Advertisement
ಗೆಳೆಯ ಹೊಸ ಮನೆ ಕಟ್ಟಿದ್ದ. ಬಾರಯ್ಯ ನೋಡು ಅಂದ. ಜಬರ್‌ದಸ್ತ್ ಆದ ಮನೆ. ಸ್ಕೂಲಿಗೆ ಹೋಗೋ ಮಕ್ಕಳಿಗಾಗಿಯೇ ಗ್ರೌಂಡ್ ಫ್ಲೋರ್‌ನಲ್ಲಿ ಬೇರೆ-ಬೇರೆ ಎರಡು ರೂಮುಗಳು, ಹೆಂಡತಿ ಅಭಿರುಚಿಗೆ ತಕ್ಕಹಾಗೆ ದೊಡ್ಡ ಓಪನ್ ಕಿಚನ್, ಗೆಳೆಯರು ಬಂದರೆ ಕೂತು ಹರಟೋಕೆ, ಕಾರ್ಡ್ಸ್ ಆಡೋಕೆ ಅಂತಲೇ ರೂಫ್ ಗಾರ್ಡನ್! ಏನಿಲ್ಲಾ ಆ ಮನೇಲೀ…ಹಾಗೇ ಒಂದೊಂದೇ ಭಾಗವನ್ನು ತೋರಿಸುತ್ತಾ ಹೋದ. ಮೊದಲನೆಯ ಮಹಡಿಗೆ ಬಂದಾಗ ಸಣ್ಣ ರೂಮೊಂದರಿಂದ ಭಕ್ತಿ ಸಂಗೀತ ಹರಿಯುತ್ತಿತ್ತು.
“ಯಾರು?’ ಅಂತ ಕೇಳಿದೆ.
“ಅಮ್ಮ’ ಅಂದ. ಮನಸ್ಸು ಭಾರವಾಯ್ತು. ನನಗರಿವಿಲ್ಲದೇ ನನ್ನಮ್ಮ ನೆನಪಾದಳು. ಅವಳಿಗೂ ಹೀಗೆ ವಯಸ್ಸಾಗಿಬಿಟ್ಟರೆ, ಆಕೆಯನ್ನು ಇದೇ ರೀತಿ ಒಂಟಿಯಾಗಿ ಬಿಟ್ಟು ಬಿಡ್ತೀನಾ ಅನ್ನೋ ಯೋಚನೆ ಪದೇ ಪದೇ ಮನಸ್ಸಾಕ್ಷಿಯನ್ನು ಕೆಣಕುತ್ತಾ ಜಗಳಕ್ಕೆ ನಿಂತು ಬಿಟ್ಟಿತು. “ಇಲ್ಲ ಕಣೋ, ನೀನು ಚೆನ್ನಾಗಿ ನೋಡಿಕೊಳ್ತೀಯಾ’ ಅನ್ನೋ ಉತ್ತರ ಅಲ್ಲಿಂದ ಎದ್ದು ಬರೋ ತನಕ ವರಾತ ತೆಗೆಯುತ್ತಲೇ ಇತ್ತು.
Related Articles
Advertisement
ಮಕ್ಕಳಿಗೆ ನಾವು ಈಜೋದು ಕಲಿಸಿಕೊಡ್ತೀವಿ, ಹಾಡು ಹಾಡೋದು ಕಲಿಸಿಕೊಡ್ತೀವಿ, ಭರತ್ಯನಾಟ್ಯ ಕೂಡ ಕಲಿಸಿಬಿಡ್ತೀವಿ. ಆದರೆ ದೊಡ್ಡೋರನ್ನ ಗೌರವಿಸೋದನ್ನು ಕಲಿಸ್ತೀವಾ?
ಲಂಡನ್, ರೋಮ್‌ನಂಥ ದೊಡ್ಡ ನಗರಗಳಲ್ಲಿ ದೊಡ್ಡ ದೊಡ್ಡ ಮ್ಯೂಸಿಯಂಗಳು ಇವೆ. ಅದರಲ್ಲಿ ಎಷ್ಟೋ ಜನರ ಸಾಧನೆಗಳು, ಬದುಕುಗಳು ಕುಳಿತುಕೊಂಡಿವೆ. ಜಗತ್ತಿನ ಎಲ್ಲಾ ಕಡೆಯಿಂದ ಬಂದು ನೋಡ್ತಾರೆ, ಅಬ್ಟಾಬ್ಟಾ ಅಂತಾರೆ. ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಅವನ್ನು. ಜೀವ ಇಲ್ಲದೇ ಇರೋ ಅವನ್ನು ಅಷ್ಟು ಅದ್ಭುತವಾಗಿ ಇಟ್ಟುಕೊಂಡಿದ್ದಾರೆ ಅಂತಾದರೆ, ಜೀವ ಇರೋ ನಮ್ಮ ಹಿರಿಯರನ್ನು ನಾವು ಭಾರ ಅಂದುಕೊಳ್ತೀವಲ್ಲ. ಇದು ಎಂಥ ದುರಂತ ಅಲ್ವೇ? **
ಕೆಲಸದ ನಿಮಿತ್ತ ಮಕ್ಕಳು ವಿದೇಶಕ್ಕೆ ಹಾರಿಹೋಗ್ತಾರೆ. ಹೆತ್ತವರಿಗೋಸ್ಕರ ಅಲ್ಲಿಂದ ಒಂದಷ್ಟು ದುಡ್ಡು ಕಳಿಸ್ತಾರೆ.
ವರ್ಷಕ್ಕೊಂದು ಬಾರಿ ಬಂದಾಗ ಇರೋಕ್ಕೆ ಅನುಕೂಲ ಅಂತ ದೊಡ್ಡ ಬಂಗಲೆ ಕಟಾ¤ರೆ. ಕೊನೆಗೆ, ಅದನ್ನೆಲ್ಲಾ ಕಾಯೋ ವಾಚ್‌ಮನ್‌ಗಳನ್ನಾಗಿ ಇಡೋದು ಈ ಹೆತ್ತವರನ್ನೇ! ಬೆಂಗಳೂರಿನಂಥ ನಗರಗಳಲ್ಲಿ ಬೆಂಕಿಪಟ್ಟಣದಂಥ ಅಪಾರ್ಟ್‌ಮೆಂಟ್‌ಗಳು ಕಟ್ಟೋಕೆ ಶುರು ಮಾಡಿದ್ದೀವಿ. ಅದರಲ್ಲಿ ನೂರಾರು ಕುಟಂಬಗಳು; ಯಾರಿಗೂ ಯಾರ ಪರಿಚಯವೂ ಇಲ್ಲ. ಅದು ಬೇಕೂ ಇಲ್ಲ. ಕಳ್ಳರು ಬರ್ತಾರೆ ಅನ್ನೋ ಕಾರಣಕ್ಕೆ ಕಿಟಕಿಗಳೂ ಕಮ್ಮಿ; ಸರಳುಗಳು ಜಾಸ್ತಿ. ಮಕ್ಕಳು ಕೆಲಸಕ್ಕೆ ಹೋದ ಮೇಲೆ, ಮೊಮ್ಮಕ್ಕಳು ಶಾಲೆಗೆ ಹೋದ ಮೇಲೆ, ಬೆಳಗ್ಗೆ 11ಗಂಟೆ ಸುಮಾರಿಗೆ ಹಾಗೇ ಆ ಕಡೆ ನಡೆದುಕೊಂಡು ಹೋಗಿ, ಸಣ್ಣ ಕಿಟಕಿ ಸರಳುಗಳ ಮಧ್ಯೆ ಪರಿತಾಪದಿಂದ ನೋಡುತ್ತಾ ಇರುವ ಮುದಿ ಜೀವಗಳು ಇಣುಕುವುದು ಕಾಣುತ್ತವೆ. ಶುದ್ಧಗಾಳಿ, ದೊಡ್ಡ ಆಕಾಶ, ಅಲ್ಲೊಂದು ಟೀ ಅಂಗಡಿ, ಅಲ್ಲೆಲ್ಲೋ ಕುಂಬಾರನ ಮನೆ, ಬೀದಿಯ ಕೊನೇಲಿ ಬಟ್ಟೆ ಹೊಲೆಯೋನು, ಮನೆ ಹಿಂದೆ ಬಾವಿ, ಊರ ಮುಂದೆ ದೊಡ್ಡ ಆಲದ ಮರ, ಕೆಳಗೊಂದು ಬಸ್ಟಾಪು, ಕಷ್ಟು ಸುಖ ಹೇಳಿಕೊಳ್ಳೋಕೆ ಪಕ್ಕದಮನೆಯವರು, ಚೂರು ಜೋರಾಗಿ ಕೆಮ್ಮಿದರೂ ಓಡಿ ಬಂದು ನೋಡುವ ಸ್ನೇಹ ಹೃದಯಗಳು.. ಹೀಗೆ ಚಿಕ್ಕ ಊರಲ್ಲಿ ದೊಡ್ಡ ಪ್ರಪಂಚವೇ ಇರುತ್ತೆ. ಇಂಥ ಒಂದು ಪ್ರಪಂಚ ಇವತ್ತು ಪಟ್ಟಣಗಳಲ್ಲಿ ಕಾಂಪೌಂಡೊಳಗೆ ಸೇರಿಕೊಂಡು ಬಿಟ್ಟಿದೆ. ಈ ಅಪಾರ್ಟ್‌ಮೆಂಟ್ ಬದುಕಿದೆಯಲ್ಲಾ, ಇದು ಮನುಷ್ಯರನ್ನು ನೋಡದೇ, ಗೋಡೆಗಳನ್ನು ನೋಡಿಕೊಂಡು ಬಾಳುವ ಬದುಕು. ಅದನ್ನು ನೋಡಿಕೊಂಡೇ ವಯಸ್ಸಾದವರು ಒಂಟಿತನ ಕಳೆಯೋದು. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಬದುಕಿ ಕೊನೆಗಾಲದಲ್ಲಿ ಮಕ್ಕಳ ಜೊತೆ ಇರಬೇಕು ಅಂತ ಬಂದು, ಪರಿಚಯ ಇಲ್ಲದ ಮನುಷ್ಯರ ಜೊತೆ, ಅರ್ಥವಾಗದೇ ಇರೋ ಊರುಗಳಲ್ಲಿ ಉಸಿರಾಡೋದೇ ಕಷ್ಟವಾಗಿ, ನಕ್ಕು ಮಾತನಾಡಿಸೋಕೆ ಮನುಷ್ಯರೇ ಇಲ್ಲದೆ ಒದ್ದಾಡ್ತಿದ್ದಾರೆ ಹಿರಿಯ ಜೀವಗಳು. ಇವರ ಬಗ್ಗೆ ಎಂದಾದರು ಯೋಚನೆ ಮಾಡಿದ್ದೀವಾ? ನಮ್ಮ ಬದುಕಿನ ಓಟದಲ್ಲಿ ನಾವು ಇರ್ತೀವಿ. ಆಫೀಸು, ಮನೆ, ಕಾರು, ಹೆಂಡತಿ, ಮಕ್ಕಳು, ಪಾರ್ಟಿ, ಔಟಿಂಗ್ ಅಂತ. ನಮ್ಮ ಹಿರಿಯರು ವೃದ್ಧಾಪ್ಯವನ್ನು ಕೊಂಡಾಡೋದೇ ಇರೋದು ದುರಂತ. ಇವತ್ತು ಇಂಥ ದುರಂತದಲ್ಲೇ ನಾವು ಇರೋದಕ್ಕೆ ಸಾಕ್ಷಿ ಈಗ ಬೆಳೀತಾ ಇರೋ ವೃದ್ಧಾಶ್ರಮಗಳು. ಇನ್ನೊಬ್ಬರಿಗೆ ಭಾರ ಆಗಿಬಿಟ್ನಲ್ಲ ಅಂತ ನೊಂದುಕೊಳ್ಳುವ ಹಿರಿಯರ ಮುಂದೆ ಕೂತ್ಕೊಂಡು, ನಿಮಗೆ ಸೇವೆ ಮಾಡೋಭಾಗ್ಯ ನಮಗೆ ಸಿಕ್ತಲ್ಲ ಅಂತ ಎಷ್ಟು ಜನ ಸಂತೋಷ ಪಡುತ್ತಿದ್ದೀವಿ? ಹೆಂಡತಿ ಮಕ್ಕಳಿಗೋಸ್ಕರ ಬೀಚು, ಸಿನಿಮಾ, ಕ್ಲಬ್, ಬಾರು, ರೆಸಾರ್ಟು ಅಂತ ತಿರುಗುವವರು, ಮನೆಯ ಹೊಸ್ತಿಲು ಕೂಡ ದಾಟದ ಮನೆಯ ಹಿರಿಯರ ಬಗ್ಗೆ ಯೋಚನೆ ಮಾಡ್ತಾ ಇದ್ದೀವಾ? ಮಕ್ಕಳು ಮಲಗಿದ್ದಾರೋ ಇಲ್ವೋ ಅಂತ ಬೆಕ್ಕಿನ ಥರ ನಿಧಾನಕ್ಕೆ ಅಡಿಯಿಡುತ್ತಾ ನೋಡೋ ನಾವು, ಅಮ್ಮ ಮಲಗಿದಾಳ, ಅಪ್ಪ ಎದ್ದಿದ್ದಾರಾ ಅಂತ ನೋಡ್ತೀವಾ? ಇತ್ತೀಚೆಗೆ ರಂಗಭೂಮಿಯ ಗೆಳೆಯನೊಬ್ಬ ಮೈಸೂರಿನಿಂದ ಫೋನು ಮಾಡಿದ. ಫೋನು ತೆಗೆದರೆ ಆ ಕಡೆಯಿಂದ ಹೋ ಅಂತ ಅಳುತ್ತಿದ್ದ. “ಯಾಕೋ’ ಅಂದೆ. “ಬೆಳೆದ ನನ್ನ ಮಗಳು ಇಷ್ಟು ವರ್ಷ ಜೊತೆಗೇ ಇದ್ದಳು. ಈಗ ಹಾಸ್ಟೆಲ್‌ಗೆ ಸೇರಿಸಿದ್ದೀನಿ. ಮನೆ ಎಲ್ಲಾ ಬಿಕೋ ಅನಿಸ್ತಿದೆ. ದುಃಖ ತಡೆಯೋಕೆ ಆಗ್ತಿಲ್ಲ’ ಅಂದ. “ಏನೋ, ಇಷ್ಟು ವರ್ಷ ನೀನು ನಿನ್ನ ಅಪ್ಪ -ಅಮ್ಮನ ಬಿಟ್ಟು, ಬೆಂಗಳೂರಿನ ಬೀದಿ, ಬೀದಿಗಳಲ್ಲಿ ನಾಟಕ ಮಾಡ್ಕೊಂಡು, ಮನೆ ಬಗ್ಗೆ ಯೋಚನೆ ಮಾಡದೇ ತಿರಗ್ತಾ ಇದ್ಯಲ್ಲ. ಆವಾಗೆಲ್ಲಾ, ನಿಮ್ಮ ಅಮ್ಮ “ಮಗ ಹೇಗಿದ್ದಾನೋ, ಏನು ಊಟ ಮಾಡ್ತಿದ್ದಾನೋ, ಈಗ ಏನು ಮಾಡ್ತಾ ಇದ್ದಾನೋ? ಅಂತೆಲ್ಲಾ ಯೋಚನೆ ಮಾಡ್ತಾ ಇದ್ದಳಲ್ವಾ? ಇದನ್ನು ನೀನು ಯೋಚನೆ ಮಾಡಿದ್ಯಾ?’ಅಂದೆ.
“ಹೌದು ಕಣೋ. ಅಮ್ಮನ ನೋಡ್ಬೇಕು, ಸಾರಿ ಹೇಳ್ಬೇಕು ಅನಿಸ್ತಿದೆ’ ಅಂದ.
***
ದಿಢೀರ ಅಂತ ನಮ್ಮಮ್ಮ ಒಂದು ಸಲ “ನಮ್ಮೂರು ಧಾರವಾಡವನ್ನ ನೋಡಬೇಕು ಪ್ರಕಾಶು’ ಅಂದಳು. ಮನೇಲಿ “ಅವಳಿಗೆ ಹುಷಾರಿಲ್ಲ. ಈಗ ಇವೆಲ್ಲ ಏಕೆ’ ಅಂದರು. ನಾನು, ಇಲ್ಲಮ್ಮಾ ನೀನು ರೆಡಿಯಾಗು. ಹೋಗೋಣ ಅಂದೆ ನೋಡಿ. ಅವಳ ಮುಖದಲ್ಲಿ ಸಾವಿರ ಕ್ಯಾಂಡಲ್ ಬಲ್ಬಿನ ಸಂತೋಷದ ಬೆಳಕು ಹೊತ್ತಿಕೊಂಡುಬಿಡೋದಾ?
ಆ ಬೆಳಕಲ್ಲಿ ನಿಲ್ಲೋ ಮಗನ ಸೌಭಾಗ್ಯ ಇದೆಯಲ್ಲಾ… ಅದ್ಬುತ. ಆಮೇಲೆ, ಅಮ್ಮ ಊರಿಗೆ ಏಕೆ ಹೋಗಬೇಕು ಅಂತಿದ್ದಾಳೆ ಅನ್ನೋ ಪ್ರಶ್ನೆ ಮನಸ್ಸಲ್ಲಿ ಶುರುವಾಯ್ತು. ಊರಲ್ಲಿ ಅವಳು ಬೆಳೆಸಿದ್ದ ಮರಗಳನ್ನ ನೋಡೋಕಾ? ತನ್ನ ಓರಿಗೆಯ ಗೆಳತಿಯರು ಹೇಗಿರಬಹುದು ಅಂತ ಕಾಣೋಕಾ ಅಥವಾ ಅವರಿಗೆ ಹೇಳದೆ ಉಳಿಸಿ ಕೊಂಡಿರುವ ರಹಸ್ಯಗಳನ್ನು ಹೇಳ್ಳೋಕಾ? ತನ್ನನ್ನು ಕೀಳಾಗಿ ಕಂಡವರಿಗೆ “ನೋಡಿ, ನನ್ನ ಮಕ್ಕಳನ್ನು ಕಷ್ಟಪಟ್ಟು ಹೇಗೆ ಬೆಳೆಸಿದ್ದೀನಿ, ಹೇಗೆ ಬದುಕ್ತಾ ಇದ್ದೀನಿ’ ಅಂತ ತೋರಿಸೋಕಾ? ಅದಕ್ಕೆ ಅಮ್ಮ- “ಯಾಕೂ ಇಲ್ಲ ಪ್ರಕಾಶ- ಕೊನೇದಾಗಿ ಒಂದು ಸಲ ಊರನ್ನು, ಅಲ್ಲಿರುವ ನನ್ನವರನ್ನು ನೋಡೋಣ ಅಂತ ಅನಿಸ್ತಿದೆ’ ಅಂತಂದು, ಎಲ್ಲಾ ಅನುಮಾನಕ್ಕೂ ಒಂದೇ ಉತ್ತರ ಕೊಟ್ಟಳು. ಭದ್ರವಾಗಿ ಧಾರವಾಡಕ್ಕೆ ಕರೆದುಕೊಂಡು ಹೋದೆ. ದೂರದ ಪ್ರಯಾಣದಿಂದ ಅನಾರೋಗ್ಯ ಉಲ್ಪಣಿಸಿತು. ಅಮ್ಮನನ್ನ ಊರಿನ ಆಸ್ಪತ್ರೆಯಲ್ಲೇ ಸೇರಿಸಿ, ನಾನು ಆಕೆಯ ಮಂಚದ ಪಕ್ಕ ಕೂತೆ. ಸುಮ್ಮನಿರಬೇಕಲ್ಲಾ ಅವಳು? ನೋವಿನ ಮಧ್ಯೆಯೂ ಬಂದುಹೋದವರಿಗೆಲ್ಲಾ ನನ್ನನ್ನು ಪರಿಚಯ ಮಾಡಿಸುತ್ತಿದ್ದಳು. ಇವನು ನನ್ನ ಮಗ. ಎಷ್ಟು ಚೆನ್ನಾಗಿ ನೋಡ್ಕೊàತಾನೆ ನೋಡಿ ಅಂತ ಹೆಮ್ಮೆಯಿಂದ ಬೀಗ್ತಾ ಇದ್ದಳು. ಇನ್ನು ಏನೇನೋ ಮಾತಾಡ್ತಾ ಇದ್ದಳು.
ದೇಹಕ್ಕೆ ಹುಷಾರಿರಲಿಲ್ಲ ಅಷ್ಟೇ, ಮನಸ್ಸಿಗೆ ಏನೂ ಆಗಿರಲಿಲ್ಲ. ಸೀದಾ ಗೋವಾಕ್ಕೆ ಕರೆದೊಯ್ದು, ಅಲ್ಲಿ ಟ್ರೀಟ್‌ಮೆಂಟ್ ಕೊಡಿಸಿ, ಆಮೇಲೆ ನರ್ಸ್ ಜೊತೆಗೆ ಚೆನ್ನೈಗೆ ಕರೆತಂದರೆ… “ಈ ಥರದ ರಿಸ್ಕ್ ತಗೋಬೇಕಾ ಪ್ರಕಾಶ್?’ ಅಂತ ಕೇಳಿದರು ಮನೇಲಿ.
ನನ್ನ ಉತ್ತರ ಇಷ್ಟೇ-ನನ್ನ ಮಕ್ಕಳಿಗೆ ಹೆತ್ತವರನ್ನು ಹೇಗೆ ನೋಡ್ಕೊಳ್ಳಬೇಕು ಅಂತ ಪಾಠ ಮಾಡೋಲ್ಲ. ಬದುಕಿ ತೋರಿಸ್ತೀನಿ ಅಷ್ಟೇ.
ನೀವೇನಂತೀರಿ? – ಪ್ರಕಾಶ್ ರೈ