Advertisement

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

12:21 AM May 27, 2022 | Team Udayavani |

ಉಡುಪಿ : ಕರಾವಳಿ ಅತಿಸೂಕ್ಷ್ಮ ಪ್ರದೇಶವಾಗಿದೆ. ಉಡುಪಿಯಲ್ಲಿ ಇತ್ತೀಚೆಗೆ ಹೊರಗಿನಿಂದ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚಿದ್ದು ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಜತೆಗೆ ಜಿಲ್ಲೆಯ ಎಲ್ಲ ಚೆಕ್‌ಪೋಸ್ಟ್‌ಗಳನ್ನು ಇನ್ನಷ್ಟು ಬಿಗಿಗೊಳಿಸಿ, ಹೊರಗಿನಿಂದ ಬರುವ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ವಿಶೇಷ ನಿಗಾ ವಹಿಸಲಾಗುವುದು ಎಂದು ಎಡಿಜಿಪಿ ಆಲೋಕ್‌ ಕುಮಾರ್‌ ಹೇಳಿದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ವಿವಿಧ ಸ್ತರದ ಅಧಿಕಾರಿಗಳ ಜತೆ ಸಭೆ ನಡೆಸಿ ಅನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕರಾವಳಿಯ ಸಮಸ್ಯೆಯನ್ನು ಅರಿಯುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಮೊದಲಿನಿಂದಲೂ ಈ ಪ್ರದೇಶದಲ್ಲಿ ಅಂಡರ್‌ವರ್ಲ್ಡ್ ಅನಂತರ ಬೇರೆ ಬೇರೆ ಪ್ರಕರಣ, ಈಗ ಹಿಜಾಬ್‌ ಹೀಗೆ ಸೂಕ್ಷ್ಮ ಪ್ರದೇಶವಾಗಿಯೇ ಉಳಿದಿದೆ. ಯಾವುದೇ ಪ್ರಕರಣ ಬಂದರೂ ಪೊಲೀಸ್‌ ಇಲಾಖೆ ಸಮರ್ಥವಾಗಿ ಎದುರಿಸಲಿದೆ ಎಂದರು.

ಉಡುಪಿಯಲ್ಲಿ ಹೊರಗಿನವರು ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಾನೂನಿನ ಇತಿಮಿತಿಯಲ್ಲಿ ಏನೇನೂ ಮಾಡಲು ಸಾಧ್ಯವೋ ಆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಕೆಲವು ತಾಂತ್ರಿಕ ವಿಷಯ ಇರುವುದರಿಂದ ತನಿಖೆ ಇನ್ನಷ್ಟು ಸಮಯ ಹಿಡಿಯಲಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದ್ದು ಸಮಿತಿ ಇನ್ನೂ ವರದಿ ನೀಡಿಲ್ಲ ಎಂದು ಹೇಳಿದರು.

ಶಾಂತಿಭಂಗಕ್ಕೆ ಅವಕಾಶವಿಲ್ಲ
ಸಮಸ್ಯೆ ಎಲ್ಲ ಕಾಲದಲ್ಲೂ ಇದ್ದೇ ಇರುತ್ತದೆ. ಹಿಜಾಬ್‌ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯ ಮಾಡುತ್ತಿದ್ದೇವೆ. ಶಾಂತಿಭಂಗ ಮಾಡಲು ಬಿಡುವುದಿಲ್ಲ. ಮಂಗಳೂರಿನಲ್ಲಿ ಫ‌ುಲ್‌ ಬಂದೋಬಸ್ತ್ ಮಾಡಲಾಗಿದೆ ಎಂದರು.

ಭಡ್ತಿ ಸಹಿತ ಸಿಬಂದಿ ವರ್ಗದ ಯಾವುದೇ ಸಮಸ್ಯೆಯಿದ್ದರೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಗಮನಕ್ಕೆ ತರಬಹುದು. ಭಡ್ತಿ ವಿಷಯವಾಗಿ ನ್ಯಾಯಾಲಯದ ಆದೇಶ ಹಾಗೂ ಇಲಾಖೆಯ ನಿಯಮವನ್ನು ಪಾಲನೆ ಮಾಡಲಾಗುವುದು ಎಂದರು.

Advertisement

ಐಜಿಪಿ ದೇವಜ್ಯೋತಿ ರೇ, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next