Advertisement

ಸ್ವತ್ಛತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ

03:39 PM Dec 28, 2017 | Team Udayavani |

ಅರಸೀಕೆರೆ: ನಗರಸಭೆ ಯಿಂದ ಆಯೋಜಿಸಿದ್ದ ಸ್ವತ್ಛ ಸರ್ವೇಕ್ಷಣ 2018 ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರು, ಅಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರೆ, ನಗರದ ವಿವಿಧ ಶಾಲೆಗಳ ಮಕ್ಕಳು ಸಮವಸ್ತ್ರ ತೊಟ್ಟು ಸೈಕಲ್‌ ಜಾಥಾ ನಡೆಸಿ ಪರಿಸರ ಸ್ವತ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.

Advertisement

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಸೇರಿದ ನೂರಾರು ವಿದ್ಯಾರ್ಥಿಗಳ ಸೈಕಲ್‌ ಜಾಥಾಗೆ ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ ಚಾಲನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಬಿ.ಎಚ್‌ ರಸ್ತೆ ಪ್ರವಾಸಿ ಮಂದಿರದ ಮುಂಭಾಗದಿಂದ ತಾಲೂಕು ಕಚೇರಿವರೆಗೂ ಹಾಗೂ ಸಾಯಿನಾಥ ರಸ್ತೆ, ಹುಳಿಯಾರ್‌ ರಸ್ತೆ ಮೂಲಕ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳ ಸೈಕಲ್‌ ಜಾಥಾ ನಡೆಸಿದರು.

ಪರಿಸರ ಸಂರಕ್ಷಿಸಿ: ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ ಮಾತನಾಡಿ, ಪರಿಸರ ಸ್ವತ್ಛತೆ ಪ್ರತಿಯೊಬ್ಬ ನಾಗರಿಕನ ಹೊಣೆ. ನಾವು ವಾಸಿಸುವ ಪರಿಸರ ಎಷ್ಟು ಸ್ವತ್ಛವಾಗಿರುತ್ತದೆಯೋ ಅಷ್ಟೇ ನಮ್ಮ ಆರೋಗ್ಯ ಕೂಡ ಸದೃಢವಾಗಿರುತ್ತದೆ ಎಂದರು.

ಮನವಿ: ಬಹುತೇಕ ಕಾಯಿಲೆಗಳು ಅಶುಚಿತ್ವ ಪರಿಸರದಿಂದ ಹರಡುತ್ತದೆ. ಹಾಗಾಗಿ ಸ್ವತ್ಛ ಪರಿಸರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಶ್ರಮಿಸುತ್ತಿದ್ದು ಸರಕಾರದೊಂದಿಗೆ ಸ್ವಯಂ ಸೇವಾ ಸಂಘಟನೆಗಳು ಕೈ ಜೋಡಿಸುವ ಮೂಲಕ ಸ್ವತ್ಛ ಭಾರತ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಬೇಕೆಂದು
ಮನವಿ ಮಾಡಿದರು.

ಪೌರಕಾರ್ಮಿಕರ ನೇಮಕವಾಗಿಲ್ಲ: ನಗರಸಭೆ ಉಪಾಧ್ಯಕ್ಷ ಕೆ.ಜಿ.ಪಾರ್ಥಸಾರಥಿ ಮಾತನಾಡಿ, ನಗರವನ್ನು ಸ್ವತ್ಛವಾಗಿಡುವುದು ನಗರಸಭೆ ಹಾಗೂ ಪೌರ ಕಾರ್ಮಿಕರ ಕರ್ತವ್ಯ ಎಂದು ಬಹುತೇಕ ಮಂದಿಯ ಭಾವನೆಯಾಗಿದೆ ಇದು ಸರಿಯಲ್ಲ. ಪರಿಸರ ಸ್ವತ್ಛತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ದಿನದಿಂದ ದಿನಕ್ಕೆ ನಗರ ವಿಸ್ತಾರವಾಗಿ ಬೆಳೆಯುತ್ತಿದ್ದು ಜನಸಂಖ್ಯೆ ಕೂಡ ಹೆಚ್ಚುತ್ತಿದೆ, ಆದರೆ ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರ ನೇಮಕಾತಿ ಇಲ್ಲದೇ ಇರುವುದರಿಂದ ತೊಂದರೆಯಾಗಿದೆ ಆದರೂ ಇರುವ ಪೌರ ಕಾರ್ಮಿಕರು ನಗರವನ್ನು ಸ್ವತ್ಛವಾಗಿಡುವ ನಿಟ್ಟಿನಲ್ಲಿ ಹಗಲು ಇರುಳು ಎಂದು ನೋಡದೆ ಶ್ರಮಿಸುತ್ತಿದ್ದು ಇವರ ಈ ಸೇವಾ ಮನೋಭಾವದಿಂದ ನಾವೆಲ್ಲರೂ ಆರೋಗ್ಯದಿಂದಿರಲು ಸಾಧ್ಯವಾಗಿದೆ ಎಂದು ಹೇಳಿದರು.

