಸ್ಸೆಂಬ ಈ ಗೃಹೀತ ಭಾವದಲ್ಲಿ ಒಂದು ಕ್ಷಣ ಬೆಚ್ಚಗೆ ಅವಿತುಕೊಂಡಿದ್ದಾರೆ. ಅವಸರದ ಉಬ್ಬಸದಿಂದ ಒಳಕ್ಕೆ ನುಗ್ಗುವಾಗ ಆ ಯುವತಿಯ ಕೊಡೆಯ ಮೂತಿ ಅಲ್ಲೊಬ್ಬ ಮುದುಕನ ಸ್ವಾಟೆ ತಿವಿದಿದೆ. ಸ್ಸಾರಿ ಎಂಬ ಪದಕ್ಕೆ ಈಗ ಸಪೂರ ತೇಜಸ್ಸು. ಆ ಬಡಗಿಯ ಟೂಲ್ ಕಿಟ್‌ನ ಭಾರ ಮತ್ತೂಬ್ಬನ ಕಾಲ ಮೇಲೆ. ನೋವಿಗೆ ಮುನಿಸುಗೊಂಡರೂ ಹೊರಗಿನ ಎಗ್ಗಿಲ್ಲದ ಆರ್ಭಟದ ಮಳೆಯ ಮುಂದೆ ಜಗಳದ ಮಾತನಾಡುವ ಮನಸ್ಸಾಗುವುದಿಲ್ಲ. ಎಲ್ಲರಿಗೂ ಕ್ಷಮಿಸುವ ಆತುರ.
ಕೊಂಡು ಮುಚ್ಚಿಕೊಳ್ಳಲು ಹವಣಿಸುತ್ತಿವೆ. ಹಾಗಾಗುವ ಮುನ್ನವೇ ಓಡಿ ಬಂದು ಒಳಸೇರಿಕೊಳ್ಳುವ ಆತುರ ತೋರುತ್ತಿರುವ ನೆಂದ ಆಸಾಮಿಗಳನ್ನು ಬರಸೆಳೆದುಕೊಳ್ಳಲು ಬಸ್ಸಿನೊಳಗಿಂದಲೇ ನೆಂದ ಹಸ್ತಗಳು ಹೊರಚಾಚುತ್ತಿವೆ. ಓಡಿ ಒಳಬಂದ ಆ ಇಬ್ಬರು ಯುವಕರು ನುಗ್ಗಾಟದ ನಡುವೆಯೇ ತಮ್ಮ ಕ್ರಾಪುಗಳನ್ನು ತೀಡುತ್ತಾ ನೆಂದು ಹೋದ ತಮ್ಮದೇ ಕಾಲೇಜು ಪುಸ್ತಕಗಳನ್ನು ನೋಡಿಕೊಂಡು ಮುಸಿ ನಗುತ್ತಿದ್ದಾರೆ. ಅವರು ಇಲ್ಲಿ ಬೇಯ್ದು ಬೆಚ್ಚಗಾಗಿ ಈ ಸುಯೋಗದ ಭಾಗವಾಗಿ ನಿಧಾನ ಪಾಂತರಗೊಳ್ಳುವುದನ್ನು ನೋಡುವುದೇ ಇನ್ನೊಂದು ಸೊಗಸು. ಟಪ್ಪಟಪನೇ ಬಸ್ಸಿನ ಮೇಲೆ ಬೀಳುತ್ತಿರುವ ಜೋರು ಮಳೆಯ ಹನಿಗಳು ಕಿಟಕಿಗಳೆಲ್ಲವನ್ನೂ ಬಂದು ಮಾಡಿಕೊಂಡು ಒಳಗಿರುವ ಪ್ರತಿಯೊಂದು ಜೀವಕ್ಕೂ ಪದಗಳು ಸೋಕದ ಸುರಕ್ಷತೆಯ ಭಾವವನ್ನು ಪ್ರಾಪ್ತ ಮಾಡಿವೆ. ಉಸಿರ ಬಿಸಿಗಳು ಕಿಟಕಿ ಗ್ಲಾಸುಗಳ ಮೇಲೆ ಕುಳಿತು ಅವನ್ನು ಕೊಂಚ ಮಬ್ಟಾಗಿಸಿವೆ. ಮುಂದೆ ಬಸ್ಸೊಂದು ಕೆಟ್ಟು ನಿಂತಿದೆಯಂತೆ. ಅದಕ್ಕೇ ನಮ್ಮ ಬಸ್ಸು ಚಲಿಸುತ್ತಲೇ ಇಲ್ಲ ಎಂಬ ಸತ್ಯ ಗುಲ್ಲಾದ ಮೇಲಂತೂ ಹೊರಗೆ ಬೀಳುತ್ತಿರುವ ಮಳೆಯ ಆರ್ಭಟಕ್ಕೆ ಇನ್ನಷ್ಟು ಮೆರಗು ನೋಡಿ. ಇನ್ನೂ ಎಷ್ಟು ಹೊತ್ತೋ! ಅಲ್ಲಿ ಯಾರಿಗೂ ತಿಳಿದಿಲ್ಲ. ನಿಂತಾದರೂ
ಸರಿಯೇ ನಿಧಾನವಾಗಿಯಾದರೂ ಮನೆಯ ಕಡೆ ತೆರಳುತ್ತಿದ್ದೇವಲ್ಲಾ ಎಂಬ ಸೊಬಗಿನ ಸಮಾಧಾನವಷ್ಟೇ ಅಲ್ಲಿರುವವ ರೆಲ್ಲರಿಗೂ ಆಪ್ತ ಆಸರೆ. ಇನ್ನು ನನ್ನಿಂದಾಗದು ಎಂದು ಇಗ್ನಿಶನ್ ಆಫ್ ಮಾಡಿದ ಚಾಲಕನ ಇಂಧನ ಉಳಿತಾಯದ ಕ್ಷಮತೆ ಒಂದೇ ಕ್ಷಣದಲ್ಲಿ ಅಲ್ಲಿರುವ ಪ್ರಯಾಣಿಕರೆಲ್ಲರ ಹೃದಯಗಳ ಅಗ್ರೆಷನ್‌ನ್ನು ಆನ್ ಮಾಡಿಬಿಟ್ಟಿವೆ. ಸಾಮಾಜಿಕ ಸಂಕೋಚಗಳಾಗಿ ಹುದುಗಿಯೇ ಹೋಗಿದ್ದ ಆಪ್ತ ಆತಂಕಗಳ ಅನುಭೂತಿ ಗಳು ಒಂದೇ ಗುಕ್ಕಿನಲ್ಲಿ ಮುನ್ನೆಲೆಗೆ ಬಂದಿವೆ.
Related Articles
Advertisement
ದೂರದಲ್ಲೆಲ್ಲೋ ದೀನನಾಗಿ ಬಾಗಿಲಿನಲ್ಲಿ ನಿಂತ ಬಾಡಿಗೆದಾರನ ಕಾಣದ ಅಸಹಾಯಕ ಮುಖಚಿತ್ರ ಈಗ ನಮ್ಮ ಮನದ ಮೇಲೆ. ಅವನಿಗೆ ಮೆಲ್ಲನೆ ಮಾತನಾಡಲು ಹೇಳುವ ಆಲೋಚನೆ ಯಾರಿಗೂ ಇದ್ದಂತಿಲ್ಲ. ಇವನೊಬ್ಬ ಬಾಡಿಗೆದಾರನಿರಬಹುದು. “ಹಾಕ್ತೀನಿ ತಗೋಳ್ಳಿ ಸಾರ್, ನಾಳೀಕೆ ನಿಮ್ಮಕೌಂಟಿಗೆ’ ಎಂದು ಹೇಳಿ ಆ ಗೊಂದಲದಲ್ಲಿ ನಿಂತೇ ತನ್ನ ಮೊಬೈಲಿನ ವಾಟ್ಸಾಪ್ ಗ್ರೂಪಿನಲ್ಲೊಂದು ಎಮೋಜಿಯ ಕಮೆಂಟು ಜಡಾಯಿಸಿದ್ದಾನೆ.
“ಇಲ್ಲಿ ನೋಡಿದ್ರೆ ಹಿಂಗೆ. ಊರಾಗೆ ಮಳೇನೇ ಇಲ್ವಂತೆ. ಬೇಸಾಯ ನೋಡಿಕೊಳ್ಳೋಕೂ ಆಗ್ತಿಲ್ಲ. ಏನು ಬದುಕೋದು’ ಎಂದು ಇನ್ನೊಂದು ಕಡೆ ಸಣ್ಣದಾಗಿ ಸುರುವಾಗುವ ಆತ್ಮ ಸಂಕಟ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿಯ ಕೊರಳುಬ್ಬಿಸಿಬಿಟ್ಟಿದೆ. ಅವನು ಜೋರಾಗಿ “ಈ ಬೆಂಗ್ಳೂರ್ ಮೇಲೆ ಯಾರಾದ್ರೂ ಬಾಂಬ್ ಹಾಕಿ ಬಿಡಬಾರ್ದಾ. ಇದೇ ಟ್ರಾಫಿಕ್ಕು, ಇದೇ ಸಾಲದ ಬದುಕು ಸಾಕಾಗೋಗಿದೆ’ ಅಂದುಬಿಟ್ಟಿದ್ದಾನೆ. ಅಲ್ಲೆಲ್ಲಿಂದಲೋ ಅಪರಿಚಿತ ವ್ಯಕ್ತಿಯೊಬ್ಬ “ನಿಜ ಹೇಳ್ಬಿಟ್ಟೆ ಬಿಡು. ಇದ್ದೇನ್ಮಾಡ್ಬೇಕು? ಮುಗಿಸಿಕೊಂಡು ಅತ್ಲಾಗೆ ಹೋಗಿಬಿಡಬಹುದು’ ಎಂದು ಅಷ್ಟೇ ಗಟ್ಟಿಯಾಗಿದನಿಗೂಡಿಸಿದ್ದಾನೆ. ಅವರ ಅಪ್ಪಟ ಜೀವಂತಿಕೆಯ ಆ ಹತಾಶೆಗಳಿಗೆ ಇಡೀ ಬಸ್ಸು ಏಕೋಪಾದಿಯ ಮೌನ ರೋಮಾಂಚದ ಬಿಸಿಯನ್ನು ಅನುಭವಿಸಿದೆ. ಅಲ್ಲಿ ತಟ್ಟನೇ ಉದ್ಭವಿಸಿದ ಸಂಕಟದ ಸ್ನಿಗ್ಧ ಸೌಂದರ್ಯವೊಂದು ನೆರೆದ ಎಲ್ಲಾ ಅಪರಿಚಿತರುಗಳನ್ನು ಅರೆಗಳಿಗೆಯ ಆಪ್ತರನ್ನಾಗಿಸಿ ಮನಸೂರೆಗೊಳಿಸಿದೆ. ಅಲ್ಲೊಬ್ಬ, ಇಲ್ಲೊಬ್ಬ – ಸಮಾಜ ಸೃಷ್ಟಿಸಿದ ಜಾತಿಗಳು- ಧರ್ಮಗಳೆಲ್ಲದರ ಜನವೂ ಅಲ್ಲಿ ಸೇರಿರಬಹುದು. ಬೆಳ್ಳಗಿನ, ತೆಳ್ಳಗಿನ, ಕಪ್ಪಗಿನ, ಕೆಂಪಗಿನ ವ್ಯಕ್ತಿಗಳೆಲ್ಲರೂ ಆ ವೇದಿಕೆಯ ಮೇಲೆ ಒಟ್ಟಾಗಿದ್ದಾರೆ. ಎಲ್ಲರ ದಾರಿಗಳು, ತಿರುವುಗಳು ಎಲ್ಲವೂ ಬೇರೆಯಾದರೂ “ಬತ್ತಿ ಹೋಗಲಿ ಗಂಗೆಯೊಂದುಸಲ ಬಿರಿದು’ ಎಂಬಂತೆ ಒಕ್ಕೊರಲಿನಿಂದ ಒಮ್ಮೆಗೇ ಸಂಧಿಸಿದ ಜೀವಂತ ಎಳೆಗಳಾಗಿ ಅವರೆಲ್ಲರೂ ಕಾಣುತ್ತಿದ್ದಾರೆ. ಆ ಬಸ್ಸಿನ ವೇಗ ಹಾಗೂ ಅವರು ಜೀವಿಸುತ್ತಿರುವ ಬದುಕಿನ ಗತಿಗಳ ನಡುವೆ ವಿಶಿಷ್ಟವಾದೊಂದು ಸಮನ್ವಯವೊಂದು ಉದಯವಾಗುತ್ತಲೇ ಅವರ ದುಡಿಮೆಯ ಆತಂಕಗಳ ಜೊತೆಗೇ ಸಾಲವನ್ನು, ಕಲಹವನ್ನು, ನಿದ್ರೆ-ಎಚ್ಚರಗಳನ್ನು ಮೀರಿದ ಆಪ್ತ ಅನುಭೂತಿಯೊಂದು ಅಲ್ಲಿ ಆ ಕ್ಷಣಕ್ಕೆ ಪ್ರಾಪ್ತವಾಗುತ್ತಿದೆ. ಜಗದಲ್ಲಿ ಸಂತುಷ್ಟವೆನಿಸಿಕೊಂಡದ್ದೆಲ್ಲವೂ ಒಂದೇ, ಸಂಕಟಗಳು ಮಾತ್ರ ಬೇರೆಯೆಂಬ ಒಟ್ಟು ಅರ್ಥ ಬಿಂಬಿಸುವ ಖ್ಯಾತ ಹೇಳಿಕೆಯೊಂದು ಅರೆ ಕ್ಷಣ ಅನರ್ಥಗೊಂಡಿದ್ದರೆ ಸಂಕಟಕ್ಕಷ್ಟೇ ನಮ್ಮ ನಡುವೆ ಸಮಾನತೆಗಳನ್ನು, ಮಾನವೀಯ ತುಡಿತಗಳನ್ನು ಉಳಿಸಬಲ್ಲ ಕ್ಷಮತೆಯೆಂದು ಕ್ಷಣಕಾಲ ಅಲ್ಲಿ ಸಾಬೀತಾಗಿದೆ. ಸ್ವಲ್ಪ ಹೊತ್ತು. ಹೊಸ ಸ್ಟಾಪು. ಕಡಲೊಳಗೆ ಇಳಿದು ಹೊರಟೇ ಹೋದವರ ಭಾವ ಕೋಶಕ್ಕೆ ಹೇಳದೇ ಸಣ್ಣದೊಂದು ಹುರುಪು ತುಂಬಿ ಕಳಿಸಿ ಮುಂದಕ್ಕೆ ಚಲಿಸುತ್ತಿರುವ ಅದೇ ಬಸ್ಸು ಮತ್ತೆ ಓಡುತ್ತಿರುವುದು ಟಾರು ಕಿತ್ತುಹೋಗಿ ದೊಡ್ಡ ಗುಂಡಿಗಳಾಗಿರುವ ಅದೇ ರಸ್ತೆಗಳ ಮೇಲೆ. ತನ್ನದೇ ಗಾಲಿಗಳಿಗಂಟಿಗೊಂಡ ರಸ್ತೆಯುದ್ದಕ್ಕೂ ಚಿಮ್ಮುತ್ತಿರುವುದು ಒತ್ತಡ ತಾಳಲಾರದ ನೀರಿನ
ಉಗ್ಗೆಗಳು. ಮಾತನಾಡುತ್ತಿದ್ದವರು ಇಳಿದು ಹೋದ ಮೇಲೆ ತಮ್ಮ ಸ್ಟಾಪು ಕಾಯುತ್ತಾ ಸುಮ್ಮನೇ ನಿಂತ ಉಳಿದವರ ಮನಸ್ಸುಗಳಲ್ಲಿ ಮುಂದುವರೆದಿರುವುದು ಮತ್ತೆ ಮಳೆ ಹೊಯ್ದಾಗ ದಕ್ಕಿದ ಸುಖ-ದುಃಖಗಳ, ತೀರದ ಬಯಕೆಗಳ ಭಯಗಳು! ಖುಷಿಯೆಂದರೆ ಕೆಲಹೊತ್ತಿನ ಮುನ್ನ ಅವೆಲ್ಲವೂ ವಿಭಿನ್ನ ಆತಂಕಗಳ ನೆಪದಲ್ಲಿ ಎಲ್ಲರನ್ನೂ ಅರೆಕ್ಷಣ ಒಟ್ಟು ಮಾಡಿದ ಆಪ್ತ ಆನಂದಗಳು! ಇಲ್ಲೇ, ಪಕ್ಕದಲ್ಲಿಯೇ ಕುಂಟುತ್ತಾ ಸಾಗುತ್ತಿದೆ ಏಸಿ ಕಾರು. ಅದರೊಳಗೆ ಬಿಡದೇ ಸುರಿದ ಮಳೆಯ ಆರ್ಭಟಕ್ಕೆ ಅನವರತ ಹತಾಶನಾಗಿ, ಒಂಟಿಯಾಗಿ, ಅನ್ಯಮನಸ್ಕನಾಗಿ ಕುಳಿತಿದ್ದಾನೆ ಅದರ ಮಾಲೀಕ. ಕೊಳೆಯ ತೊಳೆವವರು ಇಲ್ಲ ಬಾ, ಬೇರೆ ಶಕ್ತಿಗಳು ಹೊಲ್ಲ ಬಾ, ಸತ್ತ ಜನರನ್ನು ಎತ್ತ ಬಾ ಎಂಬ ಬೇಂದ್ರೆ ಪದ್ಯ ಇಲ್ಲೆಲ್ಲಾ ಸೋಕಿ ಮರೆಯಾಗುತ್ತಿದೆ. *ಫಣಿಕುಮಾರ್ ಟಿ.ಎಸ್.