Advertisement

ಶೇ.40 ಕಮಿಷನ್‌ ಆರೋಪ ಬೇಸ್‌ಲೆಸ್‌

05:04 PM Sep 29, 2022 | Team Udayavani |

ಶಿರಸಿ: ರಾಜ್ಯ ಸರಕಾರ ಶೇ.40ರಷ್ಟು ಕಮಿಷನ್‌ ಪಡೆಯುವ ಸರಕಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಆರೋಪ ಬೇಸ್‌ಲೆಸ್‌ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್‌ ಹೇಳಿದರು.

Advertisement

ಬುಧವಾರ ನಗರದ ಅಂಬೇಡ್ಕರ ಭವನದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ನವರು ಕೇವಲ ರಾಜಕೀಯ ಉದ್ದೇಶದಿಂದ ಈ ಆರೋಪ ಮಾಡಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿಯೇ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಲಿ ಅಥವಾ ಒಂದೇ ಒಂದು ಪೂರಕ ದಾಖಲೆ ಬಿಡುಗಡೆ ಮಾಡಿಲ್ಲ ಎಂದರು.

ಬಿಜೆಪಿ ಸರಕಾರ ಶೇ.40 ಪ್ರತಿಶತ ಕಮಿಷನ್‌ ತೆಗೆದುಕೊಂಡಿದ್ದರೆ ದಾಖಲೆ ಬಿಡುಗಡೆ ಮಾಡಬೇಕಿತ್ತು. ಅಧಿವೇಶನದಲ್ಲಿ ಮಾತನಾಡಬೇಕಿತ್ತು. ಈ ವಿಚಾರ ಅಲ್ಲಿ ಎತ್ತೇ ಇಲ್ಲ. ಅಲ್ಲಿಗೆ ಈ ಆರೋಪ ನಿರಾಧಾರ ಎಂಬುದು ಎಲ್ಲರಿಗೂ ತಿಳಿದಂತಾಗಿದೆ. ಕಾಂಗ್ರೆಸ್‌ ಅರೋಪಕ್ಕೆ ಸರಕಾರ ಕೂಡ ದಾಖಲೆ ಸಹಿತ ಉತ್ತರಿಸಲು ನಾವು ಸಿದ್ಧರಾಗಿ ಕಾದಿದ್ದೆವು. ಆದರೆ ತಾವು ಹೇಳುತ್ತಿರುವುದು ಸುಳ್ಳು ಎಂಬುದು ಕಾಂಗ್ರೆಸ್‌ನವರಿಗೆ ಗೊತ್ತಿತ್ತು. ಹೀಗಾಗಿಯೇ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿಲ್ಲ ಎಂದರು.

ಕಾಮಗಾರಿ ಮುಗಿದೆಡೆ ಶೀಘ್ರ ಗುತ್ತಿಗೆದಾರರಿಗೆ ಹಣ ಪಾವತಿಸಲಾಗುವುದು. ಹಿಂದಿನ ಸರಕಾರ ಮಾಡಿದ ತಾಂತ್ರಿಕ ಕಾರಣದಿಂದ ಗುತ್ತಿಗೆದಾರರಿಗೆ ಹಣ ವಿಳಂಬ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿ ಪೂರಕ ಅನುದಾನ ಪಡೆಯಲಾಗುವುದು. 200 ಕೋ.ರೂ. ಅನುದಾನ ಬೇಡಿಕೆ ಇಡಲಾಗಿದೆ ಎಂದರು.

Advertisement

ಏಳು ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಎಲ್ಲ ಕಡೆ ಒಳ್ಳೆಯ ಹೆಜ್ಜೆ ಗುರುತು ಇಟ್ಟು ಬಂದಿದ್ದೇನೆ. ಮುಂದೆ ಇಂದು ಶಿಲಾನ್ಯಾಸ ಮಾಡಿದ ಅನೇಕ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಸಚಿವರಾಗಿ ಕಾಗೇರಿ ಅವರು ಉದ್ಘಾಟನೆ ಮಾಡಲಿ ಎಂದು ಹಾರೈಸಿದರಲ್ಲದೇ ಕಾಗೇರಿ ಅವರು ಅನೇಕ ಕಾಮಗಾರಿಗಳ ಪ್ರಸ್ತಾಪ ಮುಂದಿಟ್ಟಿದ್ದಾರೆ. ಅದಕ್ಕೆ ತಕ್ಷಣ 25 ಕೋ.ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಹತ್ತು ಕೋಟಿ ರೂ. ಮೊತ್ತದಲ್ಲಿ ಮಾರಿಕಾಂಬಾ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿಗೆ ಶಿಲಾನ್ಯಾಸ, 9 ಕೋಟಿ ಮೊತ್ತದಲ್ಲಿ ಹತ್ತರಗಿ ಕ್ರಾಸ್‌ ನಿಂದ ಕುಮಟಾ ರಸ್ತೆ ತನಕ 5.5 ಕಿಮೀ ಕಾಮಗಾರಿಗೆ ಭೂಮಿ ಪೂಜೆ, ನಗರದ ಪಂಡಿತ್‌ ಆಸ್ಪತ್ರೆಯಿಂದ ಮಹಾಸತಿ ದೇಗುಲದ ವರೆಗಿನ 15 ಕೋಟಿ ರೂ. ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ರಸ್ತೆ ಅಗಲೀಕರಣದ ಬಳಿಕ ಅಂಡರ್‌ಗ್ರೌಂಡ್‌ ಕೇಬಲ್‌ ಕೂಡ ಆಗಬೇಕು. ಅದಕ್ಕೂ ಅನುದಾನ ಬೇಕು ಎಂದರು.

ಕಾಮಗಾರಿ ಮುಗಿದರೂ ಬಾಕಿ ಉಳಿದಿರುವ ಗುತ್ತಿಗೆದಾರರಿಗೆ ಅವರ ಮೊತ್ತ ಬಿಡುಗಡೆ ಮಾಡಿಸಲು ಪಾಟೀಲರಿಗೆ ಸೂಚಿಸಿದ್ದೇನೆ. ಗಣೇಶಪಾಲ್‌ ಬ್ರಿಡ್ಜ್ ಶಾಶ್ವತ ಕೆಲಸ ಆಗುತ್ತಿದೆ. ಬೈರುಂಬೆ ಬ್ರಿಡ್ಜ್ ನಿರ್ಮಾಣಕ್ಕೂ ಟೆಂಡರ್‌ ಆಗಿದೆ. ಫೈವ್‌ ಕ್ರಾಸ್‌ ಬಳಿ ಅಗಲೀಕರಣಕ್ಕೆ ಸುಮಾರು 185 ಜನ ಸ್ಥಳ ಕೊಟ್ಟಿದ್ದಾರೆ. 14 ಕೋಟಿ ರೂ. ಪರಿಹಾರ ಶೀಘ್ರ ಬಿಡುಗಡೆ ಆಗಲಿದೆ. ಎಲ್ಲೆಡೆ ಅಭಿವೃದ್ಧಿ ಆಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಕಿಂಚಿತ್ತೂ ರಾಜೀಯೇ ಇಲ್ಲ. ಅಭಿವೃದ್ಧಿಗೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಲಾಗುವುದು ಯಾವ ನಿರ್ಲಕ್ಷ್ಯ ಇಲ್ಲವೇ ಇಲ್ಲ ಎಂದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಪ್ರಶಾಂತ ಗೌಡ, ಹೆಗಡೆಕಟ್ಟಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಭಟ್ಟ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ ಇತರರು ಇದ್ದರು.

ಪಿಎಫ್‌ ಐ ಸಂಘಟನೆ ನಿಷೇಧಿಸಲಾಗಿದೆ. ದೇಶದ್ರೋಹಿ ಹಾಗೂ ವಿಧ್ವಸಂಕ ಕೃತ್ಯಗಳ ವಿರುದ್ಧ ಸರಕಾರ ಬಿಗಿ ಕ್ರಮಕೈಗೊಂಡಿದೆ. ಶಾಂತಿಪ್ರಿಯ ಶಿರಸಿಗೂ ಈ ಕಳಂಕ ತಟ್ಟಿದ್ದು, ಇದನ್ನು ಹೋಗಲಾಡಿಸಬೇಕಾಗಿದೆ. –ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next