ಪಾಂಡವಪುರ: ತಾಲೂನ ಮಹದೇಶ್ವರಪುರ ಗ್ರಾಮದ ಹೊರವಲಯದ ಬೀರನಹಳ್ಳಿ ಎಲ್ಲೆಯ ಸರ್ಕಾರಿ ಗೋಮಾಳವನ್ನು ಇಂಗಲುಕುಪ್ಪೆ ಗ್ರಾಮದ ವ್ಯಕ್ತಿಯೊಬ್ಬರು ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಮಹದೇಶ್ವರ, ಇಂಗಲಕುಪ್ಪೆ ಗ್ರಾಮಸ್ಥರು ಪ್ರತಿಭಟಿಸಿದರು.
ಗ್ರಾಮದ ಹೊರವಲಯದ ಬೀರನಹಳ್ಳಿ ಎಲ್ಲೆಯಲ್ಲಿರುವ ಆಂಜನೇಯಸ್ವಾಮಿ ದೇಗುಲದ ಮುಂಭಾಗವಿರುವ ಸರ್ಕಾರಿ ಗೋಮಾಳದಲ್ಲಿ ಬಳಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜಮೀನು ಖಾತೆ ಮಾಡಿಸಿಕೊಂಡಿರುವ ವ್ಯಕ್ತಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೀರನಹಳ್ಳಿ ಎಲ್ಲೆಯಲ್ಲಿರುವ ಸರ್ವೇ.32ರಲ್ಲಿ 6. 9 ಎಕರೆ ಹಾಗೂ ಸರ್ವೇನಂ. 33ರಲ್ಲಿ 6.39 ಎಕರೆ ಸರ್ಕಾರಿ ಗೋಮಾಳದ ಜಮೀನು ಕಳೆದ 30 ವರ್ಷಗಳಿಂದ ಯಾರ ಅನುಭವವಿಲ್ಲದೆ ಪಾಳುಬಿದ್ದಿದೆ.
ಈ ಜಮೀನನ್ನು ಇಂಗಲಕುಪ್ಪೆ ಗ್ರಾಮದ ಸಣ್ಣತಾಯಮ್ಮ ಕೋಂ ಪುಟ್ಟರಾಮೇಗೌಡ ಎಂಬುವರು ಹತ್ತಾರು ವರ್ಷಗಳಿಂದ ಅನುಭವದಲ್ಲಿ ಇದ್ದೇವೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ 4.10 ಎಕರೆ ಜಮೀನನ್ನು ಖಾತೆ ಮಾಡಿಸಿಕೊಂಡಿದ್ದಾರೆ. ಸರ್ಕಾರಿ ಗೋಮಾಳದಲ್ಲಿದ್ದ ಅರಣ್ಯ ಇಲಾಖೆ ಮರಗಳನ್ನು ಕಳೆದ 2-3 ವರ್ಷಗಳ ಹಿಂದೆ ತೆರವು ಗೊಳಿಸಲಾಗಿದೆ. ಅಕ್ರಮ ಖಾತೆ ಮಾಡಿಸಿಕೊಂಡಿರುವುದರಲ್ಲಿ ಹಿಂದಿನ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರ ಕೈವಾಡವೂ ಇದೆ ಎಂದು ಆರೋಪಿಸಿದರು. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುವಂತೆ ಒತ್ತಾಯಿಸಿದರು.
ಉಪವಿಭಾಗಾಧಿಕಾರಿ ಭೇಟಿ: ವಿಷಯ ತಿಳಿದ ಉಪವಿಭಾಗಾ ಧಿಕಾರಿ ನಂದೀಶ್ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಬಳಿಕ ಮಾತನಾಡಿ, ಮಹದೇಶ್ವರಪುರ ಗ್ರಾಮದ ಹೊರವಲಯದ ಸರ್ಕಾರಿ ಗೋಮಾಳದಲ್ಲಿ ಇಂಗಲಕುಪ್ಪೆ ಗ್ರಾಮದ ಸಣ್ಣತಾಯಮ್ಮ ಕೋಂ.ಪುಟ್ಟರಾಮೇಗೌಡ ಅವರಿಗೆ 4.10 ಗುಂಟೆ ಜಮೀನು 1997ರಲ್ಲಿ ಮುಂಜಾಗಿರುವ ದಾಖಲೆ ಇದೆ. ಆ ಹಿನ್ನೆಲೆಯಲ್ಲಿ ನಾನು ಇವರು ಅನುಭವದಲ್ಲಿ ಇದ್ದಾರೆಯೇ? ಇಲ್ಲವೋ? ಎನ್ನುವುದನ್ನು ಪರಿಶೀಲಿಸಲಾಗಿದೆ. ಆದರೆ, ಇಲ್ಲಿನ ಗ್ರಾಮಸ್ಥರು ಅಕ್ರಮ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು 10 ವರ್ಷಗಳ ಹಿಂದಿನ ಸ್ಯಾಟಲೈಟ್ ಚಿತ್ರಗಳನ್ನು ತರಿಸಿಕೊಳ್ಳಲಾಗುವುದು. ಆ ಬಳಿಕ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದರು. ಗ್ರಾಮದ ಮುಖಂಡರಾದ ಕುಮಾರ್, ಕೆ.ನಾಗರಾಜು, ಬೋಳಾರೇಗೌಡ, ಭಾಗೇಗೌಡ, ಹಾಳೇಗೌಡ, ಮಹೇಶ್, ಶ್ರೀಕಂಠೇಗೌಡ, ರಾಮಕೃಷ್ಣೇಗೌಡ, ಪುಟ್ಟರಾಜು, ವೆಂಕಟೇಗೌಡ, ಶಿವಶಂಕರ್ ಇತರರಿದ್ದರು.