Advertisement

ಗ್ಯಾರಂಟಿ ಜತೆಗೆ ಒಪಿಎಸ್‌ ಭಾರಕ್ಕೂ ಹೆಗಲು ಕೊಡಬೇಕಿದೆ ಸರಕಾರ

09:00 PM May 26, 2023 | Team Udayavani |

ಬೆಂಗಳೂರು: ಪ್ರಣಾಳಿಕೆಯಲ್ಲಿ ನೀಡಿದ್ದ 5 ಗ್ಯಾರಂಟಿಗಳ ಜಾರಿಗೆ ಮಾರ್ಗೋಪಾಯ ಹುಡುಕುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರಕ್ಕೆ ಭವಿಷ್ಯದಲ್ಲಿ ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್‌) ಜಾರಿ ವಿಚಾರವೂ ದೊಡ್ಡ ಸವಾಲಾಗಲಿದ್ದು, ಇನ್ನೊಂದು ಆರ್ಥಿಕ ಭಾರಕ್ಕೆ ಹೆಗಲು ಕೊಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.
ಉತ್ತರ ಭಾರತದ ಹಲವು ರಾಜ್ಯಗಳಂತೆ ಕರ್ನಾಟಕದಲ್ಲೂ ಕಾಂಗ್ರೆಸ್‌ ಒಪಿಎಸ್‌ ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಇದರಿಂದಾಗಿ ರಾಜ್ಯ ಸರಕಾರಿ ನೌಕರರು ಹಾಗೂ ಅವರ ಕುಟುಂಬ ವರ್ಗ ಕಾಂಗ್ರೆಸ್‌ ಪರ ವಾಲಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಇಷ್ಟೊಂದು ಪ್ರಮಾಣದಲ್ಲಿ ಗೆಲುವು ಸಾಧಿಸುವುದರ ಹಿಂದೆ ಒಪಿಎಸ್‌ ಕೂಡ ಕಾರಣವಾಗಿತ್ತು ಎಂಬುದು ವಿಶ್ಲೇಷಕರ ಅಭಿಪ್ರಾಯ. ಹೀಗಾಗಿ ಸರಕಾರ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಿದ ಬಳಿಕ ಸರಕಾರಿ ನೌಕರರು ಒಪಿಎಸ್‌ ಗ್ಯಾರಂಟಿಗೆ ಪಟ್ಟು ಹಿಡಿಯುವ ಸಾಧ್ಯತೆ ನಿಚ್ಚಳವಾಗಿದೆ.

Advertisement

2006ರ ಎಪ್ರಿಲ್‌ 1ರಿಂದ ಅನ್ವಯವಾಗುವಂತೆ ಒಪಿಎಸ್‌ ಜಾರಿ ಮಾಡಲಾಗುವುದು ಎಂದು ಕಾಂಗ್ರೆಸ್‌ ಭರವಸೆ ನೀಡಿದೆ. ಸುಮಾರು 2.50 ಲಕ್ಷ ಸರಕಾರಿ ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ. ಜತೆಗೆ ಭವಿಷ್ಯದಲ್ಲಿ ನಿವೃತ್ತಿಯಾಗುವವರಿಗೂ ಇದು ಅನ್ವಯವಾಗುತ್ತದೆ. ಭರವಸೆ ಸರಕಾರಿ ನೌಕರರ ಪರವಾಗಿದ್ದರೂ ಆರ್‌ಬಿಐ ಈ ಬಗ್ಗೆ ಆಗಾಗ ಸಂಶಯಾಸ್ಪದ ನೋಟ ಚೆಲ್ಲಿದೆ. ಜತೆಗೆ ಆರ್ಥಿಕ ಹೊಣೆಗಾರಿಕೆಯನ್ನೂ ಸರಕಾರ ಹೊರಬೇಕಾಗುತ್ತದೆ. ಹಲವು ಗ್ಯಾರಂಟಿಗಳ ಮಧ್ಯೆ ತತ್‌ಕ್ಷಣಕ್ಕೆ ಸರಕಾರ ಇದನ್ನು ಜಾರಿಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಸರಕಾರಿ ನೌಕರರನ್ನು ಕಾಡುತ್ತಿದೆ.

ಇವೆಲ್ಲದರ ಮಧ್ಯೆ ಸರಕಾರ ರಚಿಸಿರುವ 7ನೇ ವೇತನ ಆಯೋಗದಿಂದ ಅಭಿಪ್ರಾಯ ಸಂಗ್ರಹ ಕಾರ್ಯ ಪ್ರಾರಂಭವಾಗಿದೆ. ಶುಕ್ರವಾರ ನಡೆದ ಸಭೆಯಲ್ಲಿ ಒಪಿಎಸ್‌ ಜಾರಿ ವಿಚಾರದ ಬಗ್ಗೆಯೂ ಸರಕಾರಿ ನೌಕರರ ಸಂಘದಿಂದ ಪ್ರಸ್ತಾವಿಸಲಾಗಿದೆ. ಹೀಗಾಗಿ ಈ ವಿಚಾರದಲ್ಲಿ ಸರಕಾರಕ್ಕೆ ಜಾರಿಕೊಳ್ಳುವುದಕ್ಕೆ ಅವಕಾಶ ಸಿಗಲಾರದು ಎಂದು ಹೇಳಲಾಗುತ್ತಿದೆ.

ಎಲ್ಲೆಲ್ಲಿ ಜಾರಿಯಾಗಿದೆ ?
ಯಾವೆಲ್ಲ ರಾಜ್ಯಗಳಲ್ಲಿ ಒಪಿಎಸ್‌ ಮರು ಜಾರಿ ಬಗ್ಗೆ ಕಾಂಗ್ರೆಸ್‌ ಭರವಸೆ ನೀಡಿತ್ತೋ ಅಲ್ಲೆಲ್ಲ ಅನುಷ್ಠಾನ ಮಾಡಲಾಗಿದೆ. ಹಿಮಾಚಲದಲ್ಲೂ ಒಪಿಎಸ್‌ ಜಾರಿಯಾಗುತ್ತಿದೆ. ರಾಜಸ್ಥಾನದಲ್ಲೂ ಜಾರಿ ಮಾಡಲಾಗಿದೆ. ಹಿಮಾಚಲ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಸ್ಟಾರ್‌ ಪ್ರಚಾರಕರಾಗಿದ್ದ ಗೆಹೊÉàಟ್‌ ಒಪಿಎಸ್‌ ಜಾರಿ ಮಾಡಲು ಸಾಧ್ಯ ಎಂಬುದಕ್ಕೆ ನಮ್ಮ ರಾಜ್ಯವೇ ಉದಾಹರಣೆ ಎಂದು ಭಾಷಣ ಮಾಡಿದ್ದು ಫ‌ಲ ನೀಡಿತ್ತು. ಛತ್ತೀಸ್‌ಗಡದಲ್ಲಿ ಭೂಪೇಶ್‌ ಬಘೇಲ ಸರಕಾರ ಕೂಡ ಒಪಿಎಸ್‌ ಜಾರಿಗೆ ನಿರ್ಧರಿಸಿದೆ. ಝಾರ್ಖಂಡ್‌ನ‌ಲ್ಲಿ ಕಾಂಗ್ರೆಸ್‌ ಮೈತ್ರಿ ಸರಕಾರವು ಸರಕಾರಿ ನೌಕರರ ಪಿಂಚಣಿ ಆಶ್ವಾಸನೆ ಪೂರ್ಣಗೊಳಿಸಿದೆ. ಪಂಜಾಬಿನಲ್ಲಿ ಆಪ್‌ ಸರಕಾರವೂ ಒಪಿಎಸ್‌ ಜಾರಿಗೆ ಆದೇಶ ಮಾಡಿದೆ.

ಪ್ರಬಲ ಮತ ಗಳಿಕೆ ವಿಷಯ
ಹಿಮಾಚಲ ಪ್ರದೇಶದ ಗೆಲುವಿನ ಬಳಿಕ ಒಪಿಎಸ್‌ ಜಾರಿ ಪ್ರಬಲ ಮತ ಗಳಿಕೆ ವಿಷಯ ಆಗುತ್ತದೆ ಎಂದು ಕಾಂಗ್ರೆಸ್‌ ಭಾವಿಸಿದ್ದು, ಹೀಗಾಗಿ ತನ್ನೆಲ್ಲ ಪ್ರಣಾಳಿಕೆಯಲ್ಲೂ ಈ ವಿಚಾರವನ್ನು ಪ್ರಸ್ತಾವಿಸುತ್ತಲೇ ಬಂದಿದೆ. ರಾಹುಲ್‌ ಗಾಂಧಿ ಕರ್ನಾಟಕದಲ್ಲಿ ನಡೆಸಿದ ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರಾದ ಎಂ.ಬಿ.ಪಾಟೀಲ್‌ ಹಾಗೂ ಶಿವಕುಮಾರ್‌ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಜೆಡಿಎಸ್‌ ಕೂಡ ತನ್ನ ಪ್ರಣಾಳಿಕೆಯಲ್ಲಿ ಒಪಿಎಸ್‌ ಜಾರಿಯನ್ನು ಮರುಪರಿಶೀಲಿಸುವುದಾಗಿ ಹೇಳಿತ್ತು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೂ ಕೊನೆ ಹಂತದಲ್ಲಿ ಒಪಿಎಸ್‌ ಜಾರಿ ಪರ ಮಾತನಾಡಿದ್ದರು.

Advertisement

ಒಪಿಎಸ್‌ ಬಗ್ಗೆ ಭರವಸೆ ನೀಡಿದ್ದ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ರಾಜ್ಯದಲ್ಲೂ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಈ ವಿಚಾರ ಪ್ರಸ್ತಾವವಾಗಿತ್ತು. ಈಗಷ್ಟೇ ಸರಕಾರ ಅಧಿಕಾರಕ್ಕೆ ಬಂದಿದೆ. ನಮಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೆಂಬ ಪೂರ್ಣ ನಂಬಿಕೆ ಇದೆ. ನಾವು ಕೂಡ ಕಾಲಾವಕಾಶ ಕೊಟ್ಟು ಕಾದು ನೋಡುತ್ತೇವೆ.
ಷಡಕ್ಷರಿ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ

ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next