Advertisement

Rizwan Arshad: ಚುನಾವಣಾ ಅಕ್ರಮ ಆರೋಪ: ಶಾಸಕ ರಿಜ್ವಾನ್‌ ಅರ್ಷದ್‌ ವಿರುದ್ಧದ ಕೇಸು ರದ್ದು

11:12 AM Mar 27, 2024 | Team Udayavani |

ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌ ವಿರುದ್ಧದ ಚುನಾವಣಾ ಅಕ್ರಮ ಆರೋಪ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

Advertisement

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್‌ ಶಾಸಕರಾಗಿ ರಿಜ್ವಾನ್‌ ಅರ್ಷದ್‌ ಆಯ್ಕೆಯ ಕ್ರಮ ಪ್ರಶ್ನಿಸಿ ಸಂಪಂಗಿರಾಮನಗರದ ನಿವಾಸಿ ಬಿ.ಲಕ್ಷ್ಮೀದೇವಿ ಎಂಬುವರು ಸಲ್ಲಿಸಿದ್ದ ಚುನಾವಣಾ ತರಕಾರು ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿದೆ.

ಅರ್ಜಿ ತಿರಸ್ಕರಿಸಬೇಕು ಎಂದು ಕೋರಿ ರಿಜ್ವಾನ್‌ ಅರ್ಷದ್‌ ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ಪುರಸ್ಕರಿಸಿದ ನ್ಯಾಯ ಪೀಠ, ಲಕ್ಷ್ಮೀದೇವಿ ಅವರ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಗ್ಯಾರಂಟಿ ಯೋಜನೆಗಳನ್ನು ಚುನಾವಣಾ ಅಕ್ರಮವೆಂದು ಪರಿಗಣಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಆದರೆ, ಚುನಾವಣಾ ಅಕ್ರಮಕ್ಕೆ ಪೂರಕ ಸಾಕ್ಷ್ಯ ಒದಗಿಸದ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸಲಾಗಿದೆ. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ. ರಿಜ್ವಾನ್‌ ಅರ್ಷದ್‌ ಪರ ವಕೀಲೆ ಲತಾ ಎಸ್‌.ಶೆಟ್ಟಿ ವಾದ ಮಂಡಿಸಿದ್ದರು. ಪ್ರಜಾ ಪ್ರತಿನಿಧಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ರಿಜ್ವಾನ್‌ ಅರ್ಷದ್‌ ಅವರು ಅಕ್ರಮ ಎಸಗಿದ್ದು, ಕಾಯ್ದೆಯಡಿ ಆಯ್ಕೆಯಾಗಲು ಅವರು ಅರ್ಹರಲ್ಲ. ಅವರನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಬೇಕು ಎಂದು ಅರ್ಜಿಯಲ್ಲಿ ಕೋರಲಾ ಗಿತ್ತು. ಕಾಂಗ್ರೆಸ್‌ ಪ್ರಕಟಿಸಿರುವ ಗ್ಯಾರಂಟಿ ಯೋಜ ನೆಗಳು ಆಮಿಷ ಹಾಗೂ ಆಶ್ವಾಸನೆ ಸ್ವರೂಪದ್ದಾಗಿವೆ. ಗ್ಯಾರಂಟಿ ಯೋಜನೆಗಳನ್ನು ಪಕ್ಷದ ಅಭ್ಯರ್ಥಿಗಳ ಸಮ್ಮತಿಯೊಂದಿಗೆ ಪ್ರಕಟಿಸಲಾಗಿದೆ. ಅವು ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಮತಹಾಕಲು ಮತದಾರರನ್ನು ಪ್ರೇರೇಪಿಸಿವೆ. ಆ ಮೂಲಕ ರಿಜ್ವಾನ್‌ ಅರ್ಷದ್‌ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಮತದಾರರಿಗೆ ಆಮಿಷ ವೊಡ್ಡುವುದು ಲಂಚ ಮತ್ತು ಭ್ರಷ್ಟಾಚಾರಕ್ಕೆ ಸಮವಾಗಿದೆ.   ಹೀಗಾಗಿ, ಶಿವಾಜಿನಗರ ಕ್ಷೇತ್ರದಿಂದ ರಿಜ್ವಾನ್‌ ಅರ್ಷದ್‌ ಅವರ ಆಯ್ಕೆ ಅಸಿಂಧು ಎಂದು ಘೋಷಣೆ ಮಾಡಬೇಕು ಎಂದು ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next