Advertisement

ಮೈತ್ರಿ ಮುರಿದರೆ ಹೊಸ ಮೈತ್ರಿ!

06:00 AM Sep 13, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಕೆಡವಲು ರಾಜ್ಯ ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿರುವ ಬೆನ್ನಲ್ಲೇ ಆ ಪಕ್ಷದ ಪ್ರಭಾವಿ ಮುಖಂಡರೊಬ್ಬರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜತೆ ರಹಸ್ಯ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

Advertisement

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ಶಿವಮೊಗ್ಗ ಮೂಲದ ಮುಖಂಡರು, ಕುಮಾರಸ್ವಾಮಿ ಜತೆ ಒಂದು ಗಂಟೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮತ್ತೂಂದು ಮೈತ್ರಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದರೂ ಆಶ್ಚರ್ಯವಿಲ್ಲ.

ಎಚ್‌.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿರುವ ಮಾಹಿತಿ ಪಡೆದ ಬಿಜೆಪಿ ಮುಖಂಡರು ತಮ್ಮ ಜತೆ ಇದ್ದ ಇತರೆ ಪಕ್ಷದ ನಾಯಕರಿಗೂ ತಿಳಿಸದೇ, ಎರಡು ಗಂಟೆಗಳ ಕಾಲ ರಹಸ್ಯವಾಗಿ ಚರ್ಚಿಸಿದ್ದಾರೆ. ಕೇಂದ್ರ ಬಿಜೆಪಿ ನಾಯಕರ ಅನುಮತಿ ಪಡೆದೇ ಈ ಭೇಟಿ ನಡೆದಿದೆ ಎನ್ನಲಾಗಿದೆ. ಲೋಕಸಭೆ ಚುನಾವಣೆ ನಂತರ ಅಥವಾ ಅದಕ್ಕೂ ಮುನ್ನವೇ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಸಂದರ್ಭ ಎದುರಾದರೆ ಬಿಜೆಪಿ-ಜೆಡಿಎಸ್‌ ಸರ್ಕಾರ ರಚನೆ ಮಾಡುವ ಕಾರ್ಯತಂತ್ರವೂ ಇದೆ.

ಕಾಂಗ್ರೆಸ್‌ನಿಂದಲೇ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಉಂಟಾಗಿ ಪಕ್ಷದ ಆಂತರಿಕ ಅಸಮಾಧಾನದಿಂದ ತೊಂದರೆ ಉಂಟಾಗುತ್ತಿರುವುದರಿಂದ ಅದನ್ನೇ ಮುಂದಿಟ್ಟು ಕಾಂಗ್ರೆಸ್‌ ಸಂಬಂಧ ಕಡಿತಗೊಳಿಸಿಕೊಳ್ಳಬಹುದು.

ಸಂಪುಟ ವಿಸ್ತರಣೆ ಬಳಿಕ ಭಿನ್ನಮತ ತೀವ್ರ:
ಸಂಪುಟ ವಿಸ್ತರಣೆ ಹಾಗೂ ಲೋಕಸಭೆ ಚುನಾವಣೆ ನಂತರ ಸಹಜವಾಗಿ ಕಾಂಗ್ರೆಸ್‌ನ ಆಂತರಿಕ ಭಿನ್ನಾಭಿಪ್ರಾಯ ತೀವ್ರವಾಗಬಹುದು. ಆಗ ಸರ್ಕಾರ ಪತನಗೊಂಡರೆ ಬಿಜೆಪಿ -ಜೆಡಿಎಸ್‌ ಸರ್ಕಾರ ರಚನೆ ಮಾಡಬಹುದು ಎಂಬ ಲೆಕ್ಕಾಚಾರ ನಡೆದಿದೆ. ಈ ಮಾತುಕತೆ ನಂತರ ಇದರ ವಿವರವನ್ನು ಬಿಜೆಪಿ ನಾಯಕರು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೂ ತಲುಪಿಸಿದ್ದಾರೆ ಎಂದು ಹೇಳಲಾಗಿದೆ.

Advertisement

ಸಮ್ಮಿಶ್ರ ಸರ್ಕಾರ ಪತನಗೊಂಡು ಬದಲಿ ಸರ್ಕಾರ ರಚನೆಯಾಗಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ರಾಜ್ಯದ ಬಹುತೇಕ ಬಿಜೆಪಿ ನಾಯಕರಿಗೆ ಇಷ್ಟವಿಲ್ಲ. ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಸರ್ಕಾರ ಕೆಡವಿದರೆ ಒಕ್ಕಲಿಗ ಸಮುದಾಯದ ಆಕ್ರೋಶಕ್ಕೂ ತುತ್ತಾಗುವ ಆತಂಕವೂ ಇದೆ. ಜತೆಗೆ, ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಪಕ್ಷದಲ್ಲಿ ಬಳ್ಳಾರಿ ಗಣಿ ರೆಡ್ಡಿ ಸಹೋದರರು ಮೇಲುಗೈ ಸಾಧಿಸುತ್ತಾರೆ ಎಂಬ ಆತಂಕವೂ ಇದೆ. ಹೀಗಾಗಿ, ತಕ್ಷಣಕ್ಕೆ ಸಮ್ಮಿಶ್ರ ಸರ್ಕಾರ ಪತನವಾಗುವುದು ಅವರಿಗೆ ಬೇಕಿಲ್ಲ ಎಂದು  ತಿಳಿದು ಬಂದಿದೆ.

