ಬಂಟ್ವಾಳ: ಸಜೀಪನಡು ಗ್ರಾಮದ ಮಗುವೊಂದರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆ ಯಲ್ಲಿ ಇಡೀ ಗ್ರಾಮವನ್ನೇ ಕಟ್ಟೆಚ್ಚರದಲ್ಲಿ ಇಡಲಾಗಿದ್ದು, ಜನರು ಮನೆ ಯಿಂದ ಹೊರಬರದಂತೆ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಅಗತ್ಯ ವಸ್ತುಗಳನ್ನು ನೇರವಾಗಿ ಮನೆಗಳಿಗೆ ತಲುಪಿಸುವುದಕ್ಕೆ ಸ್ಥಳೀಯ ಅಂಗಡಿಯವರಿಗೆ ಅನುಮತಿ ನೀಡಲಾಗಿದೆ. ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತು ಮುಂದುವರಿದೆ.
ಗ್ರಾಮವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಕಾಲುದಾರಿಯ ಮೂಲಕ ಗ್ರಾಮವನ್ನು ಸಂಪರ್ಕಿಸುವ ತುಂಬೆ ಅಣೆಕಟ್ಟಿನ ಮೇಲಿನ ಹಾದಿಗೂ ತಡೆಬೇಲಿ ಹಾಕಲಾಗಿದೆ.
ಮುಡಿಪುವಿನ ಮನೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬರು ಸಜೀಪನಡು ಗ್ರಾಮಕ್ಕೆ ಬಂದಿದ್ದು, ಅವರನ್ನು ಪೊಲೀಸರು ಮತ್ತೆ ಮುಡಿಪುವಿನ ಮನೆಗೆ ಕಳುಹಿಸಿದ ಘಟನೆಯೂ ನಡೆದಿದೆ. ಜತೆಗೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಹಲವರ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಸಜೀಪನಡು ಗ್ರಾಮದಲ್ಲಿ ಕೋವಿಡ್ 19 ಸೋಂಕು ದೃಢಪಟ್ಟ ಬಳಿಕ ಗ್ರಾಮದ ಇತರ ಭಾಗಗಳಲ್ಲೂ ಆತಂಕ ಹೆಚ್ಚಾಗಿದ್ದು, ಪಂಜಿಕಲ್ಲು ಪದವು, ಅನ್ನಳಿಕೆ, ಕೊಂಬರಬೈಲು ಭಾಗಗಳಲ್ಲಿ ಸ್ಥಳೀಯರೇ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ನಡೆದುಕೊಂಡು ಊರಿಗೆ ಹೊರಟಿರುವ ಕೊಪ್ಪಳ ಮೂಲಕ ಕಾರ್ಮಿಕರಿಗೆ ಊಟ ನೀಡಿರುವ ಘಟನೆಯೂ ನಡೆದಿದೆ.
ಸಜಿಪನಡು ಗ್ರಾಮದಲ್ಲಿ ಶನಿವಾರ ಮಹಿಳೆಯೊಬ್ಬರು ನಿಧನ ಹೊಂದಿದ್ದು, ಸೀಮಿತ ಜನರ ಉಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನಡೆಯಿತು.