Advertisement

ಸೈಕಲ್‌ ಗ್ಯಾಪ್‌ನಲ್ಲಿ ಇವೆಲ್ಲ ಮಾಡಬಹುದು !

10:05 AM Jan 29, 2020 | Lakshmi GovindaRaj |

ಜೀವನದ ಹಾದಿ ಬಗ್ಗೆ ಒಂದಿನಿತೂ ಆಲೋಚನೆ ಮಾಡದ ಯುವಕ- ಯುವತಿಯರು ರಜೆ ವಿಚಾರದಲ್ಲಿ ಯಾವತ್ತೂ ಪಕ್ಕಾ ಪ್ಲಾನ್ಡ್. ಮಜವಾಗಿ ಕಳೆಯುವುದರ ಜೊತೆಗೆ , ಭವಿಷ್ಯಕ್ಕೊಂದು ದಾರಿ ಮಾಡಿಕೊಳ್ಳೋದರ ಸಿದ್ಧತೆ ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ…

Advertisement

ಒಂದೊಂದೇ ಸೆಮಿಸ್ಟರ್‌ ಪರೀಕ್ಷೆಗಳು ಮುಗಿಯುತ್ತಿವೆ. ವಿದ್ಯಾರ್ಥಿಗಳಿಗೆ ಕಣ್ಣ ಮುಂದೆ ಖುಷಿ. ರಜೆ ಸಿಗುತ್ತಲ್ಲಾ? ಮಜ ಮಾಡಬಹುದಲ್ಲಾ? ಅಂತ. ಒಮ್ಮೆ ಈ ಎಕ್ಸಾಮ್‌ ಕಾಟ ಮುಗಿದರೆ ಸಾಕು ಎಂದು ಮನಸ್ಸಲ್ಲೇ ಮಂಡಿಗೆ ಮೆಲ್ಲುವ ವಿದಾರ್ಥಿಗಳೇ ಬಹುಪಾಲು. ಪರೀಕ್ಷೆ ಇದ್ದಾಗಲೇ ಮನಸ್ಸು ಕದಡಿ ರಜೆಯನ್ನು ಮಜವಾಗಿ ಕಳೆಯುವ ಲೆಕ್ಕಾಚಾರ ಶುರುವಾಗಿರುತ್ತದೆ. ಎಲ್ಲೆಲ್ಲಿ ಟೂರ್‌ ಹೋಗಬೇಕು? ಯಾವ ಫ‌ಂಕ್ಷನ್‌ ಅಟೆಂಡ್‌ ಆಗಬೇಕು? ಎಲ್ಲಿ ಯಾವ ರೀತಿ ಎಂಜಾಯ್‌ ಮಾಡಬೇಕು? ಹೀಗೆ… ಎಷ್ಟರ ಮಟ್ಟಿಗೆ ಯೋಜನೆ ಸಿದ್ಧವಾಗಿರುತ್ತದೆ ಅಂದರೆ, ಪರೀಕ್ಷಾ ಸಮಯದಲ್ಲೇ ಒಂದು ತಿಂಗಳ ಪಟ್ಟಿ ರೆಡಿಯಾಗಿರುತ್ತದೆ.

ಕಾಲೇಜಿಗೆ, ಪರೀಕ್ಷೆಗೆ, ಜೀವನದ ಹಾದಿಗೆ ಒಂದಿನಿತೂ ಆಲೋಚನೆ ಮಾಡದ ಯುವಕ-ಯುವತಿಯರು ರಜೆ ವಿಚಾರದಲ್ಲಿ ಯಾವತ್ತೂ ಪಕ್ಕಾ ಪ್ಲಾನ್ಡ್. ಆದರೆ, ಇಲ್ಲಿ ಹೇಳ್ಳೋಕೆ ಹೊರಟಿರೋದೇ ಬೇರೆ.. ಮಜವಾಗಿ ಕಳೆಯುವ ರಜೆ ಮತ್ತು ಭವಿಷ್ಯಕ್ಕೊಂದು ದಾರಿ ಜೊತೆ ಜೊತೆಯಾಗಿ ಹೊಂದಿಕೊಳ್ಳೋದು ಹೇಗೆ ಎಂದು! ಬೋರಿಂಗ್‌ ಕ್ಲಾಸ್‌ಗಳು, ಎಕ್ಸಾಮ್‌ ತಯಾರಿ, ಅರ್ಥವಾಗದ ಪ್ರಶ್ನೆಪತ್ರಿಕೆಯಿಂದ ದೂರ ಹೋಗಲು ಅನೇಕ ವಿದ್ಯಾರ್ಥಿಗಳು ತಮ್ಮದೇ ಲೆಕ್ಕಾಚಾರ ಹಾಕಿಕೊಂಡಿರುತ್ತಾರೆ. ಆದರೆ, ಸೆಮಿಸ್ಟರ್‌ ರಜೆಯನ್ನು ಉಪಯುಕ್ತಗೊಳಿಸಿ, ಭವಿಷ್ಯಕ್ಕೊಂದು ಸುಂದರ ಮಾರ್ಗ ರೂಪಿಸಲು ಇಲ್ಲಿದೆ ನೋಡಿ ಸರಳ ಯೋಜನೆ:

1. ರೆಸ್ಯೂಮ್‌ ತಯಾರಿ: ಮೊತ್ತ ಮೊದಲು ಒಬ್ಬ ವಿದ್ಯಾರ್ಥಿಯ ಮುಂದೆ ಗುರಿಯಿರಬೇಕು. ತಾನು ಏನಾಗಬೇಕು? ಅದಕ್ಕೆ ತಕ್ಕ ಹಾಗೆ ಯಾವ ಶಿಕ್ಷಣ ಪಡೆಯಬೇಕು, ಹೇಗೆ ತಯಾರಿ ಮಾಡಬೇಕು ಎನ್ನುವುದು ಮುಖ್ಯ. ಅದೆಷ್ಟೋ ಬಾರಿ ಗೊತ್ತು ಗುರಿಯಿಲ್ಲದ ಶಿಕ್ಷಣ, ಜೀವನವಿಡೀ ಶಿಕ್ಷೆ ಎಂಬಂತೆ ಭಾಸವಾದದ್ದೂ ಇದೆ. ಹಾಗಾಗಿ ಪ್ರಥಮದಲ್ಲಿ ರೆಸ್ಯೂಮ್‌ ಒಂದನ್ನು ತಯಾರಿಸಿದ್ದಲ್ಲಿ, ಅದೇ ಮುಂದಕ್ಕೆ ಗುರಿ ಮುಟ್ಟಿಸುವಲ್ಲಿ ಸಹಾಯ ಮಾಡುತ್ತದೆ. ರೆಸ್ಯೂಮ್‌ನಲ್ಲಿ ಏನೇನಿರಬೇಕು, ನಾನೇನು ಮಾಡಬೇಕು ಎನ್ನುವುದನ್ನು ಮೊದಲು ಲೆಕ್ಕ ಹಾಕಿಕೊಳ್ಳಬೇಕು. ತನ್ನ ಮುಂದಿನ ಗುರಿ ತಲುಪಲು ರೆಸ್ಯೂಮ್‌ ಕಲಿಸುವ ಪಾಠ ತುಂಬಾ ಅವಶ್ಯಕ.

2. ಕಂಪ್ಯೂಟರ್‌ತರಬೇತಿ: ಅದೆಷ್ಟೋ ಬಾರಿ ವಿದ್ಯಾರ್ಥಿಗಳು ಎಡವೋದು ಸಮಯವನ್ನು ಸರಿಯಾಗಿ ಬಳಸಿಕೊಳ್ಳದ ಕಾರಣಕ್ಕೆ. ಕ್ಯಾಂಪಸ್‌ನಲ್ಲಿ ಉದ್ಯೋಗ ದೊರೆಯಬೇಕೆಂದರೆ ಈ ದಿನಗಳಲ್ಲಿ ಕಂಪ್ಯೂಟರ್‌ ಅನುಭವ ಬೇಕೇಬೇಕು. ಕಾಲೇಜಲ್ಲಿ ಕಲಿಸೋದು ಮಾತ್ರ ಸಾಕಾಗಲ್ಲ. ಹಾಗಾಗಿ, ಸೆಮಿಸ್ಟರ್‌ ರಜೆಯಲ್ಲೊಂದು ಕೋರ್ಸ್‌ ಮಾಡಿ ಪ್ರಮಾಣಪತ್ರ ಇಟ್ಟುಕೊಳ್ಳುವುದು ಜಾಣರ ಲಕ್ಷಣ.

Advertisement

3. ಇಂಟರ್ನ್ ಶಿಪ್‌: ಇತ್ತೀಚೆಗೆ ಕಂಪೆನಿಗಳು ವಿದ್ಯಾರ್ಥಿಗಳ ಕೆಲಸ ಮಾಡಿದ ಅನುಭವವನ್ನೂ ಕೇಳಲು ಆರಂಭಿಸಿದೆ. ಶಿಕ್ಷಣದ ಗುಣಮಟ್ಟ ಹೇಗೇ ಇರಲಿ, ಹಲವು ಕಂಪೆನಿಗಳಲ್ಲಿ ಇಂಟರ್ನ್ ಶಿಪ್‌ ಮಾಡಿದ ಅನುಭವದ ಮೇಲೂ ಅನೇಕ ಬಾರಿ ಒಳ್ಳೆಯ ಉದ್ಯೋಗಸಿಗುವುದಿದೆ. ಇಂಟರ್ನ್ ಶಿಪ್‌ಗೆ ಹೋಗುವಾಗಲೂ ಜಾಗರೂಕರಾಗಿರಬೇಕು. ತಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಷಯಗಳ ಮೇಲೆಯೇ ಇಂಟರ್ನ್ ಶಿಪ್‌ ಮಾಡಿದರೆ ಉತ್ತಮ. ಕೆಲವೊಂದು ಕಂಪೆನಿಗಳು ಒಂದು ತಿಂಗಳ ಕಲಿಕೆಯ ಜೊತೆಗೆ ಸ್ವಲ್ಪಮಟ್ಟಿಗೆ ಸಂಬಳದ ರೂಪದಲ್ಲಿ ಹಣವನ್ನೂ ನೀಡುತ್ತವೆ. ಉತ್ತಮ ಕಂಪೆನಿಯಾದಲ್ಲಿ ಆರು ಸೆಮಿಸ್ಟರ್‌ಗಳು ಮುಗಿಯುವ ಹೊತ್ತಿಗೆ ಒಂದು ಹಂತದ ತರಬೇತಿ ಕೊಟ್ಟಿರುತ್ತದೆ. ಇಂಥವರಿಗೆ ನೇರ ನೇಮಕಾತಿ ಸೌಲಭ್ಯಗಳು ಹೆಚ್ಚು ಇರುತ್ತವೆ.

4. ಕೌಶಲ್ಯ ಪರಿಣತಿ: ಡಿಗ್ರಿ ಕೆಲವೊಬ್ಬರಿಗೆ ಬರಿಯ ಪ್ರಮಾಣಪತ್ರವಷ್ಟೇ. ಅಂಥವರು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ರಜಾಸಮಯವನ್ನು ಕಳೆಯುವುದು ಒಳ್ಳೆಯದು. ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿಗಳು ವಿದ್ಯಾರ್ಥಿಯ ಜೀವನಪಥವನ್ನು ಬದಲಿಸಿದ್ದೂ ಇದೆ. ಒಬ್ಬ ಒಳ್ಳೆಯ ಗಾಯಕ, ಚಿತ್ರಕಾರ, ಡ್ಯಾನ್ಸರ್‌, ಛಾಯಾಚಿತ್ರಗಾರ, ಫ್ಯಾಶನ್‌ ಡಿಸೈನರ್‌ ಮೂಡಿಬರಲು, ಸ್ವಾವಲಂಬಿಯಾಗಿ ಬದುಕಲು ಸೆಮಿಸ್ಟರ್‌ ರಜೆಯನ್ನು ಉಪಯುಕ್ತವಾಗಿ ಬಳಸಿಕೊಳ್ಳಬಹುದು.

5. ಅಗತ್ಯ ಪತ್ರಗಳ ತಯಾರಿ: ಇಂದು ಎಲ್ಲದಕ್ಕೂ ದಾಖಲೆಗಳನ್ನು ಕೇಳುವ ಸಮಯ. ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ವೋಟರ್‌ ಕಾರ್ಡ್‌, ಪಾಸ್‌ ಪೋರ್ಟ್‌… ಹೀಗೆ, ಅಗತ್ಯ ದಾಖಲೆಪತ್ರಗಳನ್ನು ಈ ರಜಾ ಸಮಯದಲ್ಲೇ ಮಾಡಿಡುವುದು ಉತ್ತಮ. ಎಲ್ಲಾ ದಾಖಲೆ ಪ್ರತಿಗಳು ಸರಿಯಾಗಿದ್ದಷ್ಟೂ ಉದ್ಯೋಗದ ಖಾತ್ರಿಯ ಹಾದಿ ಸುಲಭ. ಹೆಚ್ಚಿನ ಕಡೆಗಳಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ಕೇಳುತ್ತಾರೆ. ಹಾಗಾಗಿ ದ್ವಿಚಕ್ರ ಮತ್ತು ಕಾರಿನ ಡ್ರೈವಿಂಗ್‌ ಲೈಸೆನ್ಸ್‌ ಇದ್ದಲ್ಲಿ ಒಳ್ಳೆಯದು.

* ಅಶೋಕ್‌ ಕೆ. ಜಿ. ಮಿಜಾರ್‌

Advertisement

Udayavani is now on Telegram. Click here to join our channel and stay updated with the latest news.

Next