ಕುಷ್ಟಗಿ: ಕರ್ನಾಟಕದಲ್ಲಿ ಡಿ.ದೇವರಾಜ್ ಅರಸು ಮುಖ್ಯಮಂತ್ರಿ ಅವಧಿಯಲ್ಲಿ ಅರೆ-ಬರೆ ಭೂ ಸುಧಾರಣೆ ಕಾನೂನು ಜಾರಿಯಾಗಿದೆ ಹೊರತು ನಂತರ ಬಂದ ಸರ್ಕಾರಗಳಿಂದ ಯಾವುದೇ ಭೂ ಸುಧಾರಣೆ ಜಾರಿಯಾಗದೇ ಭೂರಹಿತರನ್ನು, ರೈತರು, ಕೂಲಿಕಾರರನ್ನು ನಿರ್ಲಕ್ಷಿಸಿಸಿವೆ ಎಂದು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ, ಕೇರಳ ಮಾಜಿ ಸಂಸದ ವಿಜಯ್ ರಾಘವನ್ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಪಿಸಿಎಚ್ ಪ್ಯಾಲೇಸ್ ನಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಗ್ರಾಮೀಣ ದುಡಿಮೆಗಾರ ಮತ್ತು ಕೃಷಿ ಕೂಲಿಕಾರರ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೇರಳ ರಾಜ್ಯದಲ್ಲಿ ಭೂರಹಿತ ಹಾಗೂ ಮನೆ ನಿವೇಶನ ರಹಿತರಿಗೆ ಭೂಮಿ, ಮನೆ ಸೌಲಭ್ಯ ಕಲ್ಪಿಸಿದೆ. ಹೆಚ್ಚುವರಿ ಜಮೀನು ಭೂರಹಿತರಿಗೆ ಹಂಚಿದೆ. ಆದರೆ ಕರ್ನಾಟಕದಲ್ಲಿ ಭೂಸುಧಾರಣೆ, ಮನೆ ನಿವೇಶನ ಇದ್ಯಾವುದು ಸರಿಯಾಗಿ ನೀಡಿಲ್ಲ ಬಹುತೇಕ ಕೂಲಿಕಾರರ ಮನೆಗಳಿಗೆ ವಿದ್ಯುತ್ ಸೌಲಭ್ಯ ಇಲ್ಲ. ಕೇರಳದಲ್ಲಿ 24 ತಾಸು ವಿದ್ಯುತ್ ಪೂರೈಕೆಯ ವ್ಯವಸ್ಥೆ ಇದೆ. ಇಲ್ಲಿಯ ಹಾಗೆ ಪದೇ ಪದೇ ವಿದ್ಯುತ್ ಕಡಿತವಾಗುವ ಪರಿಸ್ಥಿತಿ ಇದೆ. ದಿನಪೂರ್ತಿ ಉಚಿತ ವಿದ್ಯುತ್ ಪೂರೈಕೆ ವ್ಯವಸ್ಥೆ ಜಾರಿಯಲ್ಲಿದೆ. ಕೆಲವು ರಾಜ್ಯಗಳಲ್ಲಿ ದಿನದ 24 ತಾಸು ಉಚಿತ ವಿದ್ಯುತ್ ಪೂರೈಸುವುದಾಗಿ ಹೇಳುತ್ತಲೇ ಕಾಲಹರಣ ಮಾಡುತ್ತಿದ್ದು ದಿನದ 20 ತಾಸು ಪೂರೈಸಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಪಕ್ಷಗಳು ಭೂರಹಿತರನ್ನು ಮನೆ ರಹಿತರನ್ನು ನಿರ್ಲಕ್ಷಿಸಿವೆ ಎಂದರು.
ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ, ಉಪಾಧ್ಯಕ್ಷ ಜಿ.ಎನ್. ನಾಗರಾಜ್, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರ, ರಾಜ್ಯಸಮಿತಿ ಸದಸ್ಯ ಪುಟ್ಟ ಮಾದು, ವೆಂಕಟೇಶ ಕೋಣೆ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಮ್ಮ ಕೊಂಡ್ಲಿ, ಭೀಮಶೆಟ್ಟಿ ಹೆಬ್ಬಳ್ಳಿ, ಕರಿಯಪ್ಪ ಹಚ್ಚೊಳ್ಳಿ, ಆರ್.ಕೆ.ದೇಸಾಯಿ ಮತ್ತೀತರಿದ್ದರು.