ಹೈದರಬಾದ್: ʼಪುಷ್ಪ-2ʼ ಸಿನಿಮಾದ ಪ್ರಿಮಿಯರ್ ಶೋ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ (Allu Arjun) ಪೊಲೀಸರು ಬಂಧಿಸಿದ್ದ ವಿಚಾರ ಟಾಲಿವುಡ್‌ನಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ.
ಡಿ.4 ರಂದು ಹೈದರಬಾದ್‌ನ ಸಂಧ್ಯಾ ಥಿಯೇಟರ್ ನಲ್ಲಿ ʼಪುಷ್ಪ-2ʼ (Pushpa 2: The Rule) ಸಿನಿಮಾದ ಪ್ರಿಮಿಯರ್ ಶೋ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ಥಿಯೇಟರ್‌ಗೆ ಭೇಟಿ ನೀಡಿದ್ದರು. ಅವರನ್ನು ನೋಡುವ ನಿಟ್ಟಿನಲ್ಲಿ ಉಂಟಾದ ನೂಕುನುಗ್ಗಲುನಿಂದಾಗಿ 35 ವರ್ಷದ ರೇವತಿ ಅವರು ಉಸಿರುಗಟ್ಟಿ ಮೃತಪಟ್ಟಿದ್ದರು.
ಈ ಸಂಬಂಧ ಪೊಲೀಸರು ಥಿಯೇಟರ್ ಮಾಲೀಕರು, ಸಿಬ್ಬಂದಿಗಳು ಹಾಗೂ ಅಲ್ಲು ಅರ್ಜುನ್ ವಿರುದ್ದ ಎಫ್ ಐಆರ್ ದಾಖಲಿಸಿದ್ದರು. ಶುಕ್ರವಾರ (ಡಿ.13ರಂದು) ವಿಚಾರಣೆಗಾಗಿ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಲಯ ಅಲ್ಲು ಅರ್ಜುನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಆದರೆ ತೆಲಂಗಾಣ ಹೈಕೋರ್ಟ್ ತುರ್ತು ವಿಚಾರಣೆ ನಡೆಸಿ ಜಾಮೀನು ನೀಡಿತು.
ಇದನ್ನೂ ಓದಿ: Upendra: ಜೈಲಿನಿಂದ ಹೊರ ಬರುತ್ತಿದ್ದಂತೆ ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ
ಒಂದು ದಿನ ಚಂಚಲಗುಡ ಜೈಲಿನಲ್ಲಿ ಕಳೆದ ಅಲ್ಲು ಅರ್ಜುನ್ ಶನಿವಾರ (ಡಿ.14 ರಂದು) ಆಚೆ ಬಂದಿದ್ದಾರೆ. ಈ ವೇಳೆ ಅವರ ಅಭಿಮಾನಿಯೊಬ್ಬರು ಪೆಟ್ರೋಲ್ ಹಾಕಿಕೊಂಡು ಆತ್ಮಹತ್ಯೆಗೆ ಮುಂದಾಗಿರುವ ಘಟನೆ ವರದಿಯಾಗಿದೆ.
ಅಲ್ಲು ಅರ್ಜುನ್ ಅವರನ್ನು ಕೂಡಲೇ ಜೈಲಿನಿಂದ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ವರದಿ ತಿಳಿಸಿದೆ.
ಸ್ಥಳದಲ್ಲಿದ್ದ ಪೊಲೀಸರು ಅಭಿಮಾನಿಯನ್ನು ರಕ್ಷಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಇನ್ನೊಂದೆಡೆ ಜೈಲಿನಿಂದ ಹೊರಗೆ ಬಂದಿರುವ ಅಲ್ಲು ಅರ್ಜುನ್ ಅವರನ್ನು ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಉಪೇಂದ್ರ, ಸುಕುಮಾರ್ ಸೇರಿದಂತೆ ಹಲವರು ಭೇಟಿ ಆಗಿದ್ದಾರೆ.