Advertisement

ವಿಷಾದ: ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಕೆ. ಯೋಗೀಶ್‌ಆಚಾರ್‌ ಮಾತನಾಡಿ, ಸ್ವತ್ಛ ಭಾರತ್‌ ಅಭಿಯಾನ ದೇಶವ್ಯಾಪಿ ನಡೆಯುತ್ತಿದೆ, ಆದರೂ ಜನತೆಯಿಂದ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಈ ಕಾರ್ಯಕ್ಕೆ ಸ್ಪಂದನೆ ಸಿಗುತ್ತಿಲ್ಲದಿರುವುದು ವಿಷಾದದ ಸಂಗತಿಯಾಗಿದ್ದು, ನಮ್ಮ ಮನೆಯನ್ನು ನಾವು ಹೇಗೆ ಸ್ವತ್ಛವಾಗಿ ಇಟ್ಟುಕೊಳ್ಳುತ್ತೇವೆ, ಅದೇ ರೀತಿ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟು ಕೊಳ್ಳುವ ಸಂಕಲ್ಪ ಮಾಡಬೇಕಿದೆ ಎಂದರು.

ಎಚ್ಚರಿಕೆ: ದೇಶದ ರಾಜಧಾನಿ ದೆಹಲಿ ಸೇರಿದಂತೆ ಕೆಲವು ಮಹಾನಗರಗಳಲ್ಲಿ ಪರಿಸರ ಮಾಲಿನ್ಯಗೊಂಡಿದ್ದು ಜನತೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಸ್ಥಿತಿಯ ಗಂಭೀರತೆಯನ್ನು ನಾವುಗಳು ಅರ್ಥಮಾಡಿಕೊಳ್ಳದೇ ಹೋದರೆ ಮುಂದಿನ ಕೆಲವೇ ವರ್ಷಗಳಲ್ಲಿ ಮನುಷ್ಯ ತಕ್ಕ ಬೆಲೆ ತೆರ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಾಥಾದಲ್ಲಿ ನಗರಸಭೆ ಪರಿಸರ ಅಭಿಯಂತರ ಯೋಗೀಶ್‌, ನಗರಸಭೆ ಸದಸ್ಯರಾದ ರಂಗನಾಥ, ಗೀತಾ, ಸುನೀಲ್‌, ನಗರಸಭೆ ಆರೋಗ್ಯ ನಿರೀಕ್ಷಕರಾದ ಕೃಷ್ಣಮೂರ್ತಿ, ರಮೇಶ್‌, ರೇವಣ್ಣಸಿದ್ದಪ್ಪ, ಕಂದಾಯ ಅಧಿಕಾರಿ ಹೇಮಂತ್‌ ಕುಮಾರ್‌, ತಾಲೂಕು ದೈಹಿಕ ಪರಿವೀಕ್ಷಕ ತಿಮ್ಮೇಶ್‌, ಕರವೇ ಮುಖಂಡ ಮೈನುದ್ದೀನ್‌, ವಿವಿಧ ಶಾಲೆಗಳ ಶಿಕ್ಷಕರು ಮತ್ತು ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next