ಮಡಿಕೇರಿ: ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡ ಮಡಿಕೇರಿಯ ಚಾಮುಂಡೇಶ್ವರಿ ನಗರದ ಸಂತ್ರಸ್ತ ಮಹಿಳೆಯೊಬ್ಬರಿಗೆ ನೀಡಲಾಗಿದ್ದ ಪರಿಹಾರದ ಹಣದಲ್ಲಿ ಸುಮಾರು 40 ಸಾವಿರ ರೂ.ಗಳನ್ನು ನಗರಸಭಾ ಸಿಬಂದಿಯೊಬ್ಬರು ಬೆದರಿಕೆವೊಡ್ಡಿ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿ ಮಡಿಕೇರಿ ರಕ್ಷಣಾ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರಸಭಾ ಕಚೇರಿ ಎದುರು ದಿಢೀರ್ ಧರಣಿ ಕುಳಿತ ವೇದಿಕೆಯ ಪ್ರಮುಖರು ಬಾಕಿ ಉಳಿಸಿಕೊಂಡಿರುವ ಪರಿಹಾರದ ಹಣವನ್ನು ತಕ್ಷಣ ನೀಡಬೇಕು ಮತ್ತು ತಪ್ಪಿತಸ್ಥ ಅಧಿಕಾರಿಯನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಸಂಘಟನೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಮಾತನಾಡಿ, ಚಾಮುಂಡೇಶ್ವರಿ ನಗರ ಬಡಾವಣೆಯ ನೂರ್ ಜಹಾನ್ ಎಂಬ ಸಂತ್ರಸ್ತ ಮಹಿಳೆಗೆ ಪರಿಹಾರವಾಗಿ ಒಟ್ಟು 1.40 ಲಕ್ಷ ರೂ. ನೀಡಲಾಗಿತ್ತು. ಆದರೆ ಪರಿಹಾರ ವಿತರಣೆಗೆ ಸಂಬಂಧಿಸಿದ ನಗರಸಭೆಯ ಅಧಿಕಾರಿಯೊಬ್ಬರು ಬೆದರಿಕೆಯೊಡ್ಡಿ 40 ಸಾವಿರ ರೂ. ಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದರು.
ಫಲಾನುಭವಿಗಳ ಆಯ್ಕೆಯಲ್ಲಿ ಗೊಂದಲಗಳಿದ್ದರೆ ಪರಿಶೀಲಿಸಿ ಪರಿಹಾರ ವಿತರಣೆಯಲ್ಲಿ ಲೋಪವಾಗಿದ್ದರೆ ಸರಿಪಡಿಸಬೇಕು. ಆದರೆ ಏಕಾಏಕಿ ನಗರಸಭೆಯ ಅಧಿಕಾರಿಯೊಬ್ಬರು ದೌರ್ಜನ್ಯದಿಂದ ಸರ್ಕಾರದ ಹಣವನ್ನು ಕಸಿದುಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ವಿಕಲಚೇತನ ಪುತ್ರನನ್ನು ಹೊಂದಿರುವ ಸಂತ್ರಸ್ತೆ ಅಸಹಾಯಕರಾಗಿದ್ದು, ತತ್‌ಕ್ಷಣ ಹಣವನ್ನು ಮರಳಿಸಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪೌರಾಯುಕ್ತ ರಮೇಶ್ ಅವರು ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ಇಲ್ಲ, ಸೂಕ್ತ ತನಿಖೆ ಕೈಗೊಂಡು ಸಂಬಂಧಿಸಿದ ಅಧಿಕಾರಿಗೆ ನೊಟೀಸ್ ನೀಡಲಾಗುವುದು. ನಂತರ ನಿಜಾಂಶ ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನ್ಯಾಯ ಸಿಗದಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪವನ್ ಪೆಮ್ಮಯ್ಯ ತಿಳಿಸಿದರು.
ಖಜಾಂಚಿ ಉಮೇಶ್ ಗೌಡ, ನಿರ್ದೇಶಕ ಪಾಪು ರವಿ, ವಿನು, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ, ಸಂತ್ರಸ್ತೆ ನೂರ್‌ಜಹಾನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.