ಬೆಂಗಳೂರು: ವಿಧಾನಸಭೆ ಚುನಾವಣೆಗೆ ಆಲ್ ಇಂಡಿಯಾ ಮಹಿಳಾ ಎಂಪವರ್‌ವೆುಂಟ್ ಪಕ್ಷದ (ಎಂಇಪಿ) ಅಭ್ಯರ್ಥಿಗಳ ಮೊದಲ ಪಟ್ಟಿ ಸೋಮವಾರ ಬಿಡುಗಡೆಗೊಂಡಿದ್ದು, 20 ಜಿಲ್ಲೆಗಳ 149 ಕ್ಷೇತ್ರಗಳಿಗೆ ಪಕ್ಷವು ಅಭ್ಯರ್ಥಿಗಳನ್ನು ಘೋಷಿಸಿದೆ.
ಮಹಿಳಾ ಸ್ವಾವಲಂಬನೆ ಗುರಿಯಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ಎಐಎಂಇಪಿ, ಒಟ್ಟಾರೆ 224 ಕ್ಷೇತ್ರಗಳಲ್ಲಿ ಶೇ. 35ರಷ್ಟು ಮಹಿಳೆಯರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಲು ನಿರ್ಧರಿಸಿದೆ. ಆ ಪೈಕಿ ಮೊದಲ ಪಟ್ಟಿಯಲ್ಲಿ 149 ಕ್ಷೇತ್ರಗಳಲ್ಲಿ 40 ಮಹಿಳೆಯರು ಮತ್ತು ಓರ್ವ ತೃತೀಯ ಲಿಂಗಿಗೆ(ಪಕ್ಷವೊಂದು ಟಿಕೆಟ್ ನೀಡಿದ್ದು ಇದೇ ಮೊದಲು) ಟಿಕೆಟ್ ಘೋಷಿಸಿದೆ.
ಮಂಗಳವಾರ ಉಳಿದ 75 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಲಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಖ್, ಒಟ್ಟಾರೆ ಘೋಷಣೆಯಾದ ಅಭ್ಯರ್ಥಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮತ್ತು ದಲಿತರಾಗಿದ್ದಾರೆ. ಪ್ರಸ್ತುತ 51 ದಲಿತರು, 40 ಮಹಿಳೆಯರು, 7 ರೈತರು, 1 ತೃತೀಯ ಲಿಂಗಿಗಳಿಗೆ ಎಂಇಪಿ ಟಿಕೆಟ್ ಘೋಷಿಸಲಾಗಿದೆ ಎಂದು ತಿಳಿಸಿದರು.
20 ಜಿಲ್ಲೆಗಳು ಯಾವುವು?: ಬೆಳಗಾವಿ, ಕಲಬುರಗಿ, ವಿಜಯಪುರ,ಬೀದರ್, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಬಳ್ಳಾರಿ,ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬಾಗಲಕೋಟೆ, ರಾಯಚೂರು, ಚಿತ್ರದುರ್ಗದಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಮಂಗಳವಾರ ಉಳಿದ 10 ಜಿಲ್ಲೆಗಳ 75 ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ನರ್ಸ್ ಜಯಲಕ್ಷ್ಮೀ ಕಣಕ್ಕೆ? ನರ್ಸ್ ಜಯಲಕ್ಷ್ಮೀ ಎಂಇಪಿಯೊಂದಿಗೆ ಗುರುತಿಸಿಕೊಂಡಿದ್ದು, ಬೆಂಗಳೂರಿನ ಚಾಮರಾಜಪೇಟೆಯಿಂದ ಸ್ಪರ್ಧಿಸಲು ಅವಕಾಶ ಕೋರಿದ್ದಾರೆ. ಮಂಗಳವಾರ ಈ ಕುರಿತು ಅಂತಿಮನಿರ್ಧಾರ ಹೊರಬೀಳಲಿದೆ.