ಉಡುಪಿ: ಮಳೆಗಾಲ ಆರಂಭಕ್ಕೆ ದಿನಗಣನೆ ಆರಂಭಗೊಳ್ಳುತ್ತಿರುವ ನಡುವೆಯೇ ರೋಗ ಭೀತಿ ತಡೆಯಲು ಆರೋಗ್ಯ ಇಲಾಖೆ ಸನ್ನದ್ಧಗೊಂಡಿದೆ. ಮೊದಲ ಮಳೆಗೆ ರೋಗ ರುಜಿನಗಳು ಹರಡದಿದ್ದರೂ ಧಾರಾಕಾರ ಮಳೆ ಸುರಿದು ವಾರಗಟ್ಟಲೆ ನೀರು ನಿಲ್ಲುವ ಸಂದರ್ಭ ರೋಗ ಹರಡುವ ಭೀತಿ ಅಧಿಕವಿರುತ್ತದೆ. ಇಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಸೂಕ್ತ ಪರಿಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ತಗ್ಗು ಪ್ರದೇಶಗಳಲ್ಲಿ ಮಳೆನೀರು ನಿಲ್ಲುವುದು, ನೀರಿನ ಟ್ಯಾಂಕ್, ಎಳನೀರು, ಪ್ಲಾಸ್ಟಿಕ್ ಗ್ಲಾಸ್, ಟೈರ್ ಹಾಗೂ ಮರದ ಪೊಟರೆಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ನಗರ ಭಾಗಗಳಲ್ಲಿಯೂ ಟ್ಯಾಂಕ್, ಗುಂಡಿ ಇರುವ ಭಾಗಗಳು, ರಸ್ತೆಯ ಅಂಚುಗಳು ಸಹಿತ ಕೆಲವೊಂದು ಅಂಗಡಿ-ಮುಂಗಟ್ಟುಗಳ ಎದುರು ಭಾಗದಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಪರಿಣಮಿಸಿ ರೋಗಗಳು ಹರಡುವ ಸಾಧ್ಯತೆಗಳಿರುತ್ತವೆ.
ವಿವಿಧೆಡೆ ಸರ್ವೇ ಕಾರ್ಯ
ಈ ಹಿಂದಿನ ಮಳೆಗಾಲದಲ್ಲಿ ನೀರು ನಿಂತು ರೋಗರುಜಿನ ಹರಡಿದ ಭಾಗಗಳಲ್ಲಿ ಆರೋಗ್ಯ ಇಲಾಖೆ ವಿಶೇಷ ಗಮನಹರಿಸಿ ಸರ್ವೇ ಕಾರ್ಯ ನಡೆಸುತ್ತಿದೆ. ರಬ್ಬರ್ ತೋಟ, ಅನನಾಸು ಗಿಡಗಳು ಸಹಿತ ಕಾಡಿನ ನಡುವೆ ಇರುವ ಜನವಸತಿ ಪ್ರದೇಶಗಳತ್ತಲೂ ವಿಶೇಷ ಗಮನಹರಿಸಲಾಗಿದೆ. ಮಳೆನೀರು ನಿಲ್ಲದಂತೆ ಬೇಕಿರುವ ಮುಂಜಾಗ್ರತೆ ಗಳನ್ನು ತೆಗೆದುಕೊಳ್ಳುವಂತೆ ಸಿಬಂದಿ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾರೆ.
ಪರೀಕ್ಷೆ ಕಾರ್ಯ ಚುರುಕು
ಜಿಲ್ಲೆಯಲ್ಲಿ ಈ ವರ್ಷ ಮಲೇರಿಯಾದ 75134 ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅದರಲ್ಲಿ ಇಬ್ಬರಿಗಷ್ಟೇ ಪಾಸಿಟಿವ್ ಕಂಡುಬಂದಿದೆ. 635 ಮಂದಿಯನ್ನು ಡೆಂಗ್ಯೂ ತಪಾಸಣೆಗೆ ಒಳಪಡಿಸಲಾಗಿದ್ದು, 29 ಮಂದಿಗೆ ಪಾಸಿಟಿವ್ ಕಂಡುಬಂದಿದೆ. 411 ಮಂದಿಯನ್ನು ಚಿಕುನ್ ಗುನ್ಯ ತಪಾಸಣೆಗೆ ಒಳಪಡಿಸಲಾಗಿದ್ದು, ಇಬ್ಬರಿಗೆ ಪಾಸಿಟಿವ್ ದೃಢಪಟ್ಟಿದೆ. 25 ಮಂದಿಯನ್ನು ಮಿದುಳು ಜ್ವರ ತಪಾಸಣೆಗೆ ಒಳಪಡಿಸಲಾಗಿದ್ದು, ಒಬ್ಬರಿಗಷ್ಟೇ ಪಾಸಿಟಿವ್ ದೃಢಪಟ್ಟಿದೆ.
Related Articles
ಸೂಕ್ತ ಮುನ್ನೆಚ್ಚರಿಕೆ
ಮಳೆಗಾಲದ ಸಂದರ್ಭದಲ್ಲಿ ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯ ಹಾಗೂ ಮಿದುಳು ಜ್ವರಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ. ಮುಖ್ಯವಾಗಿ ನಮ್ಮ ಸುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳದಿರುವುದು ಹಾಗೂ ನೀರು ನಿಲ್ಲುವ ಕಾರಣ ಇದು ಸಂಭವಿಸುತ್ತದೆ. ಜಿಲ್ಲೆಯಲ್ಲಿ 2022ರಲ್ಲಿ 18 ಮಲೇರಿಯಾ, 513 ಡೆಂಗ್ಯೂ, 10 ಚಿಕುನ್‌ಗುನ್ಯ, 2 ಮಿದುಳು ಜ್ವರ ಪ್ರಕರಣಗಳು ಕಂಡುಬಂದಿದ್ದವು. ಡೆಂಗ್ಯೂವಿನಿಂದ ಇಬ್ಬರು ಹಾಗೂ ಮಿದುಳು ಜ್ವರದಿಂದ ಒಬ್ಬರು ಸಾವನ್ನಪ್ಪಿದ ಘಟನೆಯೂ ನಡೆದಿದ್ದು, ಈ ಬಾರಿ ಅಂತಹ ಸಾವು-ನೋವು ಸಂಭವಿಸದಂತೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.
ಸ್ವತ್ಛತೆ ಅಗತ್ಯ
ಮಳೆಗಾಲ ಆರಂಭಕ್ಕೂ ಮುನ್ನ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ತಮ್ಮ ಸುತ್ತಮುತ್ತಲಿನ ಪರಿಸರಗಳನ್ನು ಸ್ವತ್ಛವಾಗಿಡುವ ಜತೆಗೆ ನೀರು ನಿಲ್ಲದಂತೆ ಸಾರ್ವಜನಿಕರು ಕೂಡ ಎಚ್ಚರವಹಿಸಬೇಕು. ಬೇಕಿರುವ ಅಗತ್ಯ ಔಷಧಗಳ ದಾಸ್ತಾನಿಗೂ ಅಗತ್ಯ ಕ್ರಮವಹಿಸಲಾಗಿದೆ.
-ಡಾ| ಪ್ರಶಾಂತ್ ಭಟ್
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ
-ಪುನೀತ್ ಸಾಲ್ಯಾನ್