Advertisement

ಅಪಘಾತ ನಿಯಂತ್ರಣಕ್ಕೆ ಎಲ್ಲಾ ಇಲಾಖೆಗಳು ಶ್ರಮಿಸಬೇಕು

09:31 PM Sep 28, 2019 | Lakshmi GovindaRaju |

ಚಾಮರಾಜನಗರ: ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣ ತಡೆಗಟ್ಟಲು ಹಾಗೂ ಮತ್ತಷ್ಟು ರಸ್ತೆ ಸುರಕ್ಷತೆ ಹೆಚ್ಚಿಸಲು ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರಿಗೆ ಇಲಾಖೆ ಆಯೋಜಿಸಿದ್ದ ಜಿಲ್ಲಾ ರಸ್ತೆ ಸುರಕ್ಷತೆ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಅಪಘಾತ ಪ್ರಕರಣಗಳ ಬಗ್ಗೆ ಕೇವಲ ಅಂಕಿ ಅಂಶಗಳಷ್ಟೇ ಅಲ್ಲದೇ ಅದರ ಕುರಿತು ವೈಜ್ಞಾನಿಕ ವಿಶ್ಲೇಷಣೆ ಅಗತ್ಯ. ಇದರಿಂದ ಅಪಘಾತದ ನಿಖರ ಕಾರಣ ತಿಳಿಯುವುದರಿಂದ, ಸಮಸ್ಯೆಯನ್ನು ಕೂಡಲೇ ನಿವಾರಿಸಿ ಮುಂದಾಗಬಹುದಾದ ಅವಘಡ‌ಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ರಸ್ತೆ ಸುರಕ್ಷತೆ ಹೆಚ್ಚಿಸುವಲ್ಲಿ ಎಲ್ಲಾ ಇಲಾಖೆಗಳಿಗೂ ಅದರದೇ ಆದ ಜವಾಬ್ದಾರಿಗಳಿವೆ.

ಹೀಗಾಗಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಇದರಿಂದ ಅಪಘಾತ ಸಮಯದಲ್ಲಿ ಉಂಟಾಗುವ ಜೀವಹಾನಿ ತಪ್ಪಿಸಬಹುದಾಗಿದೆ. ವಾಹನ ಚಲಾಯಿಸುವವರ ಆರೋಗ್ಯ ಸ್ಥಿತಿಗತಿ ಕೂಡ ಅಪಘಾತಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಇನ್ನು ಮುಂದೆ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ಮತ್ತು ಆಟೋ ಚಾಲಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಬೇಕು.

ಮುಖ್ಯವಾಗಿ ಕಣ್ಣಿನ ತಪಾಸಣೆಗೆ ಸಮಯ ನಿಗದಿಪಡಿಸಿ ಕೈಗೊಳ್ಳಬೇಕು. ಜತೆಗೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ, ಅಪಘಾತಕ್ಕೀಡಾದವರಿಗೆ ತಕ್ಷಣ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲಾ ರಸ್ತೆ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು.

ರಸ್ತೆ ದುರಸ್ತಿಗಳೇನಾದರೂ ಇದ್ದಲ್ಲಿ ಅದನ್ನು ಕೂಡಲೇ ಸರಿಪಡಿಸುವ ಕಾರ್ಯ ಆಗಬೇಕು. ಅಲ್ಲದೇ ಕಾಮಗಾರಿಗಳು ಯೋಜನೆಯ ಆಧಾರದಲ್ಲಿ ನಡೆಯುತ್ತಿದೆಯೇ ಎಂಬುದರ ಬಗ್ಗೆ ಗಮನ ಹರಿಸಬೇಕು. ರಸ್ತೆ ಅವಘಡ ನಡೆಯಬಹುದಾದ ಸ್ಥಳಗಳನ್ನು ಗುರುತಿಸಿ, ಅಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ್‌ ಕುಮಾರ್‌ ಮಾತನಾಡಿ, ಯಾವುದೇ ಇಲಾಖೆಯ ಅಧಿಕಾರಿ ಆಗಲಿ ಅಪಘಾತ ತಡೆಗಟ್ಟಲು ಯಾವ ರೀತಿ ಯೋಜನೆ ರೂಪಿಸಬಹುದು ಎಂಬುದಕ್ಕೆ ಸಲಹೆಗಳನ್ನು ನೀಡಬೇಕು. ಜತೆಗೆ ಅಪಘಾತ ನಡೆದಾಗ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಕೂಡಲೇ ಸ್ಪಂದಿಸಬೇಕು. ಈ ರೀತಿಯ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಮೂಡುವುದು ಅವಶ್ಯ ಎಂದು ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ವಾಹನ ಸಂಚಾರ ನಿಯಮಗಳ ಬಗ್ಗೆ ಅರಿವು ಮುಡಿಸುವುದು ತುಂಬಾ ಮುಖ್ಯ. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ಸಂಚಾರ ನಿಯಮ ಹಾಗೂ ಡ್ರೆçವಿಂಗ್‌ ಲೈಸೆನ್ಸ್‌ ಮುಂತಾದ ದಾಖಲೆಗಳ ಪ್ರಾಮುಖ್ಯತೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ತಿಳಿಸಿದರು.

ಅಪಘಾತಗಳನ್ನು ವಿಶ್ಲೇಷಿಸಲು ಪ್ರತಿ ತಾಲೂಕಿನಲ್ಲೂ ಒಂದು ಸಮಿತಿ ರಚಿಸಲಾಗಿದೆ. ಇದರ ವರದಿಯಂತೆ ಹೆಚ್ಚಿನ ಸಾವುಗಳಿಗೆ ಹೆಲ್ಮೆಟ್‌ ಧರಿಸದಿರುವುದೇ ಕಾರಣವಾಗಿದೆ. ಇಂಥಹ ಸೂಕ್ಷ ವಿಚಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಇದರಿಂದ ಗಣನೀಯವಾಗಿ ಅವಘಡಗಳನ್ನು ತಪ್ಪಿಸಬಹುದು ಎಂದು ಆನಂದ್‌ ಕುಮಾರ್‌ ಹೇಳಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಸೌಂದರ್ಯ, ಕೆ.ಎಸ್‌.ಆರ್‌.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಲೋಕೊಪಯೋಗಿ ಇಲಾಖೆ ಇಇ ಸುರೇಂದ್ರ, ರೋಟರಿ ಸಂಸ್ಥೆಯ ಅಧ್ಯಕ್ಷ ಆರ್‌.ಎಂ. ಸ್ವಾಮಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next