Advertisement

ವೈಚಾರಿಕ ಪ್ರಜ್ಞೆ ಮೂಡಿಸಿದ್ದ ಶರಣರು: ಡಾ|ಗುರುದೇವಿ

05:12 PM Jun 02, 2022 | Team Udayavani |

ಬೆಳಗಾವಿ: ಹನ್ನೆರಡನೇ ಶತಮಾನದ ಶರಣರು ಸಮಾಜದಲ್ಲಿ ಬೇರು ಬಿಟ್ಟಿದ್ದ ಮೂಢನಂಬಿಕೆ ತೊಡೆದುಹಾಕಿ ವೈಚಾರಿಕ ಪ್ರಜ್ಞೆ ಮೂಡಿಸಿದ್ದರು. ದುಡಿಮೆಯಲ್ಲಿಯೇ ಪರಮಾತ್ಮನನ್ನು ಕಂಡರು. ಅಂಧಾನುಕರಣೆ ಕಠೊರವಾಗಿ ಖಂಡಿಸಿದರು ಎಂದು ಹಿರಿಯ ಮಹಿಳಾ ಸಾಹಿತಿ ಡಾ| ಗುರುದೇವಿ ಹುಲೆಪ್ಪನವರಮಠ ಹೇಳಿದರು.

Advertisement

ನಗರದ ಲಿಂಗಾಯತ ಭವನದಲ್ಲಿ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ “ಶರಣರ ವಚನಗಳಲ್ಲಿ ಮೂಢನಂಬಿಕೆಯ ವಿರೋಧ’ ವಿಷಯ ಕುರಿತು ಮಾತನಾಡಿದರು.

ಪ್ರಖರ ವಿಚಾರವಾದಿಗಳಾದ ಶರಣರು ಮನುಕುಲದ ಮಾನ ಕಳೆವ, ಶೋಷಣೆ-ಹಿಂಸೆಗೆ ದಾರಿ ಮಾಡಿಕೊಡುವ ಅಂಧಶ್ರದ್ಧೆ ಮತ್ತು ಅಂಧಾನುಕರಣೆ ವಿರುದ್ಧ ಪ್ರತಿಭಟಿಸಿದರು. ಯಾವುದೇ ವ್ಯಕ್ತಿ, ಸ್ಥಳ, ಮತ್ತು ಸಮಯದ ಬಗೆಗೆ ಧನಾತ್ಮಕಭಾವ ತಳೆಯುವುದು ವಿಚಾರವಾದಿಗಳ ನಡೆ. ಅಂತಹ ನಡೆಯಲ್ಲಿ ವ್ಯಷ್ಟಿ ಮತ್ತು ಸಮಷ್ಟಿಯ ಉದ್ಧಾರ ಅಡಗಿದೆ ಎಂದರು.

ಸಂವಾದದಲ್ಲಿ ಪಾಲ್ಗೊಂಡಿದ್ದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದ ಉಪನ್ಯಾಸಕ ಡಾ| ಸಾಹುಕಾರ ಕಾಂಬಳೆ ಮಾತನಾಡಿ, ಶರಣ ತತ್ವಗಳು ವೈಜ್ಞಾನಿಕ ಮತ್ತು ವೈಚಾರಿಕ ತಳಹದಿ ಮೇಲೆ ರೂಪುಗೊಂಡಿರುವಂತವು. ಮನುಕುಲದ ಸರ್ವಾಂಗೀಣ ಕಲ್ಯಾಣಕ್ಕಾಗಿ ಬಸವಣ್ಣನವರ ನೇತೃತ್ವದಲ್ಲಿ ಹೋರಾಡಿದ ಶರಣರು ಭಯ, ಬಡತನ ಮತ್ತು ಅಜ್ಞಾನ ಮೂಲವಾದ ಮೂಢನಂಬಿಕೆ ನಿರ್ಮೂಲನೆ ಮಾಡಲು ಶ್ರಮಿಸಿದ್ದು ಮಾನವ ಇತಿಹಾಸದಲ್ಲಿ ಅಪರೂಪದ ಘಟನೆ ಎಂದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಗಮೇಶ ತೆಲಸಂಗ್‌ ಮಾತನಾಡಿ, ಶರಣರು ಜಂಗಮ ತತ್ವ ಸಾಧಿಸಿ ಬೋಧಿಸಿದರು. ಜಂಗಮ ಎಂದರೆ ಚಲನಶೀಲ, ಕ್ರಿಯಾಶೀಲವಾದ ಸಮಾಜವಾಗಿದೆ. ಅದನ್ನು ತೃಪ್ತಿ ಪಡಿಸುವುದರಲ್ಲಿ ಜೀವನದ ಸಾರ್ಥಕತೆ ಅಡಗಿದೆ ಎಂದರು.

Advertisement

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ| ಹನುಮಂತಪ್ಪ ಸಂಜೀವನ್ನವರ ಮಾತನಾಡಿ, ಶರಣರು ಸದಾಚಾರ ಸಂಪನ್ನತೆಯಿಂದ ವಿಜೃಂಭಿಸುವ ಸಮಾಜ ನಿರ್ಮಿತಿಗೆ ಶ್ರಮಿಸಿದ ಮಹಾಮಾನವತಾವಾದಿಗಳು. ಬಹಿರಂಗದ ವ್ಯವಹಾರ ಸಾರಾಸಗಟಾಗಿ ಅಲ್ಲಗಳೆದು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದರು. ಮೂಢನಂಬಿಕೆಗಳ ಅರ್ಥಹೀನತೆ, ಅಪಾಯ ಮನಗಂಡಿದ್ದ ಅವರು ಜನರು ಅಂತಹ ಅಂಧಾನುಕರಣೆ ಕೈಬಿಡುವಂತೆ ಕರೆ ನೀಡಿದ್ದರು ಎಂದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿನಿ ಮಹೇಶ್ವರಿ ತೇಗೂರ ಮಾತನಾಡಿದರು. ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಆಶೀರ್ವಚನ ನೀಡಿ, ನಮ್ಮ ಜೀವನ ಬೆಳಗಿಸಿಕೊಳ್ಳಲು ಶರಣರು ಹಲವು ಮೌಲ್ಯಗಳೆಂಬ ದೀಪಗಳನ್ನು ವಚನಮುಖೇನ ದಯಪಾಲಿಸಿದ್ದಾರೆ. ಅವುಗಳಲ್ಲಿ ವೈಚಾರಿಕತೆಯೂ ಒಂದು. ಮಾಡುವ ಮಾಟದ ಸತ್ಯಾಸತ್ಯತೆ ಪರಿಶೀಲಿಸಿ ಮುನ್ನಡೆಯುವವನು ಎಡವಲಾರ. ಅಂಧಶ್ರದ್ಧೆಯಿಂದ ದೂರವಿರಲು ಶ್ರಮಿಸಿದವನು ಜೀವನದಲ್ಲಿ ಸುಖೀಯಾಗಿರುತ್ತಾನೆ ಎಂದರು.

ಅಖೀಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷೆ ಶರಣೆ ರತ್ನಪ್ರಭಾ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶುಭಾ ಎಸ್‌. ತೆಲಸಂಗ ವಚನ ವಿಶ್ಲೇಷಣೆ ಮಾಡಿದರು. ಆಶಾ ಯಮಕನಮರಡಿ ಕಾರ್ಯಕ್ರಮ ನಿರ್ವಹಿಸಿದರು. ಈ ವೇಳೆ ಎಂ.ವೈ. ಮೆಣಸಿನಕಾಯಿ ವಂದಿಸಿದರು. ಚನ್ನಬಸಪ್ಪ ಚೊಣ್ಣದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next