ಹೊಸದಿಲ್ಲಿ : ‘ದೇಶದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸುವಲ್ಲಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿರುವ ಸೇನೆಗೆ ನಮ್ಮ ಅಖಂಡ ಬೆಂಬಲವಿದೆ’ ಎಂದು ಬಿಜೆಪಿ, ಕಾಂಗ್ರೆಸ್ ಸಹಿತ ಎಲ್ಲ ಪಕ್ಷಗಳು ಪಾಲ್ಗೊಂಡ “ಸರ್ವ ಪಕ್ಷ” ಸಭೆಯಲ್ಲಿ ಒಕ್ಕೊರಲಿನಿಂದ ಘೋಷಿಸಿದವು.
ಪುಲ್ವಾಮಾ ಉಗ್ರ ದಾಳಿಯನ್ನು ಬಲವಾಗಿ ಖಂಡಿಸಿದ ಸರ್ವ ಪಕ್ಷಗಳು, ಭಯೋತ್ಪಾದನೆಗೆ ಗಡಿಯ ಆಚೆ-ಈಚೆಯಿಂದ ದೊರಕುತ್ತಿರುವ ಬೆಂಬಲವನ್ನು ಉಗ್ರವಾಗಿ ಖಂಡಿಸಿದವಲ್ಲದೆ, ದೇಶದ ರಕ್ಷಣೆಗೆ ಕಟಿಬದ್ಧವಾಗಿರುವ ಸೇನೆಗೆ ಅಖಂಡ ಬೆಂಬಲ ಪ್ರಕಟಿಸುವ ನಿರ್ಣಯವನ್ನು ಸರ್ವಾನುಮತದಿಂದ ಕೈಗೊಂಡವು.
ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ಸೇನೆಯ ಮೇಲೆ, ಈ ವರೆಗಿನ ಅತೀ ದೊಡ್ಡ ಮತ್ತು ಅತೀ ಘೋರ ರೀತಿಯಲ್ಲಿ ಉಗ್ರ ದಾಳಿ ನಡೆದಿರುವ ಹಿನ್ನೆಲೆಯಲ್ಲಿ , ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವಾಲಯ ಸರ್ವ ಪಕ್ಷ ಸಭೆಯನ್ನು ಕರೆದಿತ್ತು. ಆವಂತಿಪೋರಾ ಉಗ್ರ ದಾಳಿಯಲ್ಲಿ 40 CRPF ಯೋಧರು ಹುತಾತ್ಮರಾಗಿದ್ದರು.
ಸರ್ವ ಪಕ್ಷ ಸಭೆ ಕೈಗೊಂಡ ನಿರ್ಣಯದಲ್ಲಿ ಪಾಕಿಸ್ಥಾನವನ್ನು ನೇರವಾಗಿ ಹೆಸರಿಸಲಾಗಿಲ್ಲವಾದರೂ ಭಾರತವು ಗಡಿಯಾಚೆಯ ಭಯೋತ್ಪಾದನೆಯ ಪಿಡುಗನ್ನು ಕಳೆದ ಮೂರು ದಶಕಗಳಿಂದ ಎದುರಿಸುತ್ತಿದ್ದು ಗಡಿಯಾಚೆಗಿನ ಶಕ್ತಿಗಳು ಇದಕ್ಕೆ ಕುಮ್ಮಕ್ಕು, ಬೆಂಬಲ ನೀಡುತ್ತಿವೆ ಎಂದು ಹೇಳಿತಲ್ಲದೆ ಅದನ್ನು ಬಲವಾಗಿ ಖಂಡಿಸಿತು.
ಹುತಾತ್ಮ ಯೋಧರ ದುಃಖತಪ್ತ ಕುಟುಂಬಗಳೊಂದಿಗೆ ಇಡಿಯ ದೇಶವೇ ಇದ್ದು ಅವರಿಗೆ ನಮ್ಮ ಸಂಪೂರ್ಣ ಸಾಂತ್ವನ ಇದೆ ಎಂದು ಠರಾವಿನಲ್ಲಿ ಹೇಳಲಾಗಿದೆ.