ಮಂಗಳೂರು: ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ಕೌಶಲ್ಯ ಮಹತ್ವವಾದದ್ದು. ವ್ಯಕ್ತಿಯೊಬ್ಬನ ಸಂಪೂರ್ಣ ವಿಕಾಸಾಭಿವೃದ್ಧಿಗೆ ಕೌಶಲ್ಯಗಳ ಅನುಷ್ಠಾನ ಮುಖ್ಯ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಸಿಎ ಎ ರಾಘವೇಂದ್ರ ರಾವ್ ಅಭಿಪ್ರಾಯ ಪಟ್ಟರು.
ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಅಂಡ್ ಹ್ಯೂಮ್ಯಾನಿಟಿಸ್ ನ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ ಆಯೋಜಿಸಿದ ‘ಸ್ಕಿಲ್ ಅಪ್ ವಿಥ್ ಬಡೆಕ್ಕಿಲ ಪ್ರದೀಪ್’ ಒಂದು ದಿನದ ನಿರೂಪಣೆ, ಸಂವಹನ ಹಾಗೂ ವಾಯ್ಸ್ ಓವರ್ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚತುರತೆ ಈ ವೇಗದ ಜಗತ್ತಿಗೆ, ಶಿಕ್ಷಣಕ್ಕೆ, ಕಲಿಕೆಗೆ ಮುಖ್ಯ. ಅದು ಬಡೆಕ್ಕಿಲ ಪ್ರದೀಪ್ ರಂತಹ ಪ್ರತಿಭಾನ್ವಿತ ಸಂಪನ್ಮೂಲಗಳಿಂದ ವಿದ್ಯಾರ್ಥಿಗಳಿಗೆ, ಇಂದಿನ ಯುವ ಜನತೆಗೆ ಇನ್ನೂ ಹೆಚ್ಚಿನ ಮಟ್ಟಿಗೆ ದೊರೆಯುವಂತಾಗಲಿ ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಪಿ ಎಸ್ ಐತಾಳ್, ಬಿಗ್ ಬಾಸ್ ಕನ್ನಡ, ಮೆಟ್ರೋ ಧ್ವನಿ ಖ್ಯಾತಿಯ ಬಡೆಕ್ಕಿಲ ಪ್ರದೀಪ್, ಡೀನ್ ಡಾ. ಲವೀನ ಡಿಮೆಲ್ಲೋ, ಕಾರ್ಯಕ್ರಮದ ಸಂಯೋಜಕ ಪ್ರೊ|| ಶ್ರೀರಾಜ್ ಎಸ್. ಆಚಾರ್ಯ, ಡಾ. ವಿದ್ಯಾ ಎನ್, ಪ್ರೊ. ಸುಸ್ಮಿತಾ ಕೋಟ್ಯಾನ್, ಪ್ರೊ. ಜಾಯ್ಸನ್ ಕಾರ್ಡೋಜಾ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೆತರಾದವರಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಲಾಯಿತು.