Advertisement

ಮಳೆ ಹಾನಿ ಪ್ರದೇಶಕ್ಕೆ ಅಲ್ಲಂಪ್ರಭು ಭೇಟಿ

02:25 PM Aug 06, 2022 | Team Udayavani |

ಕಲಬುರಗಿ: ಬಾಂದಾರು ಯೋಜನೆ ಅಡಿಯಲ್ಲಿ ತಾಲೂಕಿನ ಭೀಮಳ್ಳಿ- ಭೋಸ್ಗಾ ಹಳ್ಳಕ್ಕೆ ರೂಪಿಸಲಾಗಿರುವ ಸೇತುವೆ ಕಾಮಗಾರಿ ಮರು ಪರಿಷ್ಕರಣೆ ಮಾಡಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ ನೆಲೋಗಿ ಆಗ್ರಹಿಸಿದರು.

Advertisement

ಶುಕ್ರವಾರ ತಾಲೂಕಿನ ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಳೆದ ಹಲವು ದಿನಗಳಿಂದ ಬಿದ್ದ ಮಳೆ ನೀರಿನ ರಭಸ ತಡೆಯಲು ಸೇತುವೆಗೆ ಸಾಧ್ಯವಿಲ್ಲ. ಅಷ್ಟು ಟೊಳ್ಳಾಗಿ ನಿರ್ಮಿಸಲಾಗುತ್ತಿದೆ. ಗಟ್ಟಿಮುಟ್ಟಾದ ಕಾಮಗಾರಿ ನಡೆಯುತ್ತಿಲ್ಲ. ಇನ್ನಷ್ಟು ಮಳೆ ಬಂದು ನೀರು ನುಗ್ಗಿದರೆ ಖಂಡಿತವಾಗಿ ಸೇತುವೆ ಕೊಚ್ಚಿಕೊಂಡು ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಬ್ಬರ ಸಾವು: ಕಳೆದ ಬಾರಿ ಮಳೆ ನೀರಿನಿಂದ ಉಂಟಾಗಿದ್ದ ನೆರೆಯಲ್ಲಿ ಇಬ್ಬರು ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ಇದೇ ಸೇತುವೆ ನಿರ್ಮಾಣದ ಸ್ಥಳದಲ್ಲಿ ನಡೆದಿತ್ತು. ಆಗಲೇ ಜನರು ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದರು. ಅಚ್ಚರಿ ಎಂದರೆ ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿದ್ದಾರೆ. ಈ ರೀತಿಯ ಕಾಮಗಾರಿ ನಾವು ನೋಡಿಯೇ ಇಲ್ಲ. ಹಳ್ಳಕ್ಕೆ ನಿರ್ಮಾಣ ಮಾಡುತ್ತಿರುವ ಸೇತುವೆ ನಿರ್ಮಾಣಕ್ಕೆ 12 ಎಂಎಂ ಸರಳು ಹಾಕಿದ್ದಾರೆ. ಈ ಕಾಮಗಾರಿ ಗಟ್ಟಿಮುಟ್ಟಾಗಿಲ್ಲ. ಯೋಜನೆ ಪರಿಷ್ಕರಣೆಯಾಗಲಿ, ಕನಿಷ್ಟ 10 ಬಾಕ್ಟ್ ಇರುವಂತ ಕಲ್ವರ್ಟ್‌ ನಿರ್ಮಾಣವಾದಲ್ಲಿ ಸಮಸ್ಯೆಗೆ ಕಾಯಂ ಪರಿಹಾರ ಸಿಗುತ್ತದೆ ಎಂದು ಪಾಟೀಲ ಆಗ್ರಹಿಸಿದರು.

ಯೋಜನೆ ಪರಿಕ್ಷರಣೆಗೆ ಆಗ್ರಹ: ಗ್ರಾಮಸ್ಥರಾದ ವಿಶ್ವನಾಥ ಜಮಾದಾರ್‌, ಇಸ್ಮಾಯಿಲ್‌ ಸಾಬ್‌, ಸೀತಾಬಾಯಿ ಸೇರಿದಂತೆ ಅನೇಕರು, ಕಳೆದ ಮೂರು ದಿನದಿಂದ ಹಳ್ಳ ದಾಟಲಾಗುತ್ತಿಲ್ಲ. ಅನಿವಾರ್ಯವಾಗಿ ಅಪಾಯದಲ್ಲೇ ದಾಟುತ್ತಿದ್ದೇವೆ. ಜೀವ ಹಾನಿ ಅಗುವುದಕ್ಕಿಂತ ಮುಂಚೆಯೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಜನರ ಅಹವಾಲು ಆಲಿಸಿದ ನಂತರ ತಕ್ಷಣವೇ ನಿಯೋಗದಲ್ಲಿ ಜಿಪಂ ಸಿಇಒ, ಜಿಲ್ಲಾಧಿಕಾರಿ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷರನ್ನು ಕಂಡು ಸಮಸ್ಯೆ ವಿವರಿಸಿ ಯೋಜನೆ ಪರಿಷ್ಕರಿಸಿ ಜಾರಿಗೆ ತರುವಂತೆ ಆಗ್ರಹಿಸುವುದಾಗಿ ಅಲ್ಲಂಪ್ರಭು ಪಾಟೀಲ ನೆಲೋಗಿ ಹೇಳಿದರು.

Advertisement

ಕಾಂಗ್ರೆಸ್‌ ಮುಖಂಡ ನೀಲಕಂಠರಾವ ಮೂಲಗೆ, ಜಿಪಂ ಮಾಜಿ ಸದಸ್ಯ ಸಂತೋಷ ಪಾಟೀಲ ದಣ್ಣೂರ, ತಿಪ್ಪಣ್ಣ ಒಡೆಯರಾಜ್‌, ಗ್ರಾಪಂ ಸದಸ್ಯರಾದ ಇಸ್ಮಾಯಿಲ್‌, ಶರಣಪ್ಪ ಸಿಂಗೆ, ಗ್ರಾ.ಪಂ ಸದಸ್ಯ ನೀಲಕಂಠ, ವಿಶ್ವನಾಥ ಈ ಸಂದರ್ಭದಲ್ಲಿದ್ದರು.

ಸೇತುವೆ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ. 40-50ಟನ್‌ ಲಾರಿಗಳ ಓಡಾಟಕ್ಕೆ ಇದು ಸೂಕ್ತವಿಲ್ಲ. ಭಾರಿ ಮಳೆಯಾಗುತ್ತಿರುವ ವೇಳೆಯಲ್ಲಿ ಕಾಮಗಾರಿ ಕೈಗೊಂಡರೇ ಗುಣಮಟ್ಟ ಸಾಧ್ಯವಿಲ್ಲ. ಆದರೂ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷéದಿಂದ ಕಾಮಗಾರಿ ತರಾತುರಿಯಲ್ಲಿ ನಡೆಯುತ್ತಿದೆ. ಮುಂದೆ ದೊಡ್ಡ ಅನಾಹುತ ಆಗುವ ಮುನ್ನವೇ ಅಧಿಕಾರಿಗಳು ಎಚ್ಚರಗೊಂಡು ಕಾಮಗಾರಿ ಪರಿಷ್ಕರಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ. -ಅಲ್ಲಂಪ್ರಭು ಪಾಟೀಲ ನೆಲೋಗಿ, ಮಾಜಿ ಎಂಎಲ್‌ಸಿ

Advertisement

Udayavani is now on Telegram. Click here to join our channel and stay updated with the latest news.

Next