ಶಿವಮೊಗ್ಗದವರೇ ಡಿಸಿಎಂ?:
ಜೆಡಿಎಸ್‌-ಬಿಜೆಪಿ ಸರ್ಕಾರ ರಚನೆಯಾದರೆ ಶಿವಮೊಗ್ಗ ಮೂಲದ ಮುಖಂಡರಿಗೆ ಉಪ ಮುಖ್ಯಮಂತ್ರಿ ಪಟ್ಟದ ಭರವಸೆಯೂ ಸಿಕ್ಕಿದೆ. ಇವರು ಮೊದಲಿನಿಂದಲೂ ದೇವೇಗೌಡರ ಕುಟುಂಬದ ಜತೆ ಉತ್ತಮ ಸಂಬಂಧ ಹೊಂದಿದ್ದಾರೆ. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು “ರಂಗಪ್ರವೇಶ’ ಮಾಡಿದ್ದು, ತಮ್ಮ ಹಳೆಯ ಸಂಪರ್ಕ ಬಳಸಿ ದೆಹಲಿಯ ಹಿರಿಯ ಬಿಜೆಪಿ ನಾಯಕರಿಗೆ ಸರ್ಕಾರ ಉರುಳಿಸುವ ಯತ್ನಕ್ಕೆ ಅನುಮತಿ ನೀಡದಂತೆ ನೋಡಿಕೊಂಡಿದ್ದಾರೆ ಎಂದೂ  ಹೇಳಲಾಗಿದೆ.

ಡಿಕೆಶಿ ಪ್ರಕರಣಕ್ಕೆ ಸದ್ಯ ಬ್ರೇಕ್‌?:
ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗಬಹುದು ಎಂದು ಹೇಳಲಾಗಿದ್ದ ಡಿ.ಕೆ.ಶಿವಕುಮಾರ್‌ ವಿರುದ್ಧದ ಪ್ರಕರಣವನ್ನೂ ದೆಹಲಿ ಮಟ್ಟದಲ್ಲೇ ನಿಭಾಯಿಸಲಾಗಿದೆ. ಇಡಿ ಎಫ್ಐಆರ್‌ ತೂಗುಕತ್ತಿಯಿಂದ ಪರಾಗುವ ಭರವಸೆ ದೊರೆತ ನಂತರವಷ್ಟೆ ಡಿ.ಕೆ.ಶಿವಕುಮಾರ್‌ ನಿರಾಳವಾಗಿದ್ದಾರೆ. ಕೇಂದ್ರದ ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರ  ಉರುಳಿಸುವ ಪರ ಇಲ್ಲ ಎಂಬ ಮಾಹಿತಿಯೂ ದೊರೆತಿರುವುದರಿಂದ ಅವರೂ “ಅಖಾಡ’ಕ್ಕೆ ಇಳಿದು ಬಿಜೆಪಿ ರಾಜ್ಯ ನಾಯಕರಿಗೆ ಸವಾಲು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.

ಫೋನ್‌ ಟ್ಯಾಪಿಂಗ್‌ ಮಾಹಿತಿ ಶೀಘ್ರ ಬಹಿರಂಗ
ಫೋನ್‌ ಟ್ಯಾಪಿಂಗ್‌ ಮೂಲಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರ ಜತೆ ಬಿಜೆಪಿ ನಾಯಕರು ಸಂಪರ್ಕ ಮಾಡಿರುವುದು ಹಾಗೂ ಹಣದ ಆಮಿಷವೊಡ್ಡಿರುವ ಮಾಹಿತಿ ಸಂಗ್ರಹಿಸಲಾಗಿದ್ದು, ಅದನ್ನು ಬಹಿರಂಗಗೊಳಿಸುವ ಸಾಧ್ಯತೆಯೂ ಇದೆ. ಕಳೆದ ಬುಧವಾರದಿಂದ ಭಾನುವಾರದವರೆಗೆ 15 ಕಾಂಗ್ರೆಸ್‌, 5 ಜೆಡಿಎಸ್‌ ಶಾಸಕರ ಜತೆ ಬಿಜೆಪಿ ನಾಯಕರು ಸಂಪರ್ಕಿಸಿರುವ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ.

ಶಾಸಕರ ಬೆಲೆ 50 ಕೋಟಿ: ದಿನೇಶ್‌ ಆರೋಪ
ಬಿಜೆಪಿಯವರು ಅಧಿಕಾರದ ದಾಹದಿಂದ ಹೇಗಾದರೂ ಮಾಡಿ ಸರ್ಕಾರವನ್ನು ಪತನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಎಲ್ಲ ಕಾಂಗ್ರೆಸ್‌ ಶಾಸಕರಿಗೆ 20, 50, ಕೋಟಿ ಆಮಿಷ ಒಡ್ಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌ ನೇರವಾಗಿ ಆರೋಪಿಸಿದ್ದಾರೆ. “ಉದಯವಾಣಿ’ಗೆ ನೇರಾ ನೇರ ಸಂದರ್ಶನ ನೀಡಿದ ಅವರು, ಕಾಂಗ್ರೆಸ್‌ ಶಾಸಕರ ಮನೆಗಳಿಗೆ ಹೋಗಿ ಹೆಂಡತಿ ಮಕ್ಕಳ ಮೂಲಕ ಒತ್ತಡ ಹೇರುತ್ತಿದ್ದಾರೆ. ಪ್ರಜಾತಂತ್ರ ವಿರೋಧಿ ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ. ಈ ಸಂಬಂಧ ನಾವು ಮಲ್ಲೇಶ್ವರಂ ಶಾಸಕ ಅಶ್ವಥ್‌ ನಾರಾಯಣ, ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್‌, ಬೊಮ್ಮನಳ್ಳಿ ಶಾಸಕ ಸತೀಶ್‌ ರೆಡ್ಡಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವ ಚಿಂತನೆ ಮಾಡುತ್ತಿದ್ದೇವೆ ಎಂದಿದ್ದಾರೆ.

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next