ಸುರಪುರ/ಕಕ್ಕೇರಾ: ಎಲ್ಲ ಹಿಂದೂಗಳು ಒಂದಾಗಿ ದೇಶದ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ನುಡಿದರು.
ಸಮೀಪದ ಹುಣಸಿಹೊಳೆ ಗ್ರಾಮದಲ್ಲಿ ಕಣ್ವಮಠದ ಯತಿಗಳಾಗಿದ್ದ ಶ್ರೀ ವಿದ್ಯಾಭಾಸ್ಕರ ತೀರ್ಥ ಶ್ರೀಪಾದಂಗಳ 3ನೇ ಮಹಾ ಸಮಾರಾಧನೆ ನಿಮಿತ್ತ ರವಿವಾರ ನಡೆದ ಕಾರ್ಯಕ್ರಮದಲ್ಲಿ ಆಶೀರ್ವವಚನ ನೀಡಿದ ಅವರು, ಸುರಪುರ ತಾಲೂಕಿನಲ್ಲಿರುವ ಕಣ್ವ ಮಠಕ್ಕೂ ಮತ್ತು ಉಡುಪಿ ಪೇಜಾವರ ಮಠಕ್ಕೂ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ ಎಂದರು.
ಹಿಂದಿನ ಪೀಠಾಧಿಪತಿಯಾಗಿದ್ದ ವಿದ್ಯಾಭಾಸ್ಕರ ತೀರ್ಥ ಶ್ರೀಪಾದರು ಹಂಪಿಯಲ್ಲಿ 1952ರಲ್ಲಿಯೇ ನನಗೆ ಪರಿಚಯವಾಗಿದ್ದರು. ಅಂದಿನಿಂದ ಇಂದಿನವರೆಗೂ ಈ ಮಠಗಳು ಒಂದಾಗಿ ಮುನ್ನಡೆಯುತ್ತಿವೆ. ಗರುಡ ದೇವರು ಅಮೃತ ನೀಡಿದ ಮಹಾನುಭಾವರು. ಅದರಂತೆ ಇಲ್ಲಿ 28 ಅಡಿ ಎತ್ತರದ ಗರುಡ ಮೂರ್ತಿಯನ್ನು ಸ್ಥಾಪನೆ ಮಾಡುವ ಮೂಲಕ ಇಲ್ಲಿ ಅಮೃತಕ್ಕೆ ಸಮಾನವಾದ ವೇದಾಧ್ಯಯನ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಯಲು ಇಂದಿನ ಪೀಠಾಧಿಪತಿಗಳು ಮುಂದಾಗಬೇಕು ಎಂದರು.
ಮಠದ ವಿದ್ಯಾವಾರಿತೀರ್ಥ ಶ್ರೀಪಾದರು ಮಾತನಾಡಿ, ಹಿಂದಿನ ಯತಿಗಳು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುವುದರ ಮೂಲಕ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅದರಂತೆ ನಾವು ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಿಕೊಂಡು ಮುನ್ನಡೆಯೋಣ. ಈ ಕಾರ್ಯಕ್ರಮಕ್ಕೆ ಆಗಮಿಸಿ ಭಕ್ತರನ್ನು ಹರಸಿರುವುದು ನಮಗೆ ಅತಿವ ಸಂತಸ ತಂದಿದೆ ಎಂದರು.
ಶಾಸಕ ನರಸಿಂಹನಾಯಕ ( ರಾಜುಗೌಡ) ಮಾತನಾಡಿ, ಸುಮಾರು 300 ವರ್ಷ ಇತಿಹಾಸ ಹೊಂದಿರುವ ಈ ಮಠದ ಸೇವಾ ಕಾರ್ಯಕ್ಕೆ ಸದಾ ಸಿದ್ಧ. ಯಾವುದೇ ಕೆಲಸ ನೀಡಿದರೂ ತಪ್ಪದೇ ಮಾಡುತ್ತೇನೆ ಎಂದು ಹೇಳಿದರು.
ಜ್ವರದಿಂದ ಬಳಲುತ್ತಿದ್ದ ಪೇಜಾವರ ಶ್ರೀ
ಪೇಜಾವರ ಶ್ರೀಗಳು ವಿದ್ಯಾಭಾಸ್ಕರ ತೀರ್ಥರ ಮಹಾಸಮಾರಾಧನೆ, ಗರುಡಮೂರ್ತಿ ಉದ್ಘಾಟನೆ ನಿಮಿತ್ತ ಹುಣಸಿಹೊಳೆ ಕಣ್ವಮಠಕ್ಕೆ ಆಗಮಿಸಿದ್ದರು. ನಿಗದಿಯಂತೆ ಮೂರ್ತಿ ಉದ್ಘಾಟನೆ ನೆರವೇರಿಸಿ ಯತಿಗಳ ಮಹಾಸಮಾರಾಧನೆಯಲ್ಲಿ ಪಾಲ್ಗೊಂಡಿದ್ದರು. ಪೂಜೆ ನಂತರ ಶ್ರೀಗಳು ಅಸ್ವಸ್ತರಾದಂತೆ ಕಂಡು ಬಂದರು. ಜ್ವರದಿಂದ ಬಳಲುತ್ತಿದ್ದ ಅವರು ಬಹು ಹೊತ್ತು ಭಕ್ತರಿಗೆ ಆಶೀರ್ವಾದ ನೀಡಲಾಗದೆ ರಾಯಚೂರಿಗೆ ಪ್ರಯಾಣ ಬೆಳೆಸಿದರು.