ಬೆಂಗಳೂರು: ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ವೇಳೆ ಜೀವನ್‌ಭೀಮಾ ನಗರ ಸಂಚಾರ ಪೊಲೀಸರು ಯುವತಿಯೊಬ್ಬಳಿಂದ ಐದು ಸಾವಿರ ರೂ. ಸುಲಿಗೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಈ ಕುರಿತು ಯುವತಿಯ ತಂದೆ ಕೋಶಿ ವರ್ಗೀಸ್ ಎಂಬವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಘಟನೆಯ ವಿವರ ಬರೆದು ನಗರ ಪೊಲೀಸ್ ಆಯುಕ್ತರು ಹಾಗೂ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?: “ಫೆ.23ರಂದು ರಾತ್ರಿ 11 ಗಂಟೆಗೆ ದೂರುದಾರ ತಮ್ಮ ಪುತ್ರಿ ದ್ವಿಚಕ್ರ ವಾಹನದಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೋಗುತ್ತಿದ್ದರು. ಅದೇ ವೇಳೆ ಮಣಿಪಾಲ್ ಆಸ್ಪತ್ರೆ ಸಮೀಪದಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದ ಜೀವನ್ ಭೀಮಾನಗರ ಸಂಚಾರ ಠಾಣೆ ಪೊಲೀಸರು, ಆಕೆಯನ್ನು ತಡೆದಿದ್ದಾರೆ. ಬಳಿಕ ಮದ್ಯ ಸೇವಿಸಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಆಕೆ ಇಲ್ಲ ಎಂದಾಗ, ಮದ್ಯ ಸೇವನೆ ಪತ್ತೆ ಪರೀಕ್ಷೆ ನಡೆಸದೆಯೇ, “ನೀನು ಮದ್ಯ ಸೇವಿಸಿದ್ದು, 15 ಸಾವಿರ ರೂ. ಕೊಡು, ಬಿಟ್ಟು ಕಳುಹಿಸುತ್ತೇವೆ ಎಂದು ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ 5 ಸಾವಿರ ರೂ. ಅನ್ನು ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಗೂಗಲ್ ಪೇ ಮೂಲಕ ಮಾಡಿಸಿಕೊಂಡಿದ್ದಾರೆ’ ಎಂದು ಯುವತಿಯ ತಂದೆ ಕೋಶಿ ವರ್ಗಿಸ್ ಆರೋಪಿಸಿ ಪೋಸ್ಟ್ ಮಾಡಿದ್ದಾರೆ.
ಸೂಕ್ತ ಕ್ರಮಕ್ಕೆ ಮನವಿ: ಅದಕ್ಕೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ವಿಭಾಗ ಹಾಗೂ ಜೀವನ್‌ಭೀಮಾನಗರ ಸಂಚಾರ ಠಾಣೆ ಪೊಲೀಸರು, 5 ಸಾವಿರ ರೂ. ಗೂಗಲ್ ಪೇ ವರ್ಗಾಹಿಸಿಕೊಂಡ ಮೊಬೈಲ್ ನಂಬರ್(ಯುಪಿಐ) ವಿವರ ಕೋರಿದ್ದು, ಅದನ್ನು ದೂರುದಾರರು ಒದಗಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಪೂರ್ವವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್‌ಗೆ ಸೂಚಿಸಿದ್ದಾರೆ.
ವರದಿ ನೀಡಲು ಎಸಿಪಿಗೆ ತಿಳಿಸಿದ್ದೇನೆ: ಕುಲದೀಪ್ ಜೈನ್ :
ಈ ಕುರಿತು ಮಾಹಿತಿ ನೀಡಿದ ಪೂರ್ವ ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ಜೆ.ಬಿ.ನಗರ ಸಂಚಾರ ಠಾಣೆ ಪೊಲೀಸರ ವಿರುದ್ಧ ಲಂಚ ಪಡೆದ ಕುರಿತು ಆರೋಪಿಸಿ ಪೋಸ್ಟ್ ಮಾಡಿದ್ದಾರೆ. ಈ ಸಂಬಂಧ ಪೂರ್ವ ಸಂಚಾರ ಉಪವಿಭಾಗದ ಎಸಿಪಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಒಂದೆರಡು ದಿನಗಳಲ್ಲಿ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಹೇಳಿದರು.