ಬೆಂಗಳೂರು: 64ನೇ ಅಖೀಲ ಭಾರತ ಸಹಕಾರ ಸಪ್ತಾಹ ನ.14ರಿಂದ 20ರವರೆಗೆ ನಡೆಯಲಿದ್ದು, ಉದ್ಘಾಟನಾ ಸಮಾರಂಭ ನ.14ರಂದು ಬೆಳಗಾವಿಯಲ್ಲಿ ನಡೆಯಲಿದೆ.
ರಾಜ್ಯ ಸಹಕಾರ ಮಹಾಮಂಡಳವು ಸಹಕಾರ ಸಪ್ತಾಹ ಕುರಿತಂತೆ ಶುಕ್ರವಾರ ವಿಕಾಸಸೌಧದಲ್ಲಿ ನಡೆಸಿದ ಪೂರ್ವಭಾವಿ ಸಿದ್ಧತಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಹಕಾರ ಸಚಿವ ರಮೇಶ್ ಜಾರಕಿಹೊಳಿ, “64ನೇ ಅಖೀಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭವನ್ನು ನ.14ರಂದು ಬೆಳಗಾವಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಕಾರ್ಯಕ್ರಮ ನಡೆಯುವ ಸ್ಥಳವನ್ನು ಶೀಘ್ರವೇ ನಿರ್ಧರಿಸಲಾಗುವುದು. ಉದ್ಘಾಟನಾ ಸಮಾರಂಭದ ದಿನವೇ ಸಹಕಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಹೇಳಿದರು. ನ.15 ಹಾಗೂ ನ.16ರಂದು ಸಪ್ತಾಹವನ್ನು ಯಾವ ಜಿಲ್ಲೆಯಲ್ಲಿ ನಡೆಸಬೇಕು ಎಂಬ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು. ನ.17ರಂದು ವಿಜಯಪುರ, ನ.18ರಂದು ಶಿವಮೊಗ್ಗ, ನ.19ರಂದು ಬೆಂಗಳೂರು ಹಾಗೂ ನ.20ರಂದು ರಾಯಚೂರಿನಲ್ಲಿ ಸಪ್ತಾಹ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಡಿಸಿಸಿ ಬ್ಯಾಂಕ್‌ಗಳ ಠೇವಣಿಗೆ ಆದಾಯ ತೆರಿಗೆ ಇಲಾಖೆಯು ಟಿಡಿಎಸ್ ವಿಧಿಸಲು ಮುಂದಾಗಿದೆ. ಹಿಂದಿನಂತೆ ಡಿಸಿಸಿ ಬ್ಯಾಂಕ್‌ಗಳಿಗೆ ಟಿಡಿಎಸ್ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರುವ ಸಂಬಂಧ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
ಸಾಲ ಮನ್ನಾ ಬಳಿಕ ಮರು ಸಾಲ ವಿತರಣೆಯಲ್ಲಿ ವಿಳಂಬವಾಗಿರುವುದು ಗಮನಕ್ಕೆ ಬಂದಿದೆ. ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿರುವುದರಿಂದ ತ್ವರಿತವಾಗಿ ಮರು ಸಾಲ ವಿತರಿಸುವಂತೆ ಅಪೆಕ್ಸ್ ಬ್ಯಾಂಕ್‌ಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಡಾ.ಶೇಖರಗೌಡ ಪಾಟೀಲ್, ಉಪಾಧ್ಯಕ್ಷ ಎಚ್.ವಿ.ನಾಗರಾಜ್, ನಿರ್ದೇಶಕ ಎಸ್.ಟಿ.ಸೋಮಶೇಖರ್, ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ, ವಿಧಾನಪರಿಷತ್ ಸದಸ್ಯ ರವಿ ಇತರರು ಉಪಸ್ಥಿತರಿದ್ದರು.