Advertisement

ಬಿಲ್ಲವರಿಗೆ ಅನ್ಯಾಯ: ಕಾಂಗ್ರೆಸ್‌ ಸುಳ್ಳು ಸುದ್ದಿ

06:00 AM Apr 29, 2018 | Team Udayavani |

ಮಂಗಳೂರು: ಬಿಜೆಪಿಯಿಂದ ಬಿಲ್ಲವರಿಗೆ ಅನ್ಯಾಯ ಆಗಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ಸಿಗರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ವಿನಯ ಕುಮಾರ್‌ ಸೊರಕೆ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದ, ಜನಾರ್ದನ ಪೂಜಾರಿ ಅವರನ್ನು ಅವಗಣನೆ ಮಾಡಿದ ಕಾಂಗ್ರೆಸ್‌ ಬಿಲ್ಲವರಿಗೆ ಏನು ಸ್ಥಾನಮಾನ ನೀಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್‌ ಪ್ರಶ್ನಿಸಿದ್ದಾರೆ.

Advertisement

ನಗರದ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಬಿಲ್ಲವರು ಎಂದೂ ಜಾತಿವಾದಿಗಳಲ್ಲ; ಅವರು ರಾಷ್ಟ್ರೀಯ ವಾದಿಗಳು. ಬಿಲ್ಲವರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ನಂಬಿಕೆ ಇರಿಸಿದ್ದಾರೆ. ಆದರೆ ಕಾಂಗ್ರೆಸ್ಸಿಗರು ಬಿಲ್ಲವರಿಗೆ ಅನ್ಯಾಯ ಆಗಿದೆ ಎಂಬುದಾಗಿ ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸು
ವುದರಲ್ಲಿ ನಿರತವಾಗಿದೆ. ಬಿಲ್ಲವ ಮುಖಂಡರನ್ನೇ ಅವಗಣನೆ ಮಾಡಿದ ಕಾಂಗ್ರೆಸ್‌ ಪಕ್ಷಕ್ಕೆ ಬಿಜೆಪಿ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದರು. 

ಬಿಜೆಪಿಯು ಹಿಂದುಳಿದ ವರ್ಗದಿಂದ ಬಂದ ರಾಮನಾಥ್‌ ಕೋವಿಂದ ಅವರನ್ನು ರಾಷ್ಟ್ರಪತಿ ಮಾಡಿದೆ. ಗಾಣಿಗ ಸಮುದಾಯಕ್ಕೆ ಸೇರಿದ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಿದೆ. ಆದರೆ ಕಾಂಗ್ರೆಸ್‌ ಈವರೆಗೆ ಒಬ್ಬರೇ ಒಬ್ಬ ಹಿಂದುಳಿದ ವರ್ಗಕ್ಕೆ ಸೇರಿದ ಮುಖಂಡರನ್ನು ಪ್ರಧಾನಮಂತ್ರಿ ಮಾಡಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್‌ ಬಿಟ್ಟು ಬನ್ನಿ
ದಕ್ಷಿಣ ಕನ್ನಡ ಜಿಲ್ಲೆಯ ಸಾಮರಸ್ಯವನ್ನು ಕದಡುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ವಿವಿಧ ಆರೋಪ ಹೊತ್ತ ಎಸ್‌ಡಿಪಿಐ ಜತೆ ಕಾಂಗ್ರೆಸ್‌ನವರು ವರದಕ್ಷಿಣೆ ನೀಡಿ ನಿಖಾ ಮಾಡಿಕೊಂಡಿದ್ದಾರೆ. ಇಂತಹ ಕಾಂಗ್ರೆಸ್‌ ಪಕ್ಷದಿಂದ ಮುಂದೆ ಎಂತಹ ಆಡಳಿತವನ್ನು ನಿರೀಕ್ಷಿಸಬಹುದು ಎಂಬುದನ್ನು ಯೋಚಿಸಬೇಕಿದೆ. ದಕ್ಷಿಣ ಕನ್ನಡ ಹತ್ಯಾಮುಕ್ತ, ಭಯಮುಕ್ತ ಮತ್ತು ಸಾಮರಸ್ಯದಿಂದ ಕೂಡಿದ ಜಿಲ್ಲೆಯಾಗಲು ಮುಸ್ಲಿಮರು ಕಾಂಗ್ರೆಸ್‌ ಬಿಟ್ಟು ಹೊರ ಬಂದು ಬಿಜೆಪಿಯೊಂದಿಗೆ ಕೈ ಜೋಡಿಸಬೇಕಿದೆ ಎಂದು ಅವರು ತಿಳಿಸಿದರು.

ಬ್ರಿಟಿಷ್‌ ಮಾನಸಿಕತೆಯ ಸರಕಾರ ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಬ್ರಿಟಿಷ್‌ ಮಾನಸಿಕತೆಯ ಸರಕಾರ ಆಡಳಿತ ನಡೆಸಿದೆ. ಜಾತಿ ವಿಭಜನೆಯ ಕೆಲಸವನ್ನು ಅದು ನಿರಂತರ ಮಾಡಿಕೊಂಡು ಬಂದಿದೆ. ಹಿಂದೂಸ್ಥಾನದಲ್ಲಿ ಹಿಂದೂ, ಮುಸ್ಲಿಂ, ಕ್ರೆçಸ್ತರು ಒಂದಾಗಿರಬಾರದು ಎಂಬ ಮಾನಸಿಕತೆ ಬ್ರಿಟಿಷರದ್ದಾಗಿತ್ತು. ಅದನ್ನೇ ಪ್ರಸ್ತುತ ಕಾಂಗ್ರೆಸ್‌ ಸರಕಾರ ಮಾಡುತ್ತಿದೆ ಎಂದು ಅವರು ಆಪಾದಿಸಿದರು. 

Advertisement

ಮರ, ಮರಳು, ಟ್ರಾನ್ಸ್‌ಪೊರ್ಟ್‌ ಹಣ ಹಂಚುವುದರಲ್ಲಿ ಕಾಂಗ್ರೆಸ್‌ ನಿರತವಾಗಿದೆ. ಅವರಲ್ಲಿ ಹಣದಲ್ಲಿ ಗೆಲ್ಲಬಹುದು ಎಂಬ ಯೋಚನೆ ಇದೆ; ಅಭಿವೃದ್ಧಿಯಿಂದ ಗೆಲ್ಲಬಹುದು ಎಂಬ ವಿಶ್ವಾಸ ಇಲ್ಲ ಎಂದು ಹರಿಕೃಷ್ಣ ಬಂಟ್ವಾಳ್‌ ಟೀಕಿಸಿದರು. ಬಿಜೆಪಿ ಮುಖಂಡರಾದ ರವಿಶಂಕರ್‌ ಮಿಜಾರ್‌, ರಮೇಶ್‌ ಕಂಡೆಟ್ಟು, ಭಾಸ್ಕರಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಾಲು ಹಿಡಿಯುತ್ತಿದ್ದಾರೆ
ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರನ್ನು ಪಕ್ಷದ ಕಾರ್ಯಕ್ರಮಗಳಿಂದ ದೂರವಿಟ್ಟವರೆಲ್ಲ ಇದೀಗ ಚುನಾವಣೆ ಸಂದರ್ಭದಲ್ಲಿ ಅವರ ಕಾಲು ಹಿಡಿಯುತ್ತಿದ್ದಾರೆ. ಅದು ಕಾಲು ಹಿಡಿಯುವುದಲ್ಲ; ಕಾಲು ಎಳೆಯಲು ಹೋದಂತಿದೆ ಎಂದು ಅವರು ವ್ಯಂಗ್ಯವಾಡಿದರು. ರಮಾನಾಥ ರೈ ಅವರು ಜಯ ಗಳಿಸಿದರೆ ತಮ್ಮ ಮನೆಯಲ್ಲಿ ಊಟ ನೀಡುವುದಾಗಿ ಪೂಜಾರಿಯವರು ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಮಾನಾಥ ರೈ ಅವರು ಗೆಲುವು ಸಾಧಿಸುವುದಿಲ್ಲ ಎಂಬುದು ಜನಾರ್ದನ ಪೂಜಾರಿಯವರಿಗೆ ಸ್ಪಷ್ಟವಾಗಿ ಗೊತ್ತಿದೆ. ಆದ್ದರಿಂದ ಅವರಿಗೆ ಊಟ ನೀಡುವ ಪ್ರಮೇಯವೇ ಬರುವುದಿಲ್ಲ ಎಂದರು.

ವೇದವ್ಯಾಸ್‌ ಗೆಲುವು ನಿಶ್ಚಿತ
ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಲಿದೆ. ಮಂಗಳೂರು ದಕ್ಷಿಣ ಅಭ್ಯರ್ಥಿ ವೇದವ್ಯಾಸ ಕಾಮತ್‌ ಅವರ ಗೆಲುವು ನಿಶ್ಚಿತ ಎಂದವರು ವಿಶ್ವಾಸ ವ್ಯಕ್ತಪಡಿಸಿದರು. ರಾಹುಲ್‌ ಗಾಂಧಿ ಹೋದ ಕಡೆ ಕಾಂಗ್ರೆಸ್‌ ಗೆದ್ದ ಉದಾಹರಣೆಗಳಿಲ್ಲ. ಇದೀಗ ಶುಕ್ರವಾರ ಬಂಟ್ವಾಳಕ್ಕೆ ರಾಹುಲ್‌ ಬಂದಿರುವುದರಿಂದ ಅಲ್ಲಿ ಅವರಿಗೆ ಸೋಲು ಖಂಡಿತ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next