Advertisement

ರೈತ ಸಮುದಾಯದ ನೆರವಿಗೆ ಎಲ್ಲಾ ಸಹಕಾರ: ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ

08:42 PM Sep 07, 2022 | Team Udayavani |

ಬೆಂಗಳೂರು: ಸಂಕಷ್ಟದಲ್ಲಿರುವ ರೈತ ಸಮುದಾಯದ ನೆರವಿಗೆ ಒಕ್ಕಲಿಗರ ಸಂಘ ಮುಂದಾದರೆ ಸಾಧ್ಯವಿರುವ ಎಲ್ಲಾ ಸಹಕಾರ ನೀಡಲಾಗುವುದು ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ತಿಳಿಸಿದರು.

Advertisement

ರಾಜ್ಯ ಒಕ್ಕಲಿಗರ ಸಂಘ ಎಂಪ್ಲಾಯೀಸ್ ಅಸೋಸಿಯೇಷನ್ ವತಿಯಿಂದ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಸನ್ಮಾನಿಸಿ ಮಾತನಾಡಿದ ಅವರು, ರೈತರ ಕಾರ್ಯಕ್ಕೆ ಸಂಘ ಎಲ್ಲಿಗೆ ಕರೆದರೂ ಬರಲು ಸಿದ್ಧವಿರುವುದಾಗಿ ಹೇಳಿದರು.

ಒಕ್ಕಲುತನ ಮಾಡುವವರೆಲ್ಲರೂ ಒಕ್ಕಲಿಗರೇ. ಅವರ ಬದುಕು ಹಸನಾಗಬೇಕು. ರೈತನ ಮಗನಾಗಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ತೃಪ್ತಿ ಇದೆ. ಎಲ್ಲರೂ ಒಟ್ಟಾಗಿ ಶಕ್ತಿಯುತವಾಗಿ ಬೆಳೆಯೋಣ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ನಮ್ಮ ಮಾತು ನಡೆಯುವಂತೆ ಮಾಡೋಣ. ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.

ಒಕ್ಕಲಿಗರ ಸಂಘದ ನೌಕರರು ಮತ್ತು ಆಡಳಿತ ಮಂಡಳಿಯ ನಡುವೆ ಸ್ನೇಹಮಯ ಸಂಬಂಧವಿರಬೇಕು. ಲೋಪಗಳಾದಾಗ ಸ್ನೇಹದಿಂದಲೇ ಸರಿಪಡಿಸಿ ಸಂಘದ ಪ್ರಗತಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು.

ಅಭಿನಂದನೆ ಸ್ವೀಕರಿಸಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಸಜ್ಜೆ ಪಾಳ್ಯದ ಜಮೀನು ಸಂಘದ ಕೈತಪ್ಪಲಿದೆ ಎಂಬ ಆತಂಕವಿತ್ತು. ಒಕ್ಕಲಿಗರ ಸಂಘದ ನಡೆ ಸಜ್ಜೆಪಾಳ್ಯದ ಕಡೆಗೆ ಎಂಬಂತಾಗಿದೆ. ನ್ಯಾಯಮೂರ್ತಿ ಗೋಪಾಲಗೌಡ ನೇತೃತ್ವದಲ್ಲಿ ಹೈಕೋರ್ಟ್ ನ ನಿವೃತ್ತ ನ್ಯಾಯಧೀಶರನ್ನೊಳಗೊಂಡ ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿಯ ಸಲಹೆಯಂತೆ ಇನ್ನು ಸಂಘ ಮುಂದೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

Advertisement

ಸಜ್ಜೆ ಪಾಳ್ಯದ ಜಮೀನಿನ ವಿಚಾರದಲ್ಲಿ ವ್ಯತ್ಯಾಸವಾದರೆ ಬಿಡಿಎ ಹೊಣೆಯಾಗಬೇಕಾಗುತ್ತದೆ ಎಂದು ಬಿಡಿಎ ಆಯುಕ್ತರು ಹಾಗೂ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ಈ ಜಮೀನು ರಕ್ಷಣೆಗೆ ಎಲ್ಲಾ ರೀತಿಯ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದರು.

ಶ್ರೀಗಂಧದ ಕಾವಲು ಸೇರಿದಂತೆ ಸಂಘದ ಎಲ್ಲಾ ಆಸ್ತಿ ಸಂರಕ್ಷಣೆ ಮಾಡಲಾಗುವುದು. ಕೆಂಪೇಗೌಡ ಆಸ್ಪತ್ರೆಯ ಚರ್ಮ ವಿಭಾಗಕ್ಕೆ ಉತ್ತಮ ವಿಭಾಗವೆಂದು ಗೌರವ ಸಲ್ಲಿಕೆಯಾಗಿರುವುದು ಸಂಘದ ಹೆಗ್ಗಳಿಕೆಯಾಗಿದೆ. ಸಂಘದ ವೃಂದ ಮತ್ತು ನೇಮಕಾತಿ ನಿಯಮಾವಳಿಗಳು ಅನುಮೋದನೆಯಾಗಿದ್ದು, ಅನುಷ್ಠಾನಕ್ಕೆ ತರಲಾಗುವುದು. ಅಲ್ಲದೆ, ರಾಜ್ಯ ಒಕ್ಕಲಿಗರ ಸಂಘದ ವಿಶ್ವವಿದ್ಯಾಲಯದ ವಿಧೇಯಕ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿದ್ದು, ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂಬ ಭರವಸೆ ನೀಡಿದರು.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಿ.ಹನುಮಂತಯ್ಯ, ಡಾ.ಕೆ.ವಿ.ರೇಣುಕಾಪ್ರಸಾದ್, ಪ್ರಧಾನಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ಖಜಾಂಚಿ ಆರ್.ಪ್ರಕಾಶ್, ಗೌರವಾಧ್ಯಕ್ಷರಾದ ಡಾ.ಟಿ.ಹೆಚ್.ಆಂಜಿನಪ್ಪ, ಕಾರ್ಯಾಧ್ಯಕ್ಷರಾದ ಸಿ.ದೇವರಾಜು(ಹಾಪ್ ಕಾಮ್ಸ್), ಹೆಚ್.ಎನ್.ರವೀಂದ್ರ, ಸಹಾಯಕ ಕಾರ್ಯದರ್ಶಿ ರಾಘವೇಂದ್ರ, ಕಾನೂನು ಸಲಹೆಗಾರ ಎನ್. ಬಾಲಕೃಷ್ಣ(ನೆಲ್ಲಿಗೆರೆಬಾಲು), ನಿರ್ದೇಶಕರಾದ ಎಂ.ಪುಟ್ಟಸ್ವಾಮಿ, ಲೋಕೇಶ್.ಬಿ.ನಾಗರಾಜಯ್ಯ, ಎಲುವಳ್ಳಿ ಎನ್. ರಮೇಶ್, ನೌಕರರ ಸಂಘದ ಅಧ್ಯಕ್ಷ ಡಾ.ಬಿ.ಸಿ.ಬಸವರಾಜು, ಪ್ರಧಾನಕಾರ್ಯದರ್ಶಿ ಸಿ.ಎನ್.ಗಿರೀಶ್, ಡಾ.ